ಘೋಷಣೆಗಷ್ಟೇ ಸೀಮಿತವಾದ ಹನೂರು ತಾಲೂಕು

01 HANUR 1 A
Published on

ಹನೂರು: ಹನೂರು ತಾಲೂಕು ರಚನೆಯಾಗಿ 5 ವರ್ಷ ಕಳೆಯುತ್ತಿದೆ. ಆದರೆ ತಾಲೂಕಿಗೆ ವಿವಿಧ ಇಲಾಖೆಯ ಕಚೇರಿಗಳು ಸ್ಥಾಪನೆಯಾಗದ ಕಾರಣ ಜನರು ಸೇವೆಗಾಗಿ ಅಲೆಯುವಂತಾಗಿದೆ.

ರಾಜ್ಯದಲ್ಲಿಯೇ ವಿಸ್ತೀರ್ಣದಲ್ಲಿ ದೊಡ್ಡ ತಾಲೂಕಾಗಿದ್ದ ಕೊಳ್ಳೇಗಾಲಕ್ಕೆ ಈ ಹಿಂದೆ ಹನೂರು ಸೇರಿತ್ತು. ಸುಮಾರು 100 ಕಿ.ಮೀಗೂ ಹೆಚ್ಚು ಅಂತರ ಹೊಂದಿರುವ ಗೋಪಿನಾಥಂ, ಪಾಲಾರ್ ಹಾಗೂ 50 ಕಿಮೀ ಅಂತರ ಹೊಂದಿರುವ ಜಲ್ಲಿಪಾಳ್ಯ, ಗರಿಕೆಕಂಡಿ, ಹೂಗ್ಯಂ ಸೇರಿದಂತೆ ಈ ಭಾಗದ ಇನ್ನಿತರ ಕಾಡಂಚಿನ ಗ್ರಾಮಗಳ ಜನರು ತಾಲೂಕು ಕಚೇರಿಗಳಲ್ಲಿನ ತಮ್ಮ ಕೆಲಸ ಕಾರ್ಯಗಳಿಗಾಗಿ ಕೊಳ್ಳೇಗಾಲಕ್ಕೆ ಅಲೆಯಬೇಕಿತ್ತು. ಹೀಗಾಗಿ ಹನೂರನ್ನು ತಾಲೂಕು ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿತ್ತು.

2108ರಲ್ಲೇ ರಚನೆಯಾದ ತಾಲೂಕು: ಜಗದೀಶ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ತನ್ನ ಬಜೆಟ್‌ನಲ್ಲಿ ರಾಜ್ಯದಲ್ಲಿ 49 ಹೋಬಳಿ ಕೇಂದ್ರಗಳನ್ನು ತಾಲೂಕು ಮಾಡಿ ಘೋಷಿಸಿತ್ತು. ಆದರೆ ಆದೇಶ ಅನುಷ್ಠಾನಕ್ಕೆ ಬರುವಷ್ಟರಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಕಳೆದುಕೊಂಡಿತು. ಬಳಿಕ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಿತು. ಕ್ಷೇತ್ರದ ಅಂದಿನ ಶಾಸಕ ಆರ್.ನರೇಂದ್ರ ಹನೂರನ್ನು ತಾಲೂಕು ಕೇಂದ್ರ ಮಾಡುವಂತೆ ಸಿಎಂ ಬಳಿ ಮನವಿ ಮಾಡಿದ್ದರು. ತಾಲೂಕು ಘೋಷಣೆಗೆ 100 ಕೋಟಿ ರೂ. ಅನುದಾನದ ಅಗತ್ಯ ಇತ್ತು. ಆದರೆ ಸಿದ್ದರಾಮಯ್ಯ ಅವರು 2017ರಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಅನುದಾನದ ಕೊರತೆಯಿಂದ ತಾಲೂಕು ಘೋಷಣೆಯನ್ನು ತಡೆ ಹಿಡಿಯಲಾಗಿತ್ತು.

ಸಿದ್ದರಾಮಯ್ಯ ಅವರು 2018ರ ಡಿ.10ರಂದು ಹನೂರಿನಲ್ಲಿ ಜರುಗಿದ ಸಾಧನಾ ಸಮಾವೇಶದಲ್ಲಿ ಹನೂರನ್ನು ತಾಲೂಕಾಗಿ ಘೋಷಣೆ ಮಾಡಿದರು. ಇದೀಗ ಹನೂರು ತಾಲೂಕಾಗಿ 5 ವರ್ಷ ಕಳೆಯುತ್ತಿದೆ. ಆದರೆ ತಾಲೂಕು ಪಂಚಾಯಿತಿ, ನ್ಯಾಯಾಲಯ, ಉಪ ಖಜಾನೆ, ಕೃಷಿ ಇಲಾಖೆ ಹೊರತುಪಡಿಸಿದರೆ ಇನ್ನುಳಿದ ಕಚೇರಿಗಳು ಸ್ಥಾಪನೆಯಾಗಿಲ್ಲ. ಕಚೇರಿಗಳನ್ನು ತೆರೆಯಲು 2 ವರ್ಷದ ಹಿಂದೆಯೇ ಹುಲ್ಲೇಪುರ ಗ್ರಾಮದ ಸರ್ವೇ ನಂ.311 ಮತ್ತು 312ರಲ್ಲಿನ 12 ಎಕರೆಯಲ್ಲಿ ಮಿನಿ ವಿಧಾನಸೌಧ ಹಾಗೂ 375ರಲ್ಲಿನ 2 ಎಕರೆಯಲ್ಲಿ ನ್ಯಾಯಾಲಯ ಕಟ್ಟಡ, ವಸತಿಗೃಹ ನಿರ್ಮಿಸಲು ಸ್ಥಳ ಗುರುತಿಸಲಾಗಿದೆ. ಆದರೆ ಅನುದಾನ ಸಿಗದ ಕಾರಣ ವಿವಿಧ ಇಲಾಖೆಯ ಕಚೇರಿಗಳ ಸ್ಥಾಪನೆ ಕನಸಿನ ಮಾತಾಗಿದೆ.

ಬಾರದ ವಿವಿಧ ಇಲಾಖೆ ಕಚೇರಿಗಳು: ಹನೂರು ತಾಲೂಕು ಘೋಷಣೆಯಾಗುವ ಮೊದಲು ಇಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಉಪನೋಂದಣಾಧಿಕಾರಿ ಕಚೇರಿ ಹಾಗೂ ತಹಸೀಲ್ದಾರ್ ಕಚೇರಿಗಳಿದ್ದರು. ಸದ್ಯ ಹೊಸದಾಗಿ ನ್ಯಾಯಾಲಯ, ತಾಲೂಕು ಪಂಚಾಯಿತಿ ಕಚೇರಿ, ಉಪ ಖಜಾನೆ, ತೆರೆಯಲಾಗಿದೆ. ಆದರೆ ತೋಟಗಾರಿಕೆ, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಭೂ ದಾಖಲೆಗಳ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ತಾಲೂಕು ಕೇಂದ್ರಕ್ಕೆ ಅಗತ್ಯವಾದ ಇತರ ಇಲಾಖೆಗಳ ಕಚೇರಿಗಳು ಆರಂಭವಾಗಿಲ್ಲ. ಪರಿಣಾಮ ಕ್ಷೇತ್ರದ ಜನತೆ ವಿವಿಧ ಕೆಲಸಕ್ಕಾಗಿ ಇಂದಿಗೂ ಕೊಳ್ಳೇಗಾಲಕ್ಕೆ ಅಲೆಯುವಂತಾಗಿದೆ.

ಬಾಡಿಗೆ ಕಟ್ಟಡದಲ್ಲಿ ಕಚೇರಿಗಳು: ಈಗಾಗಲೇ ಹನೂರಿನಲ್ಲಿ ತೆರೆದಿರುವ ನ್ಯಾಯಾಲಯ, ತಾಪಂ ಹಾಗೂ ಉಪ ಖಜಾನೆ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಗತ್ಯ ಮೂಲ ಸೌಕರ್ಯಗಳಿಲ್ಲ. ಇಲ್ಲಿನ ಅಧಿಕಾರಿಗಳು ಹಾಗೂ ನೌಕರರಿಗೆ ಪ್ರತ್ಯೇಕ ಕೊಠಡಿ ಇಲ್ಲದ ಕಾರಣ ಇಕ್ಕಟ್ಟಾದ ಸ್ಥಳದಲ್ಲಿಯೇ ಕಾರ್ಯನಿರ್ವಹಿಸಬೇಕಿದೆ. ಸಭೆಗಳನ್ನು ನಡೆಸಲು ತೊಡಕಾಗಿದೆ. ತಹಸೀಲ್ದಾರ್ ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಕುಡಿಯುವ ನೀರು, ಶೌಚಗೃಹ, ಆಸನ ವ್ಯವಸ್ಥೆ ಇಲ್ಲ. ಕಚೇರಿಗಳು ಸ್ಥಾಪನೆಯಾಗದ ಕಾರಣ ಪ್ರಸ್ತುತ ಕೊಳ್ಳೇಗಾಲ ತಾಲೂಕಿನ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳೇ ಇಲ್ಲಿಯೂ ಪ್ರಭಾರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ಸಭೆ, ಕಾರ್ಯಕ್ರಮ, ಜಯಂತಿ ಆಚರಣೆ ಹಾಗೂ ಇನ್ನಿತರ ಕೆಲಸ ಕಾರ್ಯಗಳಿಗೆ ಆಗಾಗ್ಗೆ ಹನೂರಿಗೆ ಆಗಮಿಸಬೇಕಿದೆ. ಆದ್ದರಿಂದ ಜಿಲ್ಲಾಡಳಿತ ಹಾಗೂ ಶಾಸಕರು ಈ ಬಗ್ಗೆ ಗಮನಹರಿಸಿ ಮಿನಿ ವಿಧಾನಸೌಧ ನಿರ್ಮಿಸುವುದರ ಮೂಲಕ ತಾಲೂಕು ಕೇಂದ್ರಕ್ಕೆ ಅಗತ್ಯವಾದ ಕಚೇರಿಗಳನ್ನು ತೆರೆದು ಅಧಿಕಾರಿಗಳನ್ನು ನಿಯೋಜಿಸಿ ಸಮರ್ಪಕ ಸೇವೆ ಒದಗಿಸಬೇಕು ಎಂದು ಕ್ಷೇತ್ರದ ಜನತೆ ಒತ್ತಾಯಿಸಿದ್ದಾರೆ.

ಹನೂರು ತಾಲೂಕಾಗಿ 5 ವರ್ಷ ಕಳೆಯುತ್ತಿದೆ. ಆದರೆ, ವಿವಿಧ ಇಲಾಖೆಯ ಕಚೇರಿಗಳು ಸ್ಥಾಪನೆಯಾಗದ ಕಾರಣ ಕ್ಷೇತ್ರದ ಜನರು ತಮ್ಮ ಕೆಲಸ ಕಾರ್ಯಗಳಿಗಾಗಿ ಕೊಳ್ಳೇಗಾಲಕ್ಕೆ ಅಲೆಯುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ಸರ್ಕಾರದ ಗಮನಕ್ಕೆ ತಂದು ಕಚೇರಿಗಳ ಸ್ಥಾಪನೆಗೆ ಕ್ರಮವಹಿಸಬೇಕು.
ಅಮ್ಜಾದ್ ಖಾನ್, ಅಧ್ಯಕ್ಷ, ರೈತ ಸಂಘ ಹನೂರು.

ತಾಲೂಕಿನಲ್ಲಿ ವಿವಿಧ ಇಲಾಖೆಗಳ ಕಚೇರಿ ಸ್ಥಾಪನೆ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಮಿನಿ ವಿಧಾನಸೌಧ ನಿರ್ಮಿಸಲು ಗುರುತಿಸಿರುವ ಸ್ಥಳವನ್ನು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು, ಡಿಜಿಟಲ್ ಸರ್ವೇ ಕಾರ್ಯ ಮಾಡುವಂತೆ ಸೂಚಿಸಲಾಗಿದೆ.
ಎಂ.ಆರ್ ಮಂಜುನಾಥ್, ಶಾಸಕ ಹನೂರು ವಿಧಾನಸಭಾ ಕ್ಷೇತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net