

ಪಾಂಡವಪುರ: ತಾಲೂಕಿನ ಬನ್ನಂಗಾಡಿ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಫೆ.8 ರಂದು ಆಯೋಜಿಸಿರುವ 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಚಂದ್ರಶೇಖರಯ್ಯ ಅವರನ್ನು ಶಾಸಕ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಕಸಾಪ ಪದಾಧಿಕಾರಿಗಳು ಭಾನುವಾರ ಅಧಿಕೃತವಾಗಿ ಅಹ್ವಾನಿಸಿದರು.
ಕಸಾಪ ಜಿಲ್ಲಾಧ್ಯಕ್ಷ ರವಿಕುಮಾರ್ ಚಾಮಲಾಪುರ ಮಾತನಾಡಿ, ಸಾಹಿತಿ ಚಂದ್ರಶೇಖರಯ್ಯ ಅವರು ಸಾಹಿತ್ಯ, ಶಿಕ್ಷಣ, ಸಾಂಸ್ಕೃತಿಕ ಲೋಕಕ್ಕೆ ನೀಡಿರುವ ಕೊಡುಗೆಯನ್ನು ಎಲ್ಲ ಮಜಲುಗಳಿಂದ ಅವಲೋಕಿಸಿ, ಅವರ ಸೇವೆ ಮನಗಂಡು ಅವರನ್ನು ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಅಂತೆಯೇ ಸುತ್ತೂರು ಮಠದ ಪೀಠಾಧ್ಯಕ್ಷರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಹರಟೆ ಖ್ಯಾತಿಯ ಹಿರೇಮಗಳೂರು ಕಣ್ಣನ್, ವಾಗ್ಮಿ ಪ್ರೊ.ಕೃಷ್ಣೇಗೌಡ, ಸುಧಾ ಬರಗೂರು ಸೇರಿದಂತೆ ಅನೇಕ ಗಣ್ಯರನ್ನು ಸಮ್ಮೇಳನಕ್ಕೆ ಅಧಿಕೃತವಾಗಿ ಅಹ್ವಾನಿಸಲಾಗಿದೆ ಎಂದು ತಿಳಿಸಿದರು.
ಸಾಂಸ್ಕೃತಿಕ ಲೋಕಕ್ಕೆ ಮಹತ್ತರ ಕೊಡುಗೆ ನೀಡುತ್ತಿರುವ ಶಾಸಕ ಸಿ.ಎಸ್.ಪುಟ್ಟರಾಜು ಅವರ ಸಹಕಾರದಿಂದ ಜಿಲ್ಲೆಯಲ್ಲಿ 87 ನೇ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೆ ರಾಜ್ಯ ಸಮಿತಿ ತೀರ್ಮಾನ ಮಾಡಿದೆ. ಎಲ್ಲರ ಸಹಕಾರದೊಂದಿಗೆ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕಿದೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಮೇನಾಗರ ಪ್ರಕಾಶ್, ಕಾರ್ಯದರ್ಶಿ ಪ.ಮ.ನಂಜುಂಡಸ್ವಾಮಿ, ಮಾಜಿ ಅಧ್ಯಕ್ಷ ಮಂಜುನಾಥ್, 8ನೇ ಸಾಹಿತ್ಯ ಸಮ್ಮೆಳನದ ಸರ್ವಾಧ್ಯಕ್ಷೆ ಡಾ.ಮಣಿಕರ್ಣಿಕಾ, ಮಲ್ಲಿಕಾರ್ಜುನೇಗೌಡ, ಎಚ್.ಎನ್.ನಾಗರಾಜು, ಕೃಷ್ಣೇಗೌಡ, ಕಾಂತರಾಜು ಇತರರು ಇದ್ದರು.