ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ವಿರೋಧ, ಸ್ಥಳೀಯರ ವಿರೋಧದ ನಡುವೆ ಕಟ್ಟಡ ನಿರ್ಮಾಣಕ್ಕೆ ಮುಂದಾದ ಗ್ರಾಪಂ

02 Nela Ph 01 RI Visit
Published on

ನೆಲಮಂಗಲ: ತಾಲೂಕಿನ ತೊರೆಕೆಂಪೋಹಳ್ಳಿಯ ಬಳಿ ಗ್ರಾಪಂ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಮುಂದಾಗಿದ್ದು, ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ತೊರೆಕೆಂಪೋಹಳ್ಳಿ ಗ್ರಾಮದ ಸರ್ವೇ ನಂಬರ್ 56 ರಲ್ಲಿನ 25 ಗುಂಟೆ ಜಾಗದಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಗ್ರಾಪಂ ಅಧಿಕಾರಿಗಳು ಮುಂದಾಗಿದ್ದಾರೆ. ಸ್ಥಳ ಪರಿಶೀಲನೆಗೆ ಸೋಮವಾರ ರಾಜಸ್ವ ನಿರೀಕ್ಷಕ ಸುದೀಪ್ ಹಾಗೂ ಇತರ ಅಧಿಕಾರಿಗಳ ತಂಡ ಭೇಟಿ ನೀಡಿತ್ತು.

ವಿಷಯ ತಿಳಿದು ನೂರಾರು ಗ್ರಾಮಸ್ಥರು ಸ್ಥಳಕ್ಕಾಗಮಿಸಿ ಘಟಕ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಾಗ್ವಾದ ನಡೆದು ಕೆಲಹೊತ್ತು ಉದ್ವಿಘ್ನ ಸ್ಥಿತಿ ನಿರ್ಮಾಣವಾಗಿತ್ತು.

ಗ್ರಾಮದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣವಾದರೆ ಸಮೀಪದಲ್ಲೇ ಹರಿಯುವ ಕುಮುದ್ವತಿ ನದಿ ಕಲುಷಿತಗೊಳ್ಳುತ್ತದೆ.ಈ ಭಾಗದ ಅಂತರ್ಜಲಕ್ಕೂ ಅದು ಅಪಾಯ. ಸುತ್ತಮುತ್ತಲಿನ ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಬೇರೆಡೆ ನಿರ್ಮಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.

ವಿರೋಧಿಸಿದ್ದರೂ ಹಠಬಿಡದ ಗ್ರಾಪಂ ಅಧಿಕಾರಿಗಳು, ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಕಲ್ಲು, ಮರಳು, ಜಲ್ಲಿಯನ್ನು ಹಾಕಿಸಿದ್ದಾರೆ. ಈ ಕುರಿತು ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಅಭಿಷೇಕ್ ತಿಳಿಸಿದರು.

ಗ್ರಾಪಂ ಸದಸ್ಯ ಕೆ.ಟಿ.ಕುಮಾರ್, ಪಿಡಿಒ ಮೋಹನ್‌ಕುಮಾರ್, ಮುಖಂಡ ಉಮಾಶಂಕರ್, ಹುಚ್ಚಣ್ಣ, ರಾಜಣ್ಣ, ಕೆ.ನವೀನ್, ಕೋಕಿಲೇಶ್, ಹನುಮಂತರಾಯಪ್ಪ ಮತ್ತಿತರರು ಇದ್ದರು.

ಗ್ರಾಮದ ಸರ್ವೇ ನಂ. 56ರ 25 ಗುಂಟೆ ಜಾಗದ ಪೈಕಿ 9 ಗುಂಟೆ ಖರಾಬು ಜಾಗ, ಉಳಿದ 16 ಗುಂಟೆಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳು ಮೀಸಲಿರಿಸಿದ್ದು, ಜಿಲ್ಲಾಡಳಿತ, ತಾಲೂಕು ಆಡಳಿತದ ನಿರ್ದೇಶನದಂತೆ ಪಂಚಾಯಿತಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಮುಂದಾಗಿದೆ. ಗ್ರಾಮಸ್ಥರ ವಿರೋಧ ಕುರಿತಾಗಿ ತಹಸೀಲ್ದಾರರ ಗಮನಕ್ಕೆ ತಂದು ಮುಂದಿನ ಕ್ರಮಕೈಗೊಳ್ಳಲಾಗುವುದು. ಸುದೀಪ್, ರಾಜಸ್ವ ನಿರೀಕ್ಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net