

ತೋಂಟದ ಸಿದ್ದರಾಮ ಶ್ರೀಗಳ ಹರ್ಷ
ಬೆಳಗಾವಿ: ಇಸ್ರೋ ವಿಜ್ಞಾನಿಗಳ ಪ್ರತಿಭೆ ಮತ್ತು ಪರಿಶ್ರಮದ ಫಲವಾಗಿ ಚಂದ್ರಯಾನ-3 ಯಶಸ್ವಿಯಾದುದಕ್ಕೆ ಡಂಬಳ-ಗದಗ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಪದಾರ್ಪಣೆ ಮಾಡಿದ ಜಗತ್ತಿನ ಪ್ರಪ್ರಥಮ ದೇಶ ನಮ್ಮದು. ಅತ್ಯಂತ ಕುತೂಹಲದ ಈ ಕ್ಷಣಗಳನ್ನು ಅವಲೋಕಿಸಿದ ದೇಶದ 140 ಕೋಟಿ ಭಾರತೀಯರು ಸಂಭ್ರಮಿಸುತ್ತಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ನಮ್ಮ ವಿಜ್ಞಾನಿಗಳು ಸಾಧಿಸಿದ ಈ ಅಪೂರ್ವ ಸಾಧನೆ ದೇಶದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂತಹದ್ದು. ಇದು ಭವಿಷ್ಯದ ಅಭಿವೃದ್ಧಿ ಮತ್ತು ಸಾಧನೆಗೆ ದಿಕ್ಸೂಚಿಯಾಗಿದೆ ಎಂದು ಹೇಳಿದ ಶ್ರೀಗಳು ಇಸ್ರೋ ವಿಜ್ಞಾನಿಗಳ ಅಪ್ರತಿಮ ಸಾಧನೆಯನ್ನು ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುವಂತಾಗಿದೆ ಎಂದು ಶ್ರೀಗಳು ಹರ್ಷ ವ್ಯಕ್ತಪಡಿಸಿದ್ದಾರೆ.