ಘತ್ತರಗಾ, ಗಾಣಗಾಪುರ ಸೇತುವೆ ಸಂಚಾರ ಸ್ಥಗಿತ

KLB1
ದೇವಲ ಗಾಣಗಾಪುರ ಬಳಿಯ ಭೀಮಾ ಸೇತುವೆ ಮುಳುಗಡೆಯಾಗಿ ಸಂಚಾರ ಸ್ಥಗಿತಗೊಂಡಿರುವುದು.
Published on

ಅಫಜಲಪುರ: ಮಹಾರಾಷ್ಟçದ ಉಜನಿ ಮತ್ತು ವೀರ ಜಲಾಶಯದಿಂದ ಭೀಮಾ ನದಿಗೆ ಒಂದು ಲಕ್ಷಕ್ಕೂ ಹೆಚ್ಚಿನ ಕ್ಯೂಸೆಕ್ ನೀರು ಬುಧವಾರ ತಡರಾತ್ರಿ ಸೊನ್ನ ಬ್ರಿಡ್ಜ್ ಮೂಲಕ ಭೀಮಾ ನದಿಗೆ ಪ್ರವೇಶಿಸಿದ್ದು, ಘತ್ತರಗಾ ಹಾಗೂ ಗಾಣಗಾಪುರ ಸೇತುವೆ ಮೇಲೆ ನೀರು ಹರಿಯುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಗುರುವಾರ ಮತ್ತು ಶುಕ್ರವಾರ ಸೇತುವೆ ಸಂಚಾರ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದರು.

ಗುರುವಾರ ಬೆಳಗ್ಗೆ ಗಾಣಗಾಪುರದ ಭೀಮಾ ಸೇತುವೆಗೆ ಭೇಟಿ ನೀಡಿ ಸಮರ್ಪಕ ಮಾಹಿತಿ ಪಡೆದ ಅವರು, ಘತ್ತರಗಾ-ಜೇರಟಗಿ ಮತ್ತು ಗಾಣಗಾಪುರ-ಇಟಗಾ ಸಂಪರ್ಕ ಕಲ್ಪಿಸುವ ಎರಡು ಸೇತುವೆ ಬಳಿ ಪೊಲೀಸರು ಠಿಕಾಣಿ ಹೂಡಿದ್ದು, ತಡರಾತ್ರಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿದ್ದಂತೆ ಬ್ಯಾರಿಕೇಡ್ ಹಾಕಿ ಸಾರ್ವಜನಿಕರ ಸಂಚಾರ ಬಂದ್ ಮಾಡಿದ್ದಾರೆ. ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಂಪರ್ಕ ಕಡಿದುಕೊಂಡ ಪ್ರವಾಹ ಪೀಡಿತ ಗ್ರಾಮಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮತ್ತು ಕಾಳಜಿ ಕೇಂದ್ರ ತೆರೆಯಲು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅಫಜಲಪುರ, ಕಲಬುರಗಿ ಹಾಗೂ ಜೇವರ್ಗಿ ನೋಡಲ್ ಅಧಿಕಾರಿಗಳು ಎಚ್ಚರದಿಂದಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ತಹಸೀಲ್ದಾರರು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹಾಗೂ ಪೊಲೀಸ್ ಇಲಾಖೆಯು ನೋಡಲ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಪ್ರವಾಹದಿಂದ ಯಾವುದೇ ಜನ, ಜಾನುವಾರು ಜೀವ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದರು.
ಎಸ್ಪಿ ಅಡ್ಡೂರು ಶ್ರೀನಿವಾಸುಲು, ಎಸಿ ರೂಪಿಂದ್ರ ಕೌರ್, ಪ್ರೊಬೇಷನರಿ ಐಎಎಸ್ ಅಧಿಕಾರಿ ಮೀನಾಕ್ಷಿ, ತಹಸೀಲ್ದಾರ್ ಸಂಜೀವಕುಮಾರ ದಾಸರ್, ತಾಪಂ ಇಒ ವೀರಣ್ಣ ಕೌಲಗಿ, ಭೀಮಾ ಏತ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಸಂತೋಷಕುಮಾರ ಸಜ್ಜನ್, ಅಧಿಕಾರಿಗಳಾದ ನಾಮದೇವ ರಾಠೋಡ್, ಶಂಕರ ದ್ಯಾಮಣ್ಣವನರ್ ಇತರರಿದ್ದರು.

ನೋಡಲ್ ಅಧಿಕಾರಿಗಳ ನೇಮಕ: ಭೀಮಾ ನದಿ ಪ್ರವಾಹಕ್ಕೆ ತುತ್ತಾಗುವ ಅಫಜಲಪುರ, ಜೇವರ್ಗಿ, ಚಿತ್ತಾಪುರ ಹಾಗೂ ಶಹಾಬಾದ್ ತಾಲೂಕಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಿ ಡಿಸಿ ಫೌಜಿಯಾ ತರನ್ನುಮ್ ಆದೇಶಿಸಿದ್ದಾರೆ. ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ರಕ್ಷಣಾ ಕಾರ್ಯಾಚರಣೆ ಮತ್ತು ಕಾಳಜಿ ಕೇಂದ್ರಗಳ ಮೇಲುಸ್ತುವಾರಿ ವಹಿಸುವಂತೆ ಸೂಚಿಸಲಾಗಿದೆ. ಅಫಜಲಪುರ ತಾಲೂಕು: ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ (82779 31500), ಚಿತ್ತಾಪುರ ಮತ್ತು ಶಹಾಬಾದ್: ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಅಲ್ಲಾಭಕ್ಷ (96860 75599) ಹಾಗೂ ಜೇವರ್ಗಿ ತಾಲೂಕಿಗೆ ತೋಟಗಾರಿಕೆ ಉಪನಿರ್ದೇಶಕ ಸಂತೋಷಕುಮಾರ ಇನಾಮದಾರ್ (94489 99235) ಅವರನ್ನು ನೇಮಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net