

ದೊಡ್ಡಬಳ್ಳಾಪುರ: ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿರುವ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ಪೂಜೆ ಗುರುವಾರ ವಿಜೃಂಭಣೆಯಿಂದ ನೆರವೇರಿತು. ನೆರೆ ಜಿಲ್ಲೆ ಹಾಗೂ ಅನ್ಯರಾಜ್ಯದದಿಂದಲೂ ಆಗಮಿಸಿದ್ದ ನೂರಾರು ಭಕ್ತರು ದೇವರ ದರ್ಶನ ಪಡೆದು ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.
ಪ್ರಸಿದ್ಧ ನಾಗದೇವತಾ ಆರಾಧನಾ ಕ್ಷೇತ್ರವಾಗಿರುವ ಘಾಟಿಯಲ್ಲಿ ಪ್ರತಿವರ್ಷ ಸುಬ್ರಹ್ಮಣ್ಯ ಚಂಪಾ ಷಷ್ಠಿ ವಿಶೇಷ ಮಹತ್ವ ಪಡೆದಿದೆ. ಬೆಳಗ್ಗೆ 6 ಗಂಟೆಗೆ ದೇವರಿಗೆ ವಿಶೇಷ ಅಲಂಕಾರದೊಂದಿಗೆ ಅಭಿಷೇಕ, ಪೂಜೆ ನೆರವೇರಿದವು. ನಂತರ ದೇವಾಲಯದ ಕಾರ‌್ಯನಿರ್ವರ್ಹಣಾಧಿಕಾರಿ ಕೃಷ್ಣಪ್ಪ ನೇತೃತ್ವದಲ್ಲಿ ಗರ್ಭಗುಡಿಯ ಸುತ್ತಲೂ ದೇವರ ಉತ್ಸವ ಮೂರ್ತಿಯನ್ನು ಪ್ರದಕ್ಷಣೆ ನಡೆಸಲಾಯಿತು. ದೇವಾಲಯದಲ್ಲಿ ಬೆಳಗಿನ ಜಾವದಿಂದಲೇ ಭಕ್ತರು ದರ್ಶನಕ್ಕೆ ಸಾಲುಗಟ್ಟಿನಿಂತು ದರ್ಶನ ಪಡೆದರು.
ಅಧಿಕಾರಿಗಳು ಭೇಟಿ: ಚಂಪಾ ಷಷ್ಠಿ ಅಂಗವಾಗಿ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಉಪ ವಿಭಾಗಾಧಿಕಾರಿ ಅರಳ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನ ವಂಶಿಕೃಷ್ಣ, ಡಿವೈಎಸ್ಪಿ ನಾಗರಾಜು, ಸರ್ಕಲ್‌ಇನ್‌ಸ್ಪೆಕ್ಟರ್ ಎಂ.ಬಿ.ನವೀನ್‌ಕುಮಾರ್, ಪೊಲೀಸ್ ಇನ್‌ಸ್ಪೆಕ್ಟರ್ ಸತೀಶ್ ಸೇರಿ ವಿವಿಧ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ದೇವರ ದರ್ಶನ ಪಡೆದರು.
ನಾಗರ ಕಲ್ಲುಗಳಿಗೆ ಪೂಜೆ: ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಿರುವ ಸಾವಿರಾರು ನಾಗಕಲ್ಲುಗಳಿಗೆ ಭಕ್ತರು ವಿಶೇಷ ಪೂಜೆ ಸಲಿಸಿದರು. ಚಂಪಾ ಷಷ್ಟಿಯಂದು ಇಲ್ಲಿನ ಹುತ್ತ ಮತ್ತು ನಾಗಕಲ್ಲುಗಳಿಗೆ ಪೂಜೆ ಸಲ್ಲಿಸುವುದು ವಿಶೇಷ. ಮದುವೆಯಾಗದವರು, ಮಕ್ಕಳಾಗದವರು ವಿಶೇಷ ಹರಕೆ ಹೊತ್ತು ಹಾಲು-ತುಪ್ಪ ಸಮರ್ಪಣೆ ಮಾಡಿದರು.