ಚಂದ್ರಶೇಖರ್ ಅಮಾನತಿಗೆ ಆಗ್ರಹ

JDS
Published on

ಚಿತ್ರದುರ್ಗ: ಭ್ರಷ್ಟಾಚಾರ, ದುರ್ನಡತೆ, ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿರುವ ಕರ್ನಾಟಕ ಲೋಕಾಯುಕ್ತ ವಿಶೇಷ ತನಿಖಾದಳದ ಎಡಿಜಿಪಿ ಎಂ.ಚಂದ್ರಶೇಖರ್ ಅವರನ್ನು ಕೂಡಲೇ ಭಾರತೀಯ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಜೆಡಿಎಸ್ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಈ ಅಧಿಕಾರಿಯ ಭ್ರಷ್ಟಾಚಾರ ಸೇರಿ ಇನ್ನಿತರೆ ಪ್ರಕರಣಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ, ಶಿಸ್ತು ಕ್ರಮ ಕೈಗೊಳ್ಳಲು ಕೇಡರ್ ಸೆಂಟ್ರಲ್ ಪ್ರಾಧಿಕಾರದ ಕೇಂದ್ರ ಗೃಹ ಸಚಿವಾಲಯಕ್ಕೆ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದಿಂದ ಶಿಫಾರಸು ಮಾಡುವಂತೆ ರಾಜ್ಯಪಾಲರಿಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ಮಾಜಿ ಸಿಎಂ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಕುರಿತು ಹಂದಿಗಳ ಜೊತೆ ಗುದ್ದಾಡಿದರೆ, ಮೈಯೆಲ್ಲಾ ಕೊಚ್ಚೆಯಾಗುತ್ತದೆಂಬ ಕೀಳು ಪದ ಬಳಸಿ ಚಂದ್ರಶೇಖರ್ ಹಗುರವಾಗಿ ಮಾತನಾಡಿದ್ದಾರೆ. ಅಧಿಕಾರ ದರ್ಪದಿಂದ ಮೆರೆಯುತ್ತಿದ್ದಾರೆ ಎಂದು ದೂರಿದರು.

ಹಿಮಾಚಲ ಪ್ರದೇಶ ಐಪಿಎಸ್ ಕೇಡರ್‌ನ ಚಂದ್ರಶೇಖರ್ ಪತ್ನಿಗೆ ಅನಾರೋಗ್ಯವೆಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ರಾಜಕೀಯ ಪ್ರಭಾವ ಬೀರಿ ಕರ್ನಾಟಕಕ್ಕೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡಿರುವುದಲ್ಲದೆ ಭೂಗಳ್ಳರು, ಸಮಾಜಘಾತುಕರೊಡನೆ ಕೈಜೋಡಿಸಿ ನೂರಾರು ಪ್ರಕರಣ ತನಿಖೆ ನಡೆಸದಿರುವುದು ದೊಡ್ಡ ದುರಂತ ಎಂದು ಆರೋಪಿಸಿದರು.

ಎಚ್‌ಡಿಕೆ ಅವರು ಕಳೆದ ತಿಂಗಳ 28ರಂದು ರಾಜಧಾನಿಯಲ್ಲಿ ಸುದ್ದಿಗೋಷ್ಠಿ ಮೂಲಕ ಲೋಕಾಯುಕ್ತ ಕಚೇರಿಯಲ್ಲಿ ತನಿಖೆಗೆ ಬಾಕಿ ಉಳಿದಿರುವ ಪ್ರಕರಣಗಳ ಕುರಿತು ರಾಜ್ಯಪಾಲರಿಗೆ ಮಾಹಿತಿ ಕೇಳಿದ್ದನ್ನು ಮನದಲ್ಲಿಟ್ಟುಕೊಂಡು ದುರಹಂಕಾರದ ಹೇಳಿಕೆ ನೀಡಿರುವ ಎಡಿಜಿಪಿ ಎಂ.ಚಂದ್ರಶೇಖರ್ ಅವರನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸಿ ತನಿಖೆ ನಡೆಸಬೇಕು ಎಂದು ಕೋರಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಜಯಣ್ಣ, ದಾವಣಗೆರೆ ಜಿಲ್ಲಾ ಉಸ್ತುವಾರಿ ಡಿ.ಯಶೋಧರ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್, ನಗರಸಭೆ ಸದಸ್ಯರಾದ ದೀಪು, ನಸ್ರುಲ್ಲಾ, ಮುಖಂಡರಾದ ಡಿ.ಗೋಪಾಲಸ್ವಾಮಿ ನಾಯಕ, ಮಠದಟ್ಟಿ ವೀರಣ್ಣ, ಸಣ್ಣ ತಿಮ್ಮಣ್ಣ, ಜಿ.ಬಿ.ಶೇಖರ್, ಓ.ಪ್ರತಾಪ್‌ಜೋಗಿ, ಮಂಜಣ್ಣ, ಅಬ್ಬು, ರುದ್ರಣ್ಣ, ವೀರಭದ್ರಣ್ಣ, ಕರಿಬಸಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net