

ಹನೂರು: ಕಳೆದ 3 ವರ್ಷದಿಂದಲೂ ನನೆಗುದಿಗೆ ಬಿದ್ದಿರುವ ತಾಲೂಕಿನ ಚಂಗಡಿ ಗ್ರಾಮ ಸ್ಥಳಾಂತರ ಮತ್ತು ಪುನರ್ವಸತಿ ಕಾರ್ಯಕ್ಕೆ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅನುದಾನ ಬಿಡುಗಡೆ ಮಾಡುವಂತೆ ಗ್ರಾಮಸ್ಥರಿಂದ ಒತ್ತಾಯ ಕೇಳಿಬಂದಿದೆ.
ಮಲೆ ಮಹದೇಶ್ವರ ವನ್ಯಜೀವಿ ಧಾಮದ ದಟ್ಟ ಅರಣ್ಯದಲ್ಲಿರುವ ಚಂಗಡಿ ಗ್ರಾಮದಲ್ಲಿ 256 ಕುಟುಂಬಗಳಿವೆ. ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ್ದು, ಇಲ್ಲಿನ ಜನರು ಹಲವು ದಶಕದಿಂದಲೂ ವಾಸಿಸುತ್ತಿದ್ದಾರೆ. ಬಹುತೇಕ ಜನರು ಕೃಷಿ ಹಾಗೂ ಕೂಲಿಯನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದಾರೆ. ಆದರೆ ಇಲ್ಲಿ ಸಮರ್ಪಕ ಕುಡಿಯುವ ನೀರು, ರಸ್ತೆ, ಸಾರಿಗೆ, ಆಸ್ಪತ್ರೆ ಮುಂತಾದ ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಅಲ್ಲದೇ ಕಾಡು ಪ್ರಾಣಿಗಳ ಹಾವಳಿಯಿಂದ ತತ್ತರಿಸಿ ಹೋಗಿದ್ದು, ಕಷ್ಟದ ನಡುವೆ ದಿನ ದೂಡುತ್ತಿದ್ದಾರೆ. ಈ ದೆಸೆಯಲ್ಲಿ ಗ್ರಾಮಸ್ಥರು ಮೂಲಸೌಕರ್ಯ ಒದಗಿಸುವಂತೆ ಹಲವು ಬಾರಿ ಪ್ರತಿಭಟನೆಯನ್ನು ನಡೆಸಿದ್ದರು. ಆದರೆ, ಅರಣ್ಯ ಕಾಯ್ದೆ ಅನ್ವಯ ಮೂಲಸೌಕರ್ಯವನ್ನು ಒದಗಿಸಲು ಸಾಧ್ಯವಾಗಿರಲಿಲ್ಲ. ಸರ್ಕಾರ 2016ರಲ್ಲಿ ಗ್ರಾಮವನ್ನು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸುವ ಸಂಬಂಧ ಚಿಂತನೆ ನಡೆಸಿತ್ತು. ಈ ಬಗ್ಗೆ ಗ್ರಾಮಸ್ಥರೆಲ್ಲರೂ ಒಪ್ಪಿರಲಿಲ್ಲ. ಬಳಿಕ ಸರ್ಕಾರ ಅಗತ್ಯ ಸೌಕರ್ಯ ನೀಡುವ ಭರವಸೆ ನೀಡಿತ್ತು. 2019ರಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಸುರೇಶ್‌ಕುಮಾರ್ ಅವರು ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಸಭೆ ನಡೆಸಿ ಗ್ರಾಮಸ್ಥರ ಮನವೊಲಿಸುವುದರ ಮೂಲಕ ಗ್ರಾಮದ ಸ್ಥಳಾಂತರಕ್ಕೆ ಸಮ್ಮತಿಯನ್ನು ಪಡೆದಿದ್ದರು.
35 ಕೋಟಿ ರೂ. ವೆಚ್ಚದ ಯೋಜನೆ: ಸರ್ಕಾರದ ಸೂಚನೆಯಂತೆ ಜಿಲ್ಲಾಡಳಿತ ಅಗತ್ಯ ಕ್ರಮಕೈಗೊಂಡು ಗ್ರಾಮಕ್ಕೆ ಪುನರ್ವಸತಿ ಕಲ್ಪಿಸುವ ಸಂಬಂಧ ಕುಟುಂಬಗಳು, ಜಮೀನು ಹಾಗೂ ಆಸ್ತಿಪಾಸ್ತಿಗಳ ಸರ್ವೇ ಕಾರ್ಯ ನಡೆಸಿ ಕಳೆದ 3 ವರ್ಷಗಳ ಹಿಂದೆ ಕೊಳ್ಳೇಗಾಲ ತಾಲೂಕಿನ ಕೊತ್ತನೂರು ಬಳಿ ಜಾಗವನ್ನು ಗುರುತಿಸಿದ್ದರು. ಆದರೆ, ಇದಕ್ಕೆ ಗ್ರಾಮಸ್ಥರಿಂದ ತೀವ್ರ ಆಕ್ಷೇಪ ಕೇಳಿ ಬಂದಿದ್ದು, ಬೇರೆಡೆ ಸ್ಥಳ ಗುರುತಿಸುವಂತೆ ಮನವಿ ಮಾಡಿದ್ದರು.
ಗ್ರಾಮಸ್ಥರ ಆಶಯದಂತೆ ಹನೂರು ತಾಲೂಕಿನ ಡಿ.ಎಂ. ಸಮುದ್ರ (ಗುಳ್ಯ) ಗ್ರಾಮದ ಬಳಿ 435 ಎಕರೆ ಜಾಗವನ್ನು ಗುರ್ತಿಸಲಾಗಿದೆ. ಪುನರ್ವಸತಿ ಕಲ್ಪಿಸುವ ಸಂಬಂಧ ಕಂದಾಯ ಹಾಗೂ ಅರಣ್ಯ ಇಲಾಖೆಯ ಸರ್ವೇ ಕಾರ್ಯ ನಡೆಸಿ 35 ಕೋಟಿ ರೂ. ಯೋಜನೆಗೆ ಅನುಮೋದನೆ ದೊರಕಿದೆ. ಸರ್ಕಾರದಿಂದ ಅನುದಾನವಷ್ಟೇ ಬಿಡುಗಡೆಯಾಗಬೇಕಿದೆ. ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿ 3 ವರ್ಷವೇ ಕಳೆದಿದೆ. ಆದರೆ ಅನುದಾನ ಬಿಡುಗಡೆಯಾಗಿಲ್ಲ. ಇದರಿಂದ ಈ ಕಾರ್ಯ ನನೆಗುದಿಗೆ ಬಿದ್ದಿದ್ದು, ಗ್ರಾಮಸ್ಥರು ಪುನರ್ವಸತಿಗಾಗಿ ಎದುರು ನೋಡುತ್ತಿದ್ದಾರೆ.
ಜಿಲ್ಲಾಧಿಕಾರಿ ಭೇಟಿ: ಪುನರ್ವಸತಿ ಸಂಬಂಧ 2023ರ ಆ.22 ರಂದು ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಅವರು ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಂದ ಸಮಸ್ಯೆ ಆಲಿಸಿದ್ದರು. ಈ ವೇಳೆ ಗ್ರಾಮಸ್ಥರು ಮಾತನಾಡಿ, ನಮಗೆ ಆದಷ್ಟು ಬೇಗ ನಿವೇಶನ, ಮನೆ, ಜಮೀನು ಸೇರಿದಂತೆ ಘೋಷಿಸಿದ್ದ ಸವಲತ್ತುಗಳನ್ನು ಒದಗಿಸಿ ಕೊಡಬೇಕು. ಇಲ್ಲವೇ ಗುರುತಿಸಿರುವ ಸ್ಥಳದಲ್ಲಿ ಗುಡಿಸಲು ಹಾಕಿ ಜೀವನ ಸಾಗಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿದರು. ಈ ಸಂಬಂಧ ಶಾಸಕ ಎಂ.ಆರ್ ಮಂಜುನಾಥ್ ಅವರಲ್ಲೂ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಆದರೆ, ಸರ್ಕಾರದ ಅನುದಾನ ದೊರಕದ ಪರಿಣಾಮ ಪುನರ್ವಸತಿ ಭಾಗ್ಯ ದಕ್ಕಿಲ್ಲ.
ಗ್ರಾಮದ ಸ್ಥಳಾಂತರದ ಪುನರ್ವಸತಿಗಾಗಿ ಇಲ್ಲಿನ 256 ಕುಟುಂಬಗಳಿಗೆ ಸರ್ಕಾರ 2 ರೀತಿಯಲ್ಲಿ ಪ್ಯಾಕೇಜ್‌ಗಳನ್ನು ಘೋಷಿಸಿದೆ. ಅದರಲ್ಲಿ ಮೊದಲನೆ ಪ್ಯಾಕೇಜ್‌ನಲ್ಲಿ ಪ್ರತಿ ಕುಟುಂಬಕ್ಕೂ 15 ಲಕ್ಷ ರೂ. ಜತೆಗೆ ಮನೆ ಹಾಗೂ ಜಮೀನಿಗೆ ಸರ್ಕಾರದಿಂದ ಪರಿಹಾರ ನೀಡಲಾಗುತ್ತದೆ. 2ನೇ ಪ್ಯಾಕೇಜ್‌ನಲ್ಲಿ 3 ಎಕರೆ ಜಮೀನು, ಕೃಷಿ ನೀರಾವರಿ ಸೌಕರ್ಯ, ನಿವೇಶನ, ವಿದ್ಯುತ್ ಸೌಕರ್ಯ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಅಗತ್ಯ ಸವಲತ್ತುಗಳನ್ನು ಒದಗಿಸಿಕೊಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಆದರೆ 3 ವರ್ಷಗಳು ಕಳೆದರೂ ಇನ್ನೂ ಪುನರ್ವಸತಿ ಕಲ್ಪಿಸುವ ಕಾರ್ಯವಾಗಿಲ್ಲ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಮುತುರ್ವಜಿ ವಹಿಸಿ ಮಲೆಮಹದೇಶ್ವರ ಬೆಟ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿ ಅನುದಾನ ಬಿಡುಗಡೆಗೊಳಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
ಮೂಲಸೌಕರ್ಯವಿಲ್ಲದ ಪರಿಣಾಮ ಗ್ರಾಮದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪುನರ್ವಸತಿ ಕಲ್ಪಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿ ಅವರಿಗೆ ಕಳೆದ 3 ವರ್ಷಗಳಿಂದಲೂ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ, ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ. ಇದೀಗ ಮ.ಬೆಟ್ಟದಲ್ಲಿ ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ಅನುದಾನ ಬಿಡುಗಡೆ ಸಂಬಂಧ ಜಿಲ್ಲಾಧಿಕಾರಿ ಅವರಲ್ಲಿ ಮನವಿ ಮಾಡಲಾಗಿದ್ದು, ಭರವಸೆ ನೀಡಿದ್ದಾರೆ. ಕರಿಯಪ್ಪ, ಹಿರಿಯ ಮುಖಂಡ ಚಂಗಡಿ ಗ್ರಾಮ. ಚಂಗಡಿ ಗ್ರಾಮ ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಲು ಅನುದಾನ ಬಿಡುಗಡೆ ವಿಚಾರ ಸರ್ಕಾರದ ಮಟ್ಟದಲ್ಲಿದೆ. ಹಾಗಾಗಿ, ಮ.ಬೆಟ್ಟದಲ್ಲಿ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಸ್ತಾವನೆ ಸಲ್ಲಿಸಲಿದ್ದಾರೆ. ಈ ಬಗ್ಗೆ ಚರ್ಚೆಯಾಗಲಿದೆ. ಬಿ.ಆರ್ ಮಹೇಶ್, ಉಪ ವಿಭಾಗಾಧಿಕಾರಿ ಕೊಳ್ಳೇಗಾಲ