

ಕೆ.ಎಂ.ದೊಡ್ಡಿ: ಸಮೀಪದ ಚಂದೂಪುರ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯದಿಂದ ಚರಂಡಿ ಸ್ವಚ್ಛಗೊಳಿಸದ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ಕಾಯಿಲೆಗಳಿಗೆ ಆಹ್ವಾನ ನೀಡುತ್ತಿದೆ.
ಎಸ್.ಐ.ಹೊನ್ನಲಗೆರೆ ಗ್ರಾಮ ಪಂಚಾಯಿತಿಗೆ ಸೇರುವ ಗ್ರಾಮದಲ್ಲಿ ಚರಂಡಿಗಳು ಅಶುಚಿತ್ವದಿಂದ ಕೂಡಿದ್ದು ಗಬ್ಬು ನಾರುತ್ತಿದೆ. ಸ್ಥಳೀಯರು ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ಒದಗಿಬಂದಿದೆ. ಚರಂಡಿಗಳಲ್ಲಿ ಕಸಕಡ್ಡಿ ಸೇರಿಕೊಂಡಿದ್ದು ಮೇಲ್ಭಾಗದಲ್ಲಿ ಗಿಡಗಂಟಿಗಳು ಉದ್ದುದ್ದ ಬೆಳೆದು ನಿಂತಿದ್ದು ಗ್ರಾ.ಪಂ. ಆಡಳಿತ ಮಂಡಳಿ ಕಂಡು ಕಾಣದಂತೆ ವರ್ತಿಸುತ್ತಿದೆ.
ಗ್ರಾಮ ಪಂಚಾಯಿತಿ ಅವರು ಪ್ಲಾಸ್ಟಿಕ್ ನಿಷೇಧ ಸ್ವಚ್ಛತೆಗೆ ಮೊದಲ ಆದ್ಯತೆ ಎನ್ನುತ್ತಾರೆ. ಆದರೆ ಇಲ್ಲಿ ಚರಂಡಿ ಸುತ್ತ ಜೊಂಡು ಬೆಳೆದುಕೊಂಡು ಕೆಸರು ತುಂಬಿಕೊಂಡಿದ್ದರೂ ಗ್ರಾಮ ಪಂಚಾಯಿತಿ ಕಂಡು ಕಾಣದಂತಿದ್ದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರು ಸ್ವಚ್ಛತೆ ಬಗ್ಗೆ ದೂರು ನೀಡಿದರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಡಾಫೆ ಉತ್ತರ ನೀಡುತ್ತಾರೆ ಎಂಬುದು ಗ್ರಾಮಸ್ಥರ ಆರೋಪ. ಸ್ವಚ್ಛತೆಗೂ, ತಮಗೂ ಸಂಬಂಧವಿಲ್ಲದಂತೆ ನಡೆದುಕೊಳ್ಳುತ್ತಿರುವ ಬಗ್ಗೆ ಪಂಚಾಯಿತಿ ಆಡಳಿತ ಮಂಡಳಿ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ.
ಸ್ವಚ್ಛತೆ ಇಲ್ಲದೆ ಚರಂಡಿಗಳು ಸೊಳ್ಳೆಗಳ ಉತ್ಪಾದನಾ ಕೇಂದ್ರಗಳಾಗಿದ್ದು, ಚರಂಡಿ ಪಕ್ಕದಲ್ಲೇ ಅಂಗನವಾಡಿ ಕೇಂದ್ರವಿದೆ. ಸೊಳ್ಳೆಗಳ ಕಾಟದಿಂದ ಮಕ್ಕಳಿಗೆ ಮಲೇರಿಯಾ ಮತ್ತಿತರ ಕಾಯಿಲೆಗಳು ಹರಡುವ ಭೀತಿಯಲ್ಲಿ ಪಾಲಕರು ದಿನ ನೂಕುತಿದ್ದು ಗ್ರಾ.ಪಂ. ಆಡಳಿತ ಮಂಡಳಿ ವಿರುದ್ಧ ಹಿಡಿ ಶಾಪ ಹಾಕುತಿದ್ದಾರೆ. ಸ್ವಚ್ಛತೆಗೆ ಆದ್ಯತೆ ನೀಡಬೇಕಾಗಿರುವ ಗ್ರಾ.ಪಂ. ತನ್ನ ಜವಾಬ್ದಾರಿ ಮರೆತ್ತಿದ್ದು, ಸಂಬಂಧಪಟ್ಟ ಮೇಲಧಿಕಾರಿಗಳು ಕೂಡಲೇ ಕ್ರಮ ವಹಿಸಬೇಕು ಎಂದು ಗ್ರಾಮಸ್ಥರ ಒತ್ತಾಯವಾಗಿದೆ.
ನಾನು ಈಗಾಗಲೇ ನಾಲ್ಕೈದು ಬಾರಿ ತಾಪಂ ಇಒ ಮತ್ತು ಪಿಡಿಒ ಗಮನಕ್ಕೆ ತಂದಿದ್ದರೂ ಯಾರು ತಲೆಕೆಡಿಸಿಕೊಳ್ಳುತ್ತಿಲ್ಲ. ಸೊಳ್ಳೆಗಳ ಕಾಟದಿಂದ ಮಕ್ಕಳಿಗೆ ಅನಾರೋಗ್ಯ ಉಂಟಾಗುತ್ತಿದ್ದು, ಕೂಡಲೇ ಗ್ರಾಮ ಪಂಚಾಯಿತಿ ಅವರು ಚರಂಡಿ ಸ್ವಚ್ಛ ಮಾಡಬೇಕು. ಇಲ್ಲವಾದರೆ ಪಂಚಾಯಿತಿ ಮುಂದೆ ಧರಣಿ ಕೂರಬೇಕಾಗುತ್ತದೆ.
ಪುನೀತ್ಸ್ಥಳಿಯ ನಿವಾಸಿ, ಚಂದೂಪುರ
ಸ್ವಚ್ಛತೆ ಗ್ರಾಮ ಪಂಚಾಯಿತಿಯ ಮೊದಲ ಆದ್ಯತೆ. ಮದ್ಯಪಾನ ಮಾಡಿ ಬಿಸಾಡುವ ಬಾಟಲ್ ಸೇರಿದಂತೆ ಪ್ಲಾಸ್ಟಿಕ್ ವಸ್ತುಗಳು ಹಾಗೂ ಕಸಕಡ್ಡಿಗಳನ್ನು ಚರಂಡಿ ಒಳಗಡೆ ಬಿಸಾಡುವುದರಿಂದ ಅಶುಚಿತ್ವ ತಲೆದೋರಿದೆ. ಸ್ವಚ್ಛತೆಗೆ ಪೌರಕಾರ್ಮಿಕರು ದುಪ್ಪಟ್ಟು ಹಣ ಕೇಳುತ್ತಿರುವುದರಿಂದ ವಿಳಂಬವಾಗಿದೆ. ಕೂಡಲೇ ಈ ಬಗ್ಗೆ ಕ್ರಮವಹಿಸಲಾಗುವುದು.
ರಾಜು, ಅಧ್ಯಕ್ಷ, ಎಸ್.ಐ.ಹೊನ್ನಲಗೆರೆ ಗ್ರಾಪಂ