ಚಂಡಕಾಪುರ ಗ್ರಾಮ ಪಂಚಾಯಿತಿ ಅತ್ಯುತ್ತಮ ಕಾರ್ಯಕ್ಕೆ ಗೌರವ

30BK5
Published on

ಬಸವಕಲ್ಯಾಣ: ಭವ್ಯ ಕಟ್ಟಡ, ಅಚ್ಚುಕಟ್ಟಾದ ಕೋಣೆಗಳು, ಅಕರ್ಷಕ ಸಭಾಂಗಣ, ಸಿಸಿ ಕ್ಯಾಮೆರಾ ಮತ್ತು ಸೋಲಾರ್ ಸಿಸ್ಟಮ್ ಅಳವಡಿಕೆ ಜತೆಗೆ ಹಸಿರ ಪರಿಸರದಿಂದ ಗಮನ ಸೆಳೆವ ತಾಲೂಕಿನ ಚಂಡಕಾಪುರ ಗ್ರಾಮ ಪಂಚಾಯತಿ ೨ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಆಗಿದೆ.

ಗ್ರಾಮದಲ್ಲಿ ಹಳೆಯ ಗ್ರಾಪಂ ಇದ್ದು ಗ್ರಾಮದಲ್ಲಿಯೇ ಕಳೆದ ವರ್ಷ ಹೊಸದಾಗಿ ಹಾಗೂ ಮಾದರಿ ಗ್ರಾಪಂ ನಿರ್ಮಿಸಲಾಗಿದೆ. ಗ್ರಾಪಂ ೨೦ ಸದಸ್ಯರ ಬಲ ಹೊಂದಿದ್ದು, ಚಂಡಕಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಹಳ್ಳಿ, ಉಮ್ಮಾಪುರ ಹಾಗೂ ರಾಮತೀರ್ಥ (ಕೆ) ಗ್ರಾಮಗಳು ಬರುತ್ತವೆ. ಡಿಜಿಟಲ್ ಗ್ರಾಪಂ ಹಲವು ವೈಶಿಷ್ಟದಿಂದ ಕೂಡಿದೆ.

ಅಮೃತ ಸರೋವರ ಯೋಜನೆ ಅಡಿ ಹೊಸ ಕೆರೆ ನಿರ್ಮಾಣ, ಡಿಜಿಟಲ್ ಅಂಗನವಾಡಿಗಳು, ಇಡೀ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಡಿಜಿಟಲ್ ಗ್ರಂಥಾಲಯ, ಗ್ರಾಮದಲ್ಲಿ ಮೂಲ ಸೌಲಭ್ಯ ಒದಗಿಸುವಲ್ಲಿ ಕಾಳಜಿ, ರಾಷ್ಟಿಯ ಉದ್ಯೋಗ ಖಾತ್ರಿ ಅನುಷ್ಠಾನದಲ್ಲಿ ಪಾರದರ್ಶಕತೆಯಿಂದ ಗ್ರಾಪಂ ಮೆಚ್ಚುಗೆಗೆ ಪಾತ್ರವಾಗಿದೆ.

ಅಭಿವೃದ್ಧಿಗೆ ಶ್ರಮವಹಿಸಿ ಸಹಕಾರ ನೀಡಿದ ಗ್ರಾಪಂ ಎಲ್ಲ ಸದಸ್ಯರಿಗೆ, ಸಾರ್ವಜನಿಕರಿಗೆ, ಮೇಲಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಗ್ರಾಪಂ ಅಧ್ಯಕ್ಷೆ ಪುತಳಾಬಾಯಿ ಬಿರಾದಾರ ಹಾಗೂ ಪಿಡಿಒ ಚಂದ್ರಾಮ ಧೂಳಖೇಡ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net