ಚ.ಪಟ್ಟಣ ತಾಲೂಕು ಅಭಿವೃದ್ಧಿಗೆ 300 ಕೋಟಿ ರೂ. ಅನುದಾನ

Published on

ಚನ್ನರಾಯಪಟ್ಟಣ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ವರ್ಷ ಕಳೆದಿದ್ದು, ತಾಲೂಕಿನ ಅಭಿವೃದ್ಧಿಗೆ ಸರ್ಕಾರ ಇದುವರೆವಿಗೂ 300 ಕೋಟಿ ರೂ. ಅನುದಾನ ನೀಡಿದೆ. ಬರೀ ಟೀಕೆ ಮಾಡುವುದರಲ್ಲೇ ನಿರತವಾಗಿರುವ ವಿಪಕ್ಷಗಳು ಸರ್ಕಾರ ಕೊಟ್ಟಿರುವ ಅನುದಾನ ವಿಚಾರವನ್ನು ಮರೆ ಮಾಚಬಾರದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಹೇಳಿದರು.

ಸರ್ಕಾರಕ್ಕೆ ಎರಡು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ತಾಲೂಕು ಮತ್ತು ಜಿಲ್ಲೆಗೆ ಸರ್ಕಾರದಿಂದಾಗಿರುವ ಅಭಿವೃದ್ಧಿ ಕುರಿತಾಗಿ ಜನರಿಗೆ ಮುಖ್ಯಮಂತ್ರಿಗಳೇ ಮೇ 20ರ ನಂತರ ಜಿಲ್ಲೆಗೆ ಆಗಮಿಸಿ ತಿಳಿಸುವ ಕೆಲಸ ಮಾಡಲಿದ್ದಾರೆ. ನುಡಿದಂತೆ ಸರ್ಕಾರ ನಡೆದಿದೆ. ರಸ್ತೆ, ಮ್ಯಾನ್‌ಹೋಲ್ಸ್ ನಿರ್ವಹಣೆಗೆ ಹೇಮಾವತಿ ನೀರಾವರಿ ಇಲಾಖೆಯಡಿ 35 ಕೋಟಿ ರೂ.ಅನುದಾನ ಕಳೆದ ಮೂರು ತಿಂಗಳ ಹಿಂದೆ ಬಿಡುಗಡೆಯಾಗಿ ಕಾಮಗಾರಿ ನಡೆಯುತ್ತಿವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಲೋಕೋಪಯೋಗಿ ಇಲಾಖೆಯಡಿ 56 ಕೋಟಿ ರೂ.ವೆಚ್ಚದ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಯಡ್ಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಆಡಳಿತಾವಧಿಯಲ್ಲಿ ಆದ ಕೆಲಸ ಎಂದು ಹೇಳುವ ಸ್ಥಳೀಯ ಶಾಸಕರು, ಸಿದ್ದರಾಮಯ್ಯ ಅವರ ಅವಧಿಯಲ್ಲಿಯೂ ಆದ ಕೆಲಸಗಳನ್ನು ಕ್ಷೇತ್ರದ ಜನರಿಗೆ ಹೇಳಬೇಕೆಂದರು.

ಕಳೆದ ಚುನಾವಣೆಯಲ್ಲಿ ತಾಲೂಕಿನ ಜನತೆ ತಮಗೆ 80 ಸಾವಿರ ಮತ ನೀಡಿದ್ದು, ಈ ತಾಲೂಕಿನ ಅಭಿವೃದ್ಧಿಗೆ ನನ್ನ ಕೊಡುಗೆಯೂ ಇದ್ದು, ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿ ತರಲು ತಮ್ಮ ಶ್ರಮವು ಇದೆ ಎಂದರು.

ಸಾಹಿತಿ ಎಸ್.ಎಲ್.ಭೈರಪ್ಪ ಅವರ ತವರೂರು ಸಂತೇಶಿವರ ಏತ ನೀರಾವರಿ ಯೋಜನೆಗೆ ಕಳೆದ ಬಿಜಿಪಿ ಸರ್ಕಾರದಲ್ಲಿ ಕರಾರು ಆಗಿದ್ದರೂ ನಮ್ಮ ಸರ್ಕಾರ ರಚನೆಯಾದ ಮೇಲೆ 25 ಕೋಟಿ ರೂ. ಅನುದಾನ ನೀಡಲಾಗಿದೆ. ಆದೇ ರೀತಿ ಕಲ್ಲೇಸೋಮನಹಳ್ಳಿ ಏತ ನೀರಾವರಿ ಯೋಜನೆ ಮುಕ್ತಾಯವಾಗಿದ್ದು, ಆ ಯೋಜನೆಯ ಬಾಕಿ ಹಣ ಬಿಡುಗಡೆ ಮಾಡಿದ್ದು ನಮ್ಮ ಸರ್ಕಾರ, ತೋಟಿ ಏತ ನೀರಾವರಿ ಯೋಜನೆಗೆ ಡಿ.ಕೆ.ಶಿವಕುಮಾರ್ ಅವರು ಜಲಸಂಪನ್ಮೂಲ ಸಚಿವರಾಗಿದ್ದ ವೇಳೆ ನನ್ನನ್ನು ಸಂಸದೀಯ ಕಾರ್ಯದರ್ಶಿ ಮಾಡಿ ಯೋಜನೆಗೆ ಶ್ರಮಿಸಲು ಕಾರಣವಾಗಿದೆ. ಇದೀಗ ಕುಂಟುತ್ತಾ ಕಾಮಗಾರಿ ಸಾಗುತ್ತಿದೆ. ಸಂಸದರು, ಜಿಲ್ಲಾಧಿಕಾರಿ ಸೇರಿ ಸಭೆ ನಡೆಸಿ ಕಾಮಗಾರಿಗೆ ವೇಗ ನೀಡಲಾಗಿದೆ ಎಂದರು.

ಕಬ್ಬಳಿ-ದಿಡಗ ಭಾಗದ 23 ಹಳ್ಳಿಗಳ ಕೆರೆಗೆ ನೀರು ತುಂಬಿಸುವ ಯೋಜನೆಗೆ ಚುನಾವಣೆ ವೇಳೆ ನೀಡಿದ ಭರವಸೆಯಂತೆ ಸಂಸದರೊಡಗೂಡಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಟು ಎಂಟು ತಿಂಗಳ ಸತತ ಪ್ರಯತ್ನದ ಫಲವಾಗಿ ಇದೀಗ ಬೋರ್ಡ್ ಮೀಟಿಂಗ್‌ನಲ್ಲಿ ಒಪ್ಪಿಗೆ ಸಿಕ್ಕಿ, ಹಣಕಾಸು ಇಲಾಖೆ ಅನುಮೋದನೆ ನೀಡಿ ಇದೀಗ ಟೆಂಡರ್ ಹಂತಕ್ಕೆ ತರಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎಂ.ಶಂಕರ್, ಎಂ.ಕೆ.ಮಂಜೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net