ಘಟಕದ ಶ್ರೇಯೋಭಿವೃದ್ಧಿಗೆ ಅಗತ್ಯ ಕ್ರಮಕೈಕೊಳ್ಳಿ

16-9jvg03
Published on

ಜೇವರ್ಗಿ : ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಆಹಾರ ಸಂಸ್ಕರಣಾ ಘಟಕಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಬುಧವಾರ ಭೇಟಿ ನೀಡಿದರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ಈಗಾಗಲೇ ಆಹಾರ ಸಂಸ್ಕರಣಾ ಘಟಕವನ್ನು ಗುತ್ತಿಗೆ ಆಧಾರದ ಮೇಲೆ ಪಡೆದಿದ್ದ ಅಕ್ಷಯ ಫುಡ್ಸ್ ಕಂಪನಿ ಅವರ ಅವಧಿ ಮುಗಿದಿದ್ದು, ಅವರು ಮತ್ತೇ ರಾಜ್ಯ ಸಣ್ಣ ಪ್ರಮಾಣದ ಕೈಗಾರಿಕೆ ಅಭಿವೃದ್ಧಿ ನಿಗಮದಿಂದ ಅವಧಿ ಗುತ್ತಿಗೆ ನವೀಕರಿಸಿಕೊಳ್ಳಬೇಕು ಎಂದರು.
ಆಹಾರ ಸಂಸ್ಕರಣಾ ಘಟಕಕ್ಕೆ ಮೂಲಸೌಕರ್ಯ ಕಲ್ಪಿಸುವುದರ ಮೂಲಕ ನಿವೇಶನಗಳನ್ನು ಪಡೆದು ಉಪ ಗುತ್ತಿಗೆಯವರಿಗೆ ಕೈಗಾರಿಕೆ ಸ್ಥಾಪಿಸಲು ಅವಧಿ ವಿಸ್ತರಣೆ ಮಾಡಿಸಿಕೊಡಬೇಕು. ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ಆರಂಭಿಸಲು ಸರ್ಕಾರದಿಂದ ಹಾಗೂ ಬ್ಯಾಂಕ್ಗಳಿಂದ ಸಾಲ ಸೌಲಭ್ಯ ಪಡೆದುಕೊಳ್ಳಲು ಅಕ್ಷಯ್ ಫುಡ್ಸ್ ಕಂಪನಿ ಸಹಾಯ ಕಲ್ಪಿಸಿಕೊಡಬೇಕು. ಈ ಕುರಿತು ಬೆಂಗಳೂರಿನಲ್ಲಿ ಶೀಘ್ರದಲ್ಲಿಯೇ ಕೃಷಿ ಹಾಗೂ ಕೈಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಘಟಕದ ಶ್ರೇಯೋಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗುವುದು ಎಂದು ಹೇಳಿದರು.
ಘಟಕದಲ್ಲಿ ನಿವೇಶನ ಪಡೆದುಕೊಂಡ ಸಣ್ಣ ಕೈಗಾರಿಕೆ ಉದ್ಯಮಿಗಳು ಕೃಷಿ ಸಚಿವರಿಗೆ ಮನವಿ ಸಲ್ಲಿಸಿದರು. ಪ್ರಮುಖವಾಗಿ ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಲೀಸ್ ಅವಧಿ 5 ರಿಂದ 8 ವರ್ಷಕ್ಕೆ ವಿಸ್ತರಣೆ ಮಾಡಬೇಕೆಂದು ಒತ್ತಾಯಿಸಿದರು.
ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ಧೇವಾಡಗಿ, ಮುಖಂಡರಾದ ರಮೇಶ ಬಾಬು ವಕೀಲ, ಬಸವರಾಜ ಮುಕ್ಕಾಣಿ, ಬಸವರಾಜ ಪಾಟೀಲ ನರಿಬೋಳ, ಬಾಪುಗೌಡ ಬಿರಾಳ, ಅಕಬರ ಅಂಕಲಗಾ, ಮಹಾಂತ ಸಾಹು ಹರವಾಳ, ಬಸವರಾಜ ಸಾಸಾಬಾಳ, ಸಂತೋಷ ಸೊಪ್ಪಣ್ಣ, ಅಶೋಕ ಗುಡೂರ, ರವೀಂದ್ರ ವಕೀಲ, ಶರಣು ರಾಂಪೂರ, ಕಾಶಿಂ ಜವಳಗಿ, ದೇವಿಂದ್ರಪ್ಪಗೌಡ ಹಳ್ಳಿ, ಮಲ್ಲಣಗೌಡ ಗುಳ್ಯಾಳ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net