ಘಟಿಕೋತ್ಸವಕ್ಕೂ ಗ್ರಹಣ! : ತುಮಕೂರು ವಿವಿ ಕುಲಪತಿ -ಸಿಂಡಿಕೇಟ್ ಸದಸ್ಯರ ಸಂಘರ್ಷ

1
Published on

ವಿಶೇಷ ವರದಿ ತುಮಕೂರು ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಹಾಗೂ ವಿವಿ ಕುಲಪತಿ ನಡುವಿನ ಸಂಘರ್ಷದಿಂದ ವಾರ್ಷಿಕ ಘಟಿಕೋತ್ಸವಕ್ಕೂ ಗ್ರಹಣ ಹಿಡಿದಿದೆ. ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಅವರ 4 ವರ್ಷದ ಅಧಿಕಾರವಧಿ ಇದೇ ಮಾ.25ಕ್ಕೆ ಪೂರ್ಣಗೊಳ್ಳಲಿದ್ದು, ಅಷ್ಟರೊಳಗೆ ಘಟಿಕೋತ್ಸವ ಮುಗಿಸುವ ಅವರ ಮಹಾದಾಸೆಗೆ ಸಿಂಡಿಕೇಟ್ ಸದಸ್ಯರು ಬ್ರೇಕ್ ಹಾಕಿದ್ದಾರೆ. ಕಳೆದೊಂದು ವರ್ಷದಿಂದ ವಿವಿ ಆಂತರಿಕ ಸಂಪನ್ಮೂಲ ನಿಧಿ ಬಳಸಿಕೊಳ್ಳುವ ವಿಚಾರದಲ್ಲಿ ಕುಲಪತಿ ಸಿಂಡಿಕೇಟ್ ಸದಸ್ಯರು ನಡುವೆ ಶೀತಲ ಸಮರ ಏರ್ಪಟ್ಟಿದ್ದು ಇತ್ತೀಚೆಗೆ ಸ್ಫೋಟಗೊಂಡಿತ್ತು. ಇದರ ಪರಿಣಾಮ ಕುಲಪತಿ-ಸದಸ್ಯರ ನಡುವೇ ಕಂದಕ ಏರ್ಪಟ್ಟಿತ್ತು. ಹಾಗಾಗಿ, ತರಾತುರಿಯಲ್ಲಿ ಅಧಿಕಾರಾವಧಿ ಕೊನೇ ಘಟಿಕೋತ್ಸವ ಆಯೋಜಿಸುವ ಕುಲಪತಿಗಳ ತಯಾರಿಗೆ ಸಿಂಡಿಕೇಟ್ ಸದಸ್ಯರು ‘ಅಸಹಕಾರ’ ತೋರಿರುವುದು ಬೆಳಕಿಗೆ ಬಂದಿದೆ. ಸಭೆ ಬಹಿಷ್ಕರಿಸಿದ ಸದಸ್ಯರು!: ಮಾ.15ಕ್ಕೆ ಘಟಿಕೋತ್ಸವ ನಡೆಸಲು ದಿನಾಂಕ ನಿಗದಿ ಮಾಡಿಕೊಂಡಿದ್ದಲ್ಲದೆ, ತರಾತುರಿ ತಯಾರಿ ಸಿದ್ಧತೆ ಮಾಡಿಕೊಂಡು ಫೆ.25 ರಂದು ಸಿಂಡಿಕೇಟ್ ಸಭೆಯ ಮುಂದೆ ವಿಷಯವನ್ನು ಪ್ರಸ್ತಾಪಿಸಿದ್ದ ಕುಲಪತಿ ವೈ.ಎಸ್.ಸಿದ್ದೇಗೌಡರ ನಡೆಗೆ ಅಸಮಾಧಾನಗೊಂಡಿದ್ದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವೇಳೆ ವಿವಿ ಕುಲಾಧಿಪತಿಗಳೂ ಆದ ರಾಜ್ಯಪಾಲರ ಲಭ್ಯತೆ ಇಲ್ಲದಿರುವ ಕಾರಣ ಮಾ.15ರ ಕಾರ್ಯಕ್ರಮ ಕೈಬಿಡಲು ನಿರ್ಧರಿಸಲಾಗಿತ್ತು. ಅಲ್ಲದೆ, ಹೊಸ ಕುಲಪತಿ ನೇಮಕವಾಗುವವರೆಗೆ ಘಟಿಕೋತ್ಸವ ನಡೆಸದಂತೆ ಸದಸ್ಯರು ಒಕ್ಕೊರಲ ಆಗ್ರಹ ಕೂಡ ಮಾಡಿದ್ದರು ಎನ್ನಲಾಗಿದೆ. ಆದರೆ, ಘಟಿಕೋತ್ಸವದಲ್ಲಿ ಭಾಗಹಿಸಲು ರಾಜ್ಯಪಾಲರು ಸಮಯಕೊಟ್ಟಿದ್ದಾರೆಂದು ಫೆ.28ಕ್ಕೆ ಮತ್ತೆ ಸಿಂಡಿಕೇಟ್ ಸಭೆಯನ್ನು ಕುಲಪತಿ ಸೂಚನೆ ಮೇರೆಗೆ 3 ದಿನಗಳಲ್ಲಿ ಕರೆಯಲಾಗಿತ್ತಾದರೂ ಈ ಸಭೆಯನ್ನು ಸಿಂಡಿಕೇಟ್ ಸದಸ್ಯರು ಬಹಿಷ್ಕರಿಸಿದ್ದ ಪರಿಣಾಮ ಅಂದು ಸಭೆ ನಡೆಯಲಿಲ್ಲ. ಘಟಿಕೋತ್ಸವ ನಡೆಸುವ ಕುಲಪತಿಗಳ ಕೊನೆ ಪ್ರಯತ್ನವೂ ಕೈಗೂಡದಂತಾಯಿತು. ಹಾಗಾಗಿ, ಈ ಮಾರ್ಚ್‌ನಲ್ಲಿ ನಡೆಯಬೇಕಿದ್ದ ವಾರ್ಷಿಕ ಘಟಿಕೋತ್ಸವದ ಮೇಲೆ ಗ್ರಹಣ ಕವಿದಂತಾಗಿದ್ದು ಹೊಸ ಕುಲಪತಿಗಳು ಬರುವವರೆಗೆ ಸ್ನಾತಕ, ಸ್ನಾತಕೋತ್ತರ, ಪಿಎಚ್‌ಡಿ ಪದವಿ ಪುರಸ್ಕೃತರು, ರ‌್ಯಾಂಕ್ ವಿಜೇತರು ಅನಿವಾರ್ಯವಾಗಿ ಕಾಯುವಂತಾಗಿದೆ.

ಸಿಂಡಿಕೇಟ್ ಸಭೆ ಗಮನಕ್ಕೂ ತರದೆ ಘಟಿಕೋತ್ಸವ ದಿನಾಂಕವನ್ನು ನಿಗದಿಪಡಿಸಿಕೊಂಡು ಕುಲಪತಿಗಳು ಸಭೆಯಲ್ಲಿ ಪ್ರಸ್ತಾಪಿಸಿದ್ದರಿಂದ ಎಲ್ಲರೂ ಆಕ್ಷೇಪ ವ್ಯಕ್ತಪಡಿಸಿದ್ದೆವು. ರಾಜ್ಯಪಾಲರು ಸಹ ಸಮಯ ಕೊಟ್ಟಿರಲಿಲ್ಲ. ಮತ್ತೆ ಫೆ.28ಕ್ಕೆ ಸಭೆ ಕರೆದು ಘಟಿಕೋತ್ಸವ ನಡೆಸಲು ತರಾತುರಿ ನಡೆಸಿದ್ದು ನಾವೆಲ್ಲಾ ಸಭೆ ಬಹಿಷ್ಕರಿಸಿದ್ದೆವು. ಘಟಿಕೋತ್ಸವ ನಡೆಸಲು ಕನಿಷ್ಠ ಒಂದೂವರೆ ತಿಂಗಳು ಮುಂಚಿತವಾಗಿ ತಯಾರಿ ಬೇಕಿದೆ. ಆರ್.ಕೆ.ಶ್ರೀನಿವಾಸ್ ಸಿಂಡಿಕೇಟ್ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net