ಘೋಷಣೆಯಲ್ಲೇ ಉಳಿದ ‘ಮೈಸೂರು ಸಿಲ್ಕ್’ ಉತ್ತೇಜನ

silk story
Published on

ಆರ್. ಕೃಷ್ಣ ಮೈಸೂರು
ಹೆಸರಿನೊಂದಿಗೆ ಬೆರೆತು ಹೆಸರುವಾಸಿಯಾಗಿರುವ ‘ಮೈಸೂರು ಸಿಲ್ಕ್’ ಉತ್ತೇಜನಕ್ಕೆ ಸರ್ಕಾರ ಬಜೆಟ್‌ನಲ್ಲಿ ಘೋಷಣೆಗಳನ್ನು ಮಾಡಿದ್ದರೂ ಅನುಷ್ಠಾನ ಮಾತ್ರ ಇನ್ನೂ ಕಾರ್ಯಗತವಾಗಿಲ್ಲ.
ಮೈಸೂರು ರೇಷ್ಮೆಗೆ ಎಲ್ಲೆಡೆ ಬೇಡಿಕೆ ಇರುವುದರಿಂದ ರೇಷ್ಮೆ ಬೆಳೆ ಜತೆಗೆ, ರೇಷ್ಮೆ ಬಟ್ಟೆ ಉತ್ತೇಜನಕ್ಕೆ ಯೋಜನೆ ರೂಪಿಸಿ ಹಲವಾರು ವರ್ಷಗಳೇ ಕಳೆದಿವೆ. ಆದರೆ ಬಜೆಟ್‌ನಲ್ಲಿ ಮಾತ್ರ ಈ ಘೋಷಣೆಗಳು ಉಳಿದಿವೆಯೇ ವಿನಾ ಜಾರಿ ಸಾಧ್ಯವಾಗಿಲ್ಲ.
‘ಚಾಮುಂಡೇಶ್ವರಿ ಮೆಗಾ ಸಿಲ್ಕ್ ಕ್ಲಸ್ಟರ್ ಯೋಜನೆ’ ಅನುಷ್ಠಾನಗೊಳಿಸುವುದಾಗಿ ಘೋಷಣೆ ಮಾಡಿ, ಅದಕ್ಕಾಗಿ ಜಾಗ ಗುರುತಿಸಿದ್ದರೂ ಯೋಜನೆ ಇನ್ನೂ ನನೆಗುದಿಗೆ ಬಿದ್ದಿದೆ.

ಅನುದಾನ ಭರಿಸಲು ನಿರ್ಧಾರ
ಸುಮಾರು 49 ಕೋಟಿ ರೂ. ವೆಚ್ಚದಲ್ಲಿ ಕೇಂದ್ರ ಸರ್ಕಾರ 2017-18ರಲ್ಲಿ ಸಮಗ್ರ ಪವರ್‌ಲೂಮ್ ಕ್ಲಸ್ಟರ್ ಅಭಿವೃದ್ಧಿ ಯೋಜನೆ (ಸಿಪಿಸಿಡಿಎಸ್) ಕೈಗೆತ್ತಿಗೊಳ್ಳಲು ಉದ್ದೇಶಿಸಿತ್ತು. ಇದಕ್ಕಾಗಿ ಶೇ.40ರಷ್ಟು ವಂತಿಕೆಯನ್ನು ಕೇಂದ್ರ ಸರ್ಕಾರ, ಉಳಿದ ಅನುದಾನವನ್ನು ರಾಜ್ಯ ಸರ್ಕಾರ ಹಾಗೂ ವಿಶೇಷ ಉದ್ದೇಶದ ವ್ಯವಸ್ಥೆ (ಎಸ್‌ಪಿವಿ) ಸದಸ್ಯರು ಭರಿಸಲು ನಿರ್ಧರಿಸಲಾಗಿತ್ತು.
ಅಲ್ಲದೆ, ಯೋಜನೆ ಅನುಷ್ಠಾನಕ್ಕಾಗಿ ಮೈಸೂರು ತಾಲೂಕು ಬೆಳವಾಡಿ ಸರ್ವೇ ನಂ. 247ರಲ್ಲಿ 1 ಎಕರೆ 12 ಗುಂಟೆ ಹಾಗೂ ಸರ್ವೇ ನಂ.252ರಲ್ಲಿ 9 ಎಕರೆ ಸೇರಿದಂತೆ ಒಟ್ಟು 10 ಎಕರೆ 12 ಗುಂಟೆ ಜಮೀನನ್ನು ಕಾಯ್ದಿರಿಸಲಾಗಿದೆ. ಜಾಗದ ಸಮಸ್ಯೆ ಎದುರಾಗಿ ಹಲವು ಯೋಜನೆಗಳು ಕುಂಠಿಗೊಳ್ಳುವುದು ಸಾಮಾನ್ಯ. ಆದರೆ ‘ಮೈಸೂರು ಸಿಲ್ಕ್’ ಉತ್ತೇಜನ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಿ, ಅದರ ಅನುಷ್ಠಾನಕ್ಕಾಗಿ ಜಾಗ ಗುರುತಿಸಿದ್ದರೂ ಕಾರ್ಯಗತಗೊಳಿಸಲು ಸರ್ಕಾರ ಮನಸ್ಸು ಮಾಡಿದಂತಿಲ್ಲ.

ನಿರೀಕ್ಷಿತ ಮಟ್ಟದಲ್ಲಿ ಉತ್ಪಾದನೆ ಇಲ್ಲ
‘ಮೈಸೂರು ರೇಷ್ಮೆ’ಗೆ ವಿಶ್ವದ ಎಲ್ಲೆಡೆ ಬಹು ಬೇಡಿಕೆ ಇದ್ದು, ಉತ್ಪಾದನೆ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಹಾಗಾಗಿ, ಉತ್ಪಾದನೆಯನ್ನು ಹೆಚ್ಚಿಸಿ, ಬೇಡಿಕೆ ತಣಿಸುವ ಉದ್ದೇಶದಿಂದ ಮಾರುಕಟ್ಟೆ ವಿಸ್ತರಿಸಲು ಕ್ಲಸ್ಟರ್ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಪರಿಷ್ಕೃತ ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ಕಾರ್ಯಕ್ರಮದಡಿ ಕೇಂದ್ರ ಸರ್ಕಾರ ದೇಶಾದ್ಯಂತ ಸ್ಥಾಪಿಸಲು ಘೋಷಿಸಿರುವ 6 ರೇಷ್ಮೆ ಕ್ಲಸ್ಟರ್‌ಗಳಲ್ಲಿ ಮೈಸೂರು ಒಂದಾಗಿದೆ. ಕೇಂದ್ರ ಸರ್ಕಾರ ರಾಜ್ಯ ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮವನ್ನು ಕ್ಲಸ್ಟರ್ ನಿರ್ವಹಣೆ ಮತ್ತು ತಾಂತ್ರಿಕ ಏಜೆನ್ಸಿಯಾಗಿ ನೇಮಿಸಿತ್ತು. ಅನುಷ್ಠಾನ ಮತ್ತು ಧನಸಹಾಯಕ್ಕಾಗಿ ಎಸ್‌ಪಿವಿ ವ್ಯವಸ್ಥೆಗೂ ಅನುಮೋದನೆ ನೀಡಲಾಗಿತ್ತು.

ಯೋಜನೆಯಿಂದ ಉದ್ಯಮಕ್ಕೆ ಸಹಕಾರಿ:
ತನ್ನ ವಿಶಿಷ್ಟ ನಾವಿನ್ಯತೆಯಿಂದಾಗಿ ಜಾಗತಿಕ ಮನ್ನಣೆ ಪಡೆದುಕೊಂಡಿರುವ ಮೈಸೂರು ರೇಷ್ಮೆ ಉದ್ಯಮ ಪ್ರೋತ್ಸಾಹಕ್ಕಾಗಿ ಕ್ಲಸ್ಟರ್ ಸಹಕಾರಿ ಆಗಲಿದೆ. ಮೈಸೂರು, ಚಾಮರಾಜನಗರ, ಮಂಡ್ಯ ಇನ್ನಿತರ ಭಾಗದಲ್ಲಿ ರೇಷ್ಮೆ ಪ್ರಸಿದ್ಧಿ ಪಡೆದಿದ್ದು, ಉತ್ಕೃಷ್ಟ ಗುಣಮಟ್ಟದ್ದಾಗಿದೆ. ನೇಯ್ಗೆ ಘಟಕಗಳನ್ನು ಸ್ಥಾಪಿಸಲು ಈ ಕ್ಲಸ್ಟರ್ ಯೋಜನೆ ಸಹಕಾರಿಯಾಗಲಿದ್ದು, ರೇಷ್ಮೆ ಸೀರೆ, ಪಂಚೆ ಇನ್ನಿತರ ಸಿದ್ಧ ಉಡುಪು ತಯಾರಿಕೆಗೆ ನೆರವಾಗಲಿದೆ.
ಕ್ಲಸ್ಟರ್‌ನಲ್ಲಿ ಟ್ವಿಸ್ಟಿಂಗ್, ನೂಲು ಡೈಯಿಂಗ್, ವಾರ್ಪಿಂಗ್, ಫ್ಯಾಬ್ರಿಕ್ ಡೈಯಿಂಗ್ ಮತ್ತು ಪ್ರಿಂಟಿಂಗ್, ಕ್ಯಾಲೆಂಡರಿಂಗ್ ಸೇರಿದಂತೆ ಹಲವು ಕಾರ್ಯಗಳನ್ನು ಮಾಡಲಾಗುವುದು. 25 ರೇಷ್ಮೆ ವ್ಯಾಪಾರಿಗಳನ್ನು ಗುರುತಿಸಲಾಗಿದ್ದು, ಪ್ರತಿಯೊಬ್ಬರೂ ಕ್ಲಸ್ಟರ್‌ನಲ್ಲಿ 40 ಲಕ್ಷ ರೂ. ಹೂಡಿಕೆ ಮಾಡಲು ನಿರ್ಣಯಿಸಲಾಗಿತ್ತು. ಪ್ರಾರಂಭಿಕ ಶುಲ್ಕವಾಗಿ ತಲಾ 5 ಲಕ್ಷ ರೂ. ನೀಡಿ ಕ್ಲಸ್ಟರ್ ನಿರ್ಮಾಣದ ಕನಸು ಸಹ ಕಂಡಿದ್ದರು. ಆದರೆ ಈಗ ಅವರ ಕನಸು ಈಡೇರದಿರುವುದರಿಂದ ರೇಷ್ಮೆ ಬೆಳೆಗಾರರು ನಿರಾಸೆಗೊಂಡಿದ್ದಾರೆ.

ವಿಸ್ತೃತ ಯೋಜನಾ ವರದಿ ಪ್ರಕಾರ ರಸ್ತೆ, ಒಳಚರಂಡಿ, ನೀರು, ವಿದ್ಯುತ್ ಮತ್ತು ಘನತ್ಯಾಜ್ಯ ನಿರ್ವಹಣಾ ಘಟಕಗಳು, ತರಬೇತಿ ಸಭಾಂಗಣ, ಬ್ಯಾಂಕ್ ಕಟ್ಟಡ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಈ ಮೂಲಕ ಸ್ಥಳೀಯ ಆರ್ಥಿಕತೆ ಉತ್ತೇಜಿಸುವ ಜತೆಗೆ ಸುಮಾರು ಒಂದು ಸಾವಿರ ಜನರಿಗೆ ಉದ್ಯೋಗಾವಕಾಶ ದೊರೆಯುತ್ತದೆ ಎಂದು ನಿರೀಕ್ಷಿಸಲಾಗಿದೆ.

ಯೋಜನಾ ವೆಚ್ಚ ಹೆಚ್ಚಳ
ನಿಗದಿತ ಅವಧಿಯೊಳಗೆ ಯೋಜನೆ ಕೈಗೆತ್ತಿಕೊಂಡು ಪೂರ್ಣಗೊಳಿಸಲು ಸಾಧ್ಯವಾಗದಿದ್ದರಿಂದ ಯೋಜನಾ ವೆಚ್ಚ ದುಪ್ಪಟ್ಟಾಗಿದೆ. ಭೂ ಪರಿವರ್ತನೆ ವಿಳಂಬದಿಂದಾಗಿ ಕಾಮಗಾರಿ ಕೈಗೆತ್ತಿಕೊಳ್ಳಲು ತಡವಾಗಿದ್ದು, ಈಗ ಯೋಜನಾ ವೆಚ್ಚ 75.57 ಕೋಟಿ ರೂ.ಗೆ ಏರಿಕೆ ಆಗಿದೆ. ಪರಿಷ್ಕೃತ ಯೋಜನಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆಗೆ ಕಾಯಲಾಗುತ್ತಿದೆ. ಅನುಮೋದನೆ ದೊರೆತ ತಕ್ಷಣ ಕಾರ್ಯಗತಗೊಳಿಸಲಾಗುವುದು.
ಲಕ್ಷ್ಮಣ ತಳವಾರ, ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net