

ರಾಯಚೂರು: ಚಂದ್ರಯಾನ-3 ಯೋಜನೆ ಯಶಸ್ವಿಯಾಗಿ ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಯಲಿ ಎಂದು ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಪತಿ ಡಾ.ಸುಬುಧೇಂದ್ರ ತೀರ್ಥರು ಬುಧವಾರ ರಾಯರ ಮೂಲ ಬೃಂದಾವನ ಮತ್ತು ಮೂಲ ರಾಮದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಭಾರತದ ವಿಜ್ಞಾನಗಳು ಪರಿಶೋಧನೆ ಮೂಲಕ ಅನೇಕ ಮೈಲುಗಲ್ಲು ಸಾಸಿದ್ದು, ವೇದ, ಇತಿಹಾಸ, ಪುರಾಣಗಳ ಕಾಲದಿಂದಲೂ ದೇಶ ವಿಜ್ಞಾನ ಸಂಪತ್ತು ಹೊಂದಿದೆ. ಇಸ್ರೋ ವಿಜ್ಞಾನಿಗಳು ಚಂದ್ರಯಾನ-3 ಯೋಜನೆ ಹಮ್ಮಿಕೊಂಡಿರುವುದು ಹೊಸ ಮೈಲುಗಲ್ಲಾಗಿದೆ.
ವಿಕ್ರಮ್ ಚಂದ್ರನ ಮೇಲೆ ಇಳಿಯುವ ಮೂಲಕ ದೇಶದ ಬಾಹ್ಯಾಕಾಶ ಉಡಾವಣೆಯಲ್ಲಿ ಯಶಸ್ಸು ಕಾಣಲಿ. ದೇಶ ಇನ್ನೂ ಹೆಚ್ಚಿನ ಸಂಶೋಧನೆ ಮಾಡುವ ಮೂಲಕ ವಿಶ್ವದಲ್ಲಿ ಅಗ್ರಸ್ಥಾನ ಪಡೆಯಲಿದೆ ಎಂದು ಡಾ.ಸುಬುಧೇಂದ್ರ ತೀರ್ಥರು ಹಾರೈಸಿದರು.