ಘಟಪ್ರಭಾ ಕಾರ್ಖಾನೆ ಯಾರಪ್ಪನ ಆಸ್ತಿ ಅಲ್ಲ

12GKK10
ಗೋಕಾಕ ನಗರದ ಹೊರವಲಯದಲ್ಲಿರುವ ಪ್ರಿಯದರ್ಶಿನಿ ಸಮುದಾಯ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಟ್ರ್ಯಾಕ್ಟರ್ ಮಾಲೀಕರ ಮತ್ತು ಮಕ್ತೆದಾರರ ಸಭೆಯಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾತನಾಡಿದರು. ಉತ್ತಮ ಪಾಟೀಲ, ಅಭಿನಂದನ ಪಾಟೀಲ, ಸೈದಪ್ಪ ಗದಾಡಿ ಉಪಸ್ಥಿತರಿದ್ದರು.
Published on

ಗೋಕಾಕ: ರೈತರ ಕಲ್ಯಾಣಕ್ಕಾಗಿ ಸಹಕಾರ ತತ್ತ್ವದಡಿ ಸ್ಥಾಪನೆಯಾಗಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಕುರಿತು ಇತ್ತೀಚೆಗೆ ಕೆಲವರು ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಇಂತಹ ವದಂತಿಗಳನ್ನು ಯಾರೂ ನಂಬಬಾರದು. ಕಾರ್ಖಾನೆ ಈಗಲೂ ನಮ್ಮ ಆಡಳಿತದಲ್ಲಿದೆ ಎಂದು ಕಾರ್ಖಾನೆಯ ಮಾರ್ಗದರ್ಶಕರೂ ಆಗಿರುವ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸ್ಪಷ್ಟಪಡಿಸಿದರು.

ನಗರದ ಹೊರವಲಯದಲ್ಲಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಿಯದರ್ಶಿನಿ ಸಮುದಾಯ ಭವನದಲ್ಲಿ ಟ್ರ್ಯಾಕ್ಟರ್ ಮಾಲೀಕರು ಹಾಗೂ ಮಕ್ತೆದಾರರ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಖಾನೆಗೆ ಬೆನ್ನೆಲುಬಾಗಿ ನಿಂತಿರುವ ರೈತರನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ. ರೈತರೇ ನಮ್ಮ ಕಾರ್ಖಾನೆಗೆ ಆಧಾರ ಸ್ತಂಭವಾಗಿದ್ದಾರೆ ಎಂದು ಹೇಳಿದರು.

ಕಾರ್ಖಾನೆ ಯಾರಪ್ಪನ ಆಸ್ತಿಯೂ ಅಲ್ಲ. ಇದು ರೈತರ ಸ್ವತ್ತು. ಬೇರೊಬ್ಬರಿಗೆ ಮಾರಾಟ ಮಾಡುವ ಪ್ರಶ್ನೆಯೇ ಇಲ್ಲ. ಕಾರ್ಖಾನೆಯು ನಷ್ಟದಲ್ಲಿದ್ದ ಸಂದರ್ಭದಲ್ಲಿ ಬೋರಗಾಂವ ಅರಿಹಂತ ಸೊಸೈಟಿಯಿಂದ ಸಾಲದ ರೂಪದಲ್ಲಿ ಹಣ ಪಡೆದಿದ್ದೇವೆ.

ರೈತರ ಕಬ್ಬಿನ ಬಿಲ್ ಸಂದಾಯ ಮಾಡಲು ಅರಿಹಂತ ಸಂಸ್ಥೆಯಿಂದ ಸಹಾಯ ಪಡೆದುಕೊಂಡಿದ್ದೇವೆ. ಇದನ್ನೇ ಬಂಡವಾಳವನ್ನಿಟ್ಟುಕೊಂಡು ಕೆಲ ಹಿತಾಸಕ್ತಿಗಳು ಕಾರ್ಖಾನೆಯನ್ನು ಮಾರಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ಸಂಗತಿ ಎಂದು ಸ್ಪಷ್ಟಪಡಿಸಿದರು.

ರೈತರಿಗೆ ಮೋಸವಾಗದು: ಕಾರ್ಖಾನೆಗೆ ಎಷ್ಟೇ ಹಾನಿಯಾದರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇವೆ. ರೈತರ ಹಿತ ಕಾಪಾಡುತ್ತೇವೆ.
1992ರಿಂದ ರೈತರ ಸಹಕಾರದೊಂದಿಗೆ ಅಧಿಕಾರದ ಗದ್ದುಗೆ ಹಿಡಿದಿರುವ ನಾವುಗಳು ಎಷ್ಟೇ ಸಮಸ್ಯೆಗಳು ಎದುರಾದರೂ ಅವುಗಳನ್ನು ಮೆಟ್ಟಿ ನಿಂತು ರೈತರು, ಕಾರ್ಮಿಕರ ಏಳ್ಗೆಗಾಗಿ ಎಲ್ಲ ಸಕ್ಕರೆ ಕಾರ್ಖಾನೆಗಳಿಗಿಂತ ಅಧಿಕ ಬಿಲ್ ನೀಡುತ್ತಿರುವ ನಾವು ಎಂದಿಗೂ ರೈತರಿಗೆ ಮೋಸ ಮಾಡುವುದಿಲ್ಲ. ನಮ್ಮ ವಿರೋಧಿಗಳು ಏನೇ ಲೆಕ್ಕಾಚಾರ ಹಾಕಿದರೂ ಅದಕ್ಕೆ ರೈತರು ಸೊಪ್ಪು ಹಾಕುವುದಿಲ್ಲ ಎಂದು ಬಾಲಚಂದ್ರ ತಿಳಿಸಿದರು.

ಅಕ್ಟೋಬರ್ ತಿಂಗಳಲ್ಲಿ ಹಂಗಾಮು ಆರಂಭ: ಕಾರ್ಖಾನೆಯ ಕಬ್ಬು ನುರಿಸುವ ಹಂಗಾಮನ್ನು ಸೆಪ್ಟೆಂಬರ್ ತಿಂಗಳ ಬದಲಾಗಿ ಅಕ್ಟೋಬರ್ 15ಕ್ಕೆ ಪ್ರಾರಂಭಿಸುವ ಗುರಿ ಹೊಂದಲಾಗಿದೆ. ಕಬ್ಬು ಅಭಿವೃದ್ಧಿ ವಿಭಾಗದ ಸಿಬ್ಬಂದಿಯು ರೈತರೊಂದಿಗೆ ಕೆಲ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದು, ಕಾರ್ಖಾನೆಯ ಬೆನ್ನೆಲಬಾಗಿರುವ ರೈತರೊಂದಿಗೆ ಉತ್ತಮವಾಗಿ ವ್ಯವಹರಿಸುವ ಪರಿಪಾಠ ರೂಢಿಸಿಕೊಳ್ಳಬೇಕು. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದರೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, 2 ವರ್ಷದೊಳಗೆ ಕಾರ್ಖಾನೆಗೆ ಹೆಚ್ಚಿನ ಲಾಭ ತಂದು ಅಭಿವೃದ್ಧಿಪಡಿಸುವ ಭರವಸೆ ನೀಡಿದರು. ಉದ್ಯಮಿಗಳಾದ ಅಭಿನಂದನ ಪಾಟೀಲ, ಉತ್ತಮ ಪಾಟೀಲ, ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net