ಬೆಳಗಾವಿ: ಘಟಪ್ರಭಾ ದಡದಲ್ಲಿ ಭವ್ಯವಾದ 108 ಅಡಿಯ ‘ಬಸವೇಶ್ವರರ ಮೂರ್ತಿ ಪ್ರತಿಷ್ಠಾಪನೆ’ ಮಾಡಬೇಕೆನ್ನುವ ಬೇಡಿಕೆ ಈಡೇರಿಸುತ್ತೇನೆ. ಇದಕ್ಕೆ ಸಂಬಂಧಿಸಿದ ಮಾಹಿತಿ ತರೆಸಿಕೊಂಡು ಅನುಷ್ಠಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ನಗರದ ಗೋವಾವೇಸ್‌ನ ಬಸವೇಶ್ವರ ಉದ್ಯಾನದಲ್ಲಿ ಬುಧವಾರ ‘ಬಸವೇಶ್ವರರ ಕಂಚಿನ ಮೂರ್ತಿ’ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಘಟಪ್ರಭಾ ದಡದಲ್ಲಿ ಭವ್ಯವಾದ 108 ಅಡಿ ಬಸವಣ್ಣನವರ ಮೂರ್ತಿ ಮಾಡಬೇಕೆಂದು ಸ್ವಾಮೀಜಿಗಳು ಹಾಗೂ ಈ ಭಾಗದ ಶರಣರ ಆಶಯವಾಗಿದೆ. ಈ ಬಗ್ಗೆ ಡಾ. ಪ್ರಭಾಕರ ಕೋರೆ, ಎಂ.ಬಿ. ಝಿರಲಿ ಇತರರು ಮಾಹಿತಿ ನೀಡಿ ಮನವಿ ಮಾಡಿದ್ದಾರೆ. ಅದರಂತೆ ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳುತ್ತೇನೆ. ಘಟಪ್ರಭಾದಲ್ಲಿ ದೊಡ್ಡ ಮೂರ್ತಿ ಪ್ರತಿಷ್ಠಾಪನೆ ಮಾಡಿ, ವಿಶ್ವಮಟ್ಟದಲ್ಲಿ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು ಎಂದರು. ಸತ್ಯದ ಆಧಾರದ ಮೇಲೆ ಬಸವಣ್ಣನವರ ವಿಚಾರಗಳಿವೆ. ಶುದ್ಧ ಕನ್ನಡದಲ್ಲಿ ವಚನಗಳು ಇರುವುದರಿಂದ ಎಲ್ಲಿಯವರೆಗೂ ಕಾಲ ಇರುತ್ತದೆ ಅಲ್ಲಿಯವರೆಗೂ ಕನ್ನಡ ಹಾಗೂ ಬಸವಣ್ಣನವರು ಇರುತ್ತಾರೆ ಎಂದರು.
ಬೆಳಗಾವಿಯಲ್ಲಿ ನೂತನವಾಗಿ ಬಸವೇಶ್ವರರ ಮೂರ್ತಿ ಸ್ಥಾಪನೆ ಮಾಡುತ್ತಿರುವುದು ಸಂತಸದ ಸಂಗತಿ. ಬಸವಣ್ಣನ ಕೆಲಸ ದೇವರ ಕೆಲಸ ಎಂದು ಒಪ್ಪಿಕೊಂಡು ಬಂದಿದ್ದೇನೆ. ಬಸವಣ್ಣ ನಮ್ಮೆಲರ ಬದುಕಿನಲ್ಲಿ ಹಾಸು ಹೊಕ್ಕಿದ್ದಾರೆ. ಅವರ ವಿಚಾರಗಳು ಎಲ್ಲರಿಗೂ ತಿಳಿದಿದೆ. ಅವರು ಬದುಕಿನ ದಾರಿ ತೋರಿಸಿದ್ದಾರೆ. ಅವರು ಅಂದು ಮಾಡಿದ್ದ ಅನುಭವ ಮಂಟಪ, ವಿಶ್ವದ ಮೊದಲನೇ ಪಾರ್ಲಿಮೆಂಟ್ ಎಂಬ ಖ್ಯಾತಿ ಇದೆ. ಬಸವೇಶ್ವರರ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಅವರ ವಿಚಾರಗಳಂತೆ ಸಾಗಬೇಕು ಎಂದರು.
ಕೆಎಲ್‌ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಮಾತನಾಡಿ, ಬಸವೇಶ್ವರ ವೃತ್ತದಲ್ಲಿ ಬಸವೇಶ್ವರರ ಮೂರ್ತಿಯನ್ನು 60 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದೆ. ಇದು ಬಹಳ ಹಳೇಯದಾದ ಹಿನ್ನೆಲೆಯಲ್ಲಿ ವೀರಶೈವ ಮಹಾಸಭಾದವರೊಂದಿಗೆ ಚರ್ಚೆ ಮಾಡಿ ಕಂಚಿನ ಮೂರ್ತಿ ಸ್ಥಾಪನೆ ಮಾಡುವು ಯೋಚನೆ ಮಾಡಲಾಗಿತ್ತು. ಈಗಾಗಲೇ ಮುಂಬೈನಲ್ಲಿ ಕಂಚಿನ ಮೂರ್ತಿ ಸಿದ್ಧತೆ ಕಾರ್ಯ ಅಂತಿಮ ಹಂತದಲ್ಲಿದೆ ಎಂದರು.
ಬಸವರಾಜ ಬೊಮ್ಮಾಯಿ ಅವರು ಮುಂದಿನ ಬಾರಿಯೂ ಮುಖ್ಯಮಂತ್ರಿಯಾಗಲಿ, ಸರ್ದಾರ್ ವಲ್ಲಭಾಯಿ ಪಟೇಲ್ ಮಾದರಿಯಲ್ಲಿ ಘಟಪ್ರಭಾದಲ್ಲಿ ವಿಶ್ವಕ್ಕೆ ಮಾದರಿಯಾಗಿರುವ ಬಸವಣ್ಣನವರ ಮೂರ್ತಿ ಸ್ಥಾಪಿಸಬೇಕು ಎಂದು ಮನವಿ ಮಾಡಿದರು. ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ತೋಂಟದಾರ್ಯ ಜಗದ್ಗುರು ಡಾ. ಸಿದ್ಧರಾಮ ಸ್ವಾಮೀಜಿ, ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ಮೇಯರ್ ಶೋಭಾ ಸೋಮನಾಚೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಅಭಯ ಪಾಟೀಲ, ಅನಿಲ್ ಬೆನಕೆ, ದುರ್ಯೋಧನ ಐಹೊಳೆ, ಲಕ್ಷ್ಮೀ ಹೆಬ್ಬಾಳ್ಕರ್, ಚನ್ನರಾಜ ಹಟ್ಟಿಹೊಳಿ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲ ಇತರರಿದ್ದರು.