

ಬಾಗಲಕೋಟೆ: ಘಟಪ್ರಭಾ ರೌದ್ರನರ್ತನಕ್ಕೆ ಸಿಕ್ಕು ಮಾಚಕನೂರು ಗ್ರಾಮದ ನದಿ ದಡದಿಂದ ಎತ್ತರ ಪ್ರದೇಶದಲ್ಲಿ ಇರುವ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದೆ. ಅಲ್ಲದೇ ಪ್ರವಾಹದ ಹೊಡೆತಕ್ಕೆ ಬೃಹತ್ ಆಲದಮರವೊಂದು ಬುಡಸಮೇತ ಉರುಳಿ ವಾಣಿಜ್ಯ ಮಳಿಗೆಗಳ ಮೇಲೆ ಬಿದ್ದಿದೆ.
ಮುಧೋಳ ತಾಲೂಕಿನ ಮಾಚಕನೂರ ಗ್ರಾಮದ ಸೇತುವೆ ಹಾಗೂ ಹೊಳೆಬಸವೇಶ್ವರ ದೇವಸ್ಥಾನ ಜಲಾವೃತವಾಗಿದೆ. ನದಿ ದಡದಲ್ಲಿ ಹಲವು ಆಲದಮರಗಳು ಇದ್ದು, ಇದರಲ್ಲಿ ಒಂದು ಮರ ಬುಡಸಮೇತ ಉರುಳಿ, ಅಂಗಡಿಗಳ ಮೇಲೆ ಬಿದ್ದಿದೆ. ಇದರಿಂದ ಮೂರು ಅಂಗಡಿಗಳು ಜಖಂಗೊಂಡಿವೆ.
ಅಟೋವರ್ಕ್ಸ್, ಕಟಿಂಗ್ ಶಾಪ್ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಪೈಪ್ ಮಳಿಗೆಗಳ ಮೇಲೆ ಮರ ಬಿದ್ದಿದೆ. ಪ್ರವಾಹದಿಂದ ಅಂಗಡಿಗಳಿಗೆ ನೀರು ನುಗ್ಗಿದ್ದರಿಂದ ಬಂದ್ ಆಗಿದ್ದವು. ಹೀಗಾಗಿ ಮರ ಬಿದ್ದಾಗ ಅಲ್ಲಿ ಯಾರು ಇರಲಿಲ್ಲ. ಹೀಗಾಗಿ ಯಾವುದೇ ಜೀವಹಾನಿ ಸಂಭವಿಸಿಲ್ಲ.
ಇನ್ನು ಗ್ರಾಮದ ನದಿ ದಡದಲ್ಲಿ ಇರುವ ಹೊಳೆಬಸವೇಶ್ವರ ದೇವಾಸ್ಥಾನ ಕಳೆದ ನಾಲ್ಕÊೆದು ದಿನಗಳಿಂದ ಜಲಾವೃತವಾಗಿದ್ದು, ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದರಿಂದ ಮಂಗಳವಾರ ದೇವಾಲಯ ಸಂಪೂರ್ಣ ಮುಳುಗಿದ್ದು, ಹಣೆಪಟ್ಟೆ ಮೇಲಿಂದ ಗೋಪುರ ಮಾತ್ರ ಕಣಿಸುತ್ತಿದೆ. ಹೀಗಾಗಿ ಭಕ್ತರು ದೇವಾಲಯಕ್ಕೆ ಹೋಗಲಾಗದೇ ನದಿ ದಡದಲ್ಲಿ ನಿಂತು ದೇವರಿಗೆ ಕೈಮುಗಿದು ಹೋಗುತ್ತಿದ್ದಾರೆ.