

ಬೀದರ್: ದಕ್ಷಿಣ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಚಂದ್ರಾಸಿಂಗ್ ಶುಕ್ರವಾರ ಕ್ಷೇತ್ರದಲ್ಲಿ ಟೆಂಪಲ್ ರನ್ ಮಾಡಿದರು.
ಚಾಂಗಲೇರಾ ಶ್ರೀ ವೀರಭದ್ರೇಶ್ವರ ಮಂದಿರ, ಕರಕನಳ್ಳಿಯ ಶ್ರೀ ಗಂಗಾಧರ ಬಕ್ಕಪ್ರಭು ದೇವರು, ರೇಕುಳಗಿಯ ಶ್ರೀ ಶಂಭುಲಿಂಗೇಶ್ವರ ಮಂದಿರ, ಹೊನ್ನಿಕೇರಿ ಶ್ರೀ ಸಿದ್ಧೇಶ್ವರ ದೇವಸ್ಥಾನ ಹಾಗೂ ಖಾನಾಪುರದ ಮೈಲಾರ ಮಲ್ಲಣ್ಣ ಮಂದಿರಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಬಗದಲ್ ಗ್ರಾಮದ ದರ್ಗಾಗೂ ಭೇಟಿ ನೀಡಿ ಹಜರತ್ ಇದ್ರಿಸ್ ಅಹ್ಮದ್ ಶಾ ಖಾದ್ರಿ ಅವರ ಆಶೀರ್ವಾದ ಪಡೆದರು. ಮನ್ನಾಎಖ್ಖೇಳ್ಳಿ ಗ್ರಾಮದ ಸಮೀಪದ ಧಮ್ಮಾಂಕುರ ಮೌಂಟ್, ಕಪಲಾಪುರ ಮತ್ತು ಆಣದೂರು ಚರ್ಚ್, ದೇವಸ್ಥಾನಗಳಿಗೂ ಭೇಟಿ ನೀಡಿದರು.
ಕಾಂಗ್ರೆಸ್ ಪಕ್ಷ ನನಗೆ ಟಿಕೆಟ್ ನೀಡದೆ ಅನ್ಯಾಯ ಮಾಡಿದೆ. ಹೀಗಾಗಿ ಜನರ ಬಳಿ ನ್ಯಾಯ ಕೇಳಲು ಹೋಗುತ್ತೇನೆ ಎಂದು ಚಂದ್ರಾಸಿಂಗ್ ಹೇಳಿದರು. ಬೆಂಬಲಿಗರು, ಮುಖಂಡರು, ಕಾರ್ಯಕರ್ತರು ಇದ್ದರು.