ಘಟಕವಿದ್ದರೂ ಸಿಗದ ಶುದ್ಧ ಕುಡಿಯುವ ನೀರು

28KMD-1
Published on

ಕೆ.ಎಂ.ದೊಡ್ಡಿ: ಸಮೀಪದ ಬಿದರಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿದ್ದರೂ ನಿರ್ವಹಣೆ ಕೊರತೆಯಿಂದ ಕುಡಿಯಲು ನೀರು ಯೋಗ್ಯವಲ್ಲದ ಸ್ಥಿತಿಗೆ ಬಂದು ತಲುಪಿದೆ.


ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಹಾಗೂ ಆರೋಗ್ಯ ಪೂರ್ಣ ಕುಡಿಯುವ ನೀರು ಪೂರೈಸುವ ಸಲುವಾಗಿ ಸರ್ಕಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿತ್ತು. ಜನರು 2 ರೂ.ಹಾಗೂ 5 ರೂ.ನಾಣ್ಯವನ್ನು ಹಾಕಿ 20 ಲೀ ಶುದ್ಧ ಕುಡಿಯುವ ನೀರನ್ನು ಪಡೆಯಬಹುದಾಗಿತ್ತು.


ಆದರೆ ಬಹುತೇಕ ಕಡೆ ಈ ರೀತಿಯ ನೀರಿನ ಘಟಕಗಳು ನಿಷ್ಪ್ರಯೋಜಕವಾಗಿವೆ. ಶುದ್ಧ ನೀರಿನ ಘಟಕವನ್ನು ಮೂರು ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದರೂ ಇಲ್ಲಿ ಕುಡಿಯುವ ನೀರನ್ನು ಯಾರೂ ಉಪಯೋಗಿಸುತ್ತಿಲ್ಲ. ಈ ನೀರಿನ ಘಟಕಕ್ಕೆ ಮೂರು ಬೋರ್‌ವೆಲ್‌ಗಳ ನೀರು ಬರುವುದರಿಂದ ಕುಡಿಯಲು ಯೋಗ್ಯವಿಲ್ಲದಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


ಪಕ್ಕದ ಹಳ್ಳಿಯ ಶುದ್ಧ ನೀರಿನ ಘಟಕಕ್ಕೆ ತೆರಳಿ ನೀರನ್ನು ಕ್ಯಾನ್ ಮುಖಾಂತರ ತಗೆದುಕೊಂಡು ಬರುತ್ತಿದ್ದಾರೆ. ಸುಮಾರು 8 ಲಕ್ಷ ರೂ.ವೆಚ್ಚದ ನೀರಿನ ಘಟಕ ಇದ್ದು ಪ್ರಯೋಜನಕ್ಕೆ ಬಾರದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಜನರಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಯಾವ ರೀತಿ ಪೋಲು ಮಾಡುತ್ತರೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ.

ಯಂತ್ರೋಪಕರಣಗಳು ತುಕ್ಕು ಹಿಡಿಯುತ್ತಿವೆ: ಶುದ್ಧ ನೀರಿನ ಘಟಕಗಳು ಕಾರ್ಯ ನಿರ್ವಹಿಸದೆ ಇರುವುದರಿಂದ ಗ್ರಾಮಸ್ಥರು ಪಕ್ಕದ ಹಳ್ಳಿಗೆ ನೀರಿಗಾಗಿ ಅಲೆದಾಡುವ ಸ್ಥಿತಿ ಬಂದೊದಗಿದೆ. ನೀರಿನ ಘಟಕಗಳನ್ನು ದುರಸ್ತಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕಿದೆ. ಲಕ್ಷಾಂತರ ರೂ.ವೆಚ್ಚ ಮಾಡಿ ನಿರ್ಮಿಸಿರುವ ಘಟಕದ ಯಂತ್ರೋಪಕರಣಗಳು ತುಕ್ಕು ಹಿಡಿಯುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳದಿರುವುದು ವಿಪರ್ಯಾಸದ ಸಂಗತಿಯಾಗಿದೆ.

ಪಿಡಿಒ ಕುಮಾರ್, ಈ ವಿಷಯವನ್ನು ಇದುವರೆಗೂ ನನ್ನ ಗಮನಕ್ಕೆ ಯಾರೂ ತಂದಿಲ್ಲ. ಆ ತರಹ ನೀರಿನಲ್ಲಿ ಏನಾದರೂ ತೊಂದರೆ ಇದ್ದರೆ ಲ್ಯಾಬ್‌ಗೆ ಕಳುಹಿಸಿ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net