ಘಟಕ ತೆರವುಗೊಳಿಸುವವರೆಗೂ ಪ್ರತಿಭಟನೆ, ಪ್ರತಿಭಟನಕಾರರ ಎಚ್ಚರಿಕೆ*ಎಂಎಸ್‌ಜಿಪಿ ಕಸ ಘಟಕದ ಎದುರು ಧರಣಿ

25dbp2
Published on

ದೊಡ್ಡಬಳ್ಳಾಪುರ: ಜನಜೀವನವನ್ನು ಅಸ್ತವ್ಯಸ್ತಗೊಳಿಸಿರುವ ತಾಲೂಕಿನ ಚಿಗರೇನಹಳ್ಳಿ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕ ತೆರವುಗೊಳಿಸುವಂತೆ ನವ ಬೆಂಗಳೂರು ಹೋರಾಟ ಸಮಿತಿ, ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸರ್ವ ಸದಸ್ಯರ ನೇತೃತ್ವದಲ್ಲಿ ಗುಂಡ್ಲಹಳ್ಳಿ ಕ್ರಾಸ್‌ನಲ್ಲಿ ಗುರುವಾರದಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ ಆರಂಭಿಸಿದೆ.

ಇಲ್ಲಿನ ಘಟಕವನ್ನು ತೆರವುಗೊಳಿಸುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪ್ರತಿಭಟನಕಾರರು ಪಟ್ಟು ಹಿಡಿದಿದ್ದಾರೆ. ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ಎದುರಿಸುತ್ತಿರುವ ದುಷ್ಪರಿಣಾಮಗಳ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೂ ಮನವಿ ಸಲ್ಲಿಸಿದರೂ ಕ್ರಮಕ್ಕೆ ಮುಂದಾಗಿಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ವಿಷ ಗಾಳಿ ಸೇವನೆ: ನವ ಬೆಂಗಳೂರು ಹೋರಾಟ ಸಮಿತಿ ಗೌರವಾಧ್ಯಕ್ಷ ಸಾರಥಿ ಸತ್ಯಪ್ರಕಾಶ್ ಮಾತನಾಡಿ, ದಶಕದಿಂದ ಕಸದ ವಿರುದ್ಧ ಹೋರಾಟ ನಡೆಸುತ್ತಲೇ ಬಂದಿದ್ದೇವೆ. ಇದರ ಪರಿಣಾಮವಾಗಿ ಟೆರ‌್ರಾ ಾರ್ಮ ಕಸ ವಿಲೇವಾರಿ ಘಟಕ ತೆರವುಗೊಳಿಸಿದರು. ಆದರೆ ಅದರ ಹಿಂದೆಯೇ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವಂತೆ ಎಂಎಸ್‌ಜಿಪಿ ಪ್ರಾರಂಭ ಮಾಡಿ ಇಲ್ಲಿನ ಜನ ಜೀವನವನ್ನು ಸಂಕಷ್ಟಕ್ಕೆ ದೂಡಿದ್ದಾರೆ ಎಂದರು.

ಗ್ರಾಮಗಳಲ್ಲಿ ವಿಷಯುಕ್ತ ನೀರನ್ನು ಕುಡಿಯುತ್ತಿರುವುದಲ್ಲದೆ ವಿಷದ ಗಾಳಿ ಸೇವಿಸುವಂತಾಗಿದೆ. ಜನತೆ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಬಹುತೇಕ ಮಂದಿಯಲ್ಲಿ ಮೂಳೆ ಸವೆತ ಕಾಣಿಸಿಕೊಳ್ಳುತ್ತಿದೆ. ಅಧಿಕಾರಿಗಳು ಜಾಣ ಮೌನಕ್ಕೆ ಶರಣಾಗಿದ್ದಾರೆ. ಹೀಗಾಗಿ ಇಲ್ಲಿನ ಜನವಸತಿ ಪ್ರದೇಶದ ಕೂಗಳತೆಯಲ್ಲಿರುವ ಎಂಎಸ್‌ಜಿಪಿಯನ್ನು ಎತ್ತಂಗಡಿ ಮಾಡದ ಹೊರತು ಪ್ರತಿಭಟನೆ ಕೈ ಬಿಡುವುದಿಲ್ಲ ಎಂದರು.

ಮಧ್ಯಾಹ್ನದ ನಂತರ ಅಧಿಕಾರಿಗಳ ದೌಡು: ಮಧ್ಯಾಹ್ನದ ನಂತರ ಸ್ಥಳಕ್ಕೆ ದೌಡಾಯಿಸಿದ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಉಪ ವಿಭಾಗಾಧಿಕಾರಿ ಅರುಳ್‌ಕುಮಾರ್, ಜಿಲ್ಲಾಪಂಚಾಯಿತಿ ಸಿಇಒ ರವಿಕುಮಾರ್, ತಹಸೀಲ್ದಾರ್ ಟಿ.ಎಸ್.ಶಿವರಾಜ್, ಬಿಬಿಎಂಪಿ ಘನ ತ್ಯಾಜ್ಯ ನಿರ್ವಹಣಾ ಘಟಕದ ಅಧಿಕಾರಿಗಳು ಪ್ರತಿಭಟನಕಾರರ ಜತೆ ಚರ್ಚೆ ನಡೆಸಿದರು. ನೀವು ಸ್ಥಳ ಪರಿಶೀಲನೆ ಮಾಡಿ ನೋವನ್ನು ಅರ್ಥ ಮಾಡಿಕೊಳ್ಳಿ ನಂತರ ಮಾತನಾಡಿ ಎಂಬ ಪ್ರತಿಭಟನಕಾರರ ಆಗ್ರಹಕ್ಕೆ ಮಣಿದ ಅಧಿಕಾರಿಗಳು ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಡಿಸಿ ಮನವಿಗೆ ಗ್ರಾಮಸ್ಥರ ನಕಾರ: ಸ್ಥಳ ಪರಿಶೀಲನೆ ಮಾಡಿದ್ದೇನೆ. ಅಲ್ಲಿನ ಸಮಸ್ಯೆಗಳು ಅರಿವಿಗೆ ಬಂದಿದೆ. ಕಲುಷಿತ ನೀರನ್ನು ಶುದ್ಧೀಕರಿಸಿ ಹೊರ ಬಿಟ್ಟು ವಾಸನೆ ಬಾರದಂತೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ, ರೈತರಿಗೆ ರಸ್ತೆ ನಿರ್ಮಿಸಿ ಕೊಡುವಂತೆ ತಿಳಿಸಿದ್ದೇನೆ ಬಿಬಿಎಂಪಿ ಅಧಿಕಾರಿಗಳು, ಕಸ ಘಟಕದ ಅಧಿಕಾರಿಗಳು ಬರಲಿದ್ದು, ಚರ್ಚಿಸಿ ಯಾರಿಗೂ ತೊಂದರೆಯಾಗದಂತೆ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲು ತಿಳಿಸುತ್ತೇನೆ ಎಂದ ಜಿಲ್ಲಾಧಿಕಾರಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ಡಿಸಿ ಮನವಿ ತಿರಸ್ಕರಿಸಿದ ಪ್ರತಿಭಟನಕಾರರು ಘಟಕ ತೆರವುಗೊಳಿಸುವಂತೆ ಪಟ್ಟು ಹಿಡಿದು ಆಹೋರಾತ್ರಿ ಧರಣಿ ಮುಂದುವರೆಸಿದರು.

ಯಾವ ಸೌಲಭ್ಯವೂ ಬೇಡ: ಶಾಲೆ ಮಾಡುವುದಾಗಿ ಭೂಮಿ ಖರೀದಿ ಮಾಡಿ ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದ್ದಾರೆ, ಯಾವುದೇ ಕಾರಣಕ್ಕೂ ಕಸ ಬರಲು ಬಿಡುವುದಿಲ್ಲ. ನಮಗೆ ಬಿಬಿಎಂಪಿ ಹಾಗು ಕಸ ಘಟಕದ ಯಾವುದೇ ಸೌಲಭ್ಯ ಬೇಕಾಗಿಲ್ಲ. ನಮ್ಮ ಜಾಗದಲ್ಲಿ ಕಸ ಹಾಕಲು ಬಿಡುವುದಿಲ್ಲ. ಕಸ ಘಟಕ ತೆರವು ಮಾಡಿ ಆದೇಶ ಹೊರಡಿಸುವವರೆಗೂ ಹೋರಾಟ ನಿರಂತರ ಎಂದು ಪ್ರತಿಭಟನೆ ನೇತೃತ್ವ ವಹಿಸಿರುವ ನವ ಬೆಂಗಳೂರು ಹೋರಾಟ ಸಮಿತಿ ಗೌರವಾಧ್ಯಕ್ಷ ಸಾರಥಿ ಸತ್ಯಪ್ರಕಾಶ್ ಹಾಗೂ ಸಮಿತಿ ಸಂಸ್ಥಾಪಕ ಅಧ್ಯಕ್ಷ ಪ್ರದೀಪ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net