ಚಂದ್ರಶೇಖರ ಗುರೂಜಿ ಹತ್ಯೆ ಕೇಸ್, ಆರೋಪಿಗಳ ವಿರುದ್ಧ 800 ಪುಟದ ಚಾರ್ಜ್​ಶೀಟ್ ಸಲ್ಲಿಕೆ

Chandrashekar Guruji
Published on

ಹುಬ್ಬಳ್ಳಿ: ಸರಳವಾಸ್ತು ಸಂಸ್ಥೆಯ ಸಂಸ್ಥಾಪಕ, ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನಿಖಾಧಿಕಾರಿಗಳು ಹಂತಕರಿಬ್ಬರ ವಿರುದ್ಧ ಸುಮಾರು 800 ಪುಟಗಳ ಆರೋಪ ಪಟ್ಟಿಯನ್ನು ಇಲ್ಲಿಯ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಮೂರು ತಿಂಗಳ ಹಿಂದೆ ಗುರೂಜಿಯನ್ನು ಇಲ್ಲಿಯ ಉಣಕಲ್ಲ ಕೆರೆ ಬಳಿಯ ಖಾಸಗಿ ಹೋಟೆಲ್​ನಲ್ಲಿ ಚಾಕು ಇರಿದು ಕೊಲೆ ಮಾಡಿದ್ದ ಆರೋಪಿಗಳು ಪರಾರಿಯಾಗಿದ್ದರು. ಘಟನೆ ನಡೆದು ನಾಲ್ಕು ತಾಸಿನಲ್ಲಿಯೇ ಪೊಲೀಸರು ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಇದೀಗ ಗುರೂಜಿ ಹತ್ಯೆಗೆ ಸಂಬಂಧಿಸಿ ಕಲಘಟಗಿ ತಾಲೂಕಿನ ಧುಮ್ಮವಾಡದ ಮಹಾಂತೇಶ ಶಿರೂರ ಹಾಗೂ ಮಂಜುನಾಥ ಮರೇವಾಡ ಎಂಬುವವರ ವಿರುದ್ಧ ದೋಷಾರೋಪಣ ಪಟ್ಟಿಯನ್ನು ಪೊಲೀಸರು ಸಲ್ಲಿಸಿದ್ದಾರೆ.

ಬಂಧಿತರ ವಿರುದ್ಧ ಆಸ್ತಿಗೆ ಸಂಬಂಧಿಸಿ ಹಾಗೂ ಇತರ ವಿಷಯಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ಸಾಕ್ಷಿಗಳು ಸೇರಿ 800 ಪುಟದ ಚಾರ್ಜ್​ಶೀಟ್ ಸಲ್ಲಿಕೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಆಯುಕ್ತರು ಎಸಿಪಿ ವಿನೋದ ಮುಕ್ತೇದಾರ ಅವರ ನೇತೃತ್ವದಲ್ಲಿ ಐದು ತಂಡ ರಚಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net