

ಕಾಗವಾಡ: ಗ್ಲಾಕೋಮಾ (ಕಾಚಬಿಂದು) ನೇತ್ರರೋಗ ವಿಶ್ವಾದ್ಯಂತ ಪ್ರತಿ ವರ್ಷ ಲಕ್ಷಾಂತರ ಜನರಿಗೆ ಶಾಶ್ವತ ಕುರುಡುತನ ಉಂಟು ಮಾಡುತ್ತಿದೆ ಎಂದು ಶಾಂತಿ ಸರೋಜ ನೇತ್ರ ಚಿಕಿತ್ಸಾಲಯದ ಗ್ಲಾಕೋಮಾ ತಜ್ಞೆ ಡಾ. ಪೂಜಾ ಬೋಮಾಜ ವಿಷಾದ ವ್ಯಕ್ತಪಡಿಸಿದರು.
ಮಿರಜದ ಶಾಂತಿ ಸರೋಜ ನೇತ್ರಾಲಯದ ವತಿಯಿಂದ ವಿಶ್ವ ಗ್ಲಾಕೋಮಾ (ಕಾಚಬಿಂದು) ಸಪ್ತಾಹ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಕಾಚಬಿಂದು ಜನಜಾಗೃತಿ ಓಟದ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿ, ಶಸಚಿಕಿತ್ಸೆಯಿಂದ ಕಳೆದು ಹೋದ ದೃಷ್ಟಿ ಮರಳಿಸಲು ಸಾಧ್ಯವಿಲ್ಲ. ಆದರೆ, ಬೇಗ ಚಿಕಿತ್ಸೆ ಪಡೆಯುವುದು ದೃಷ್ಟಿ ಉಳಿಸಲು ಸಹಕರಿಸುತ್ತದೆ. ಈ ಕುರಿತು ಜಾಗೃತಿ ಅವಶ್ಯವಾಗಿದ್ದು, ಮುಂಜಾಗ್ರತೆಯಾಗಿ ವರ್ಷಕೊಮ್ಮೆಯಾದರೂ ಕಣ್ಣು ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು. ಮಿರಜದ ಗಾಂಧಿಚೌಕ್ ಪೋಲಿಸ್ ಠಾಣೆಯ ನಿರೀಕ್ಷಕ ನಿಲೇಶ್ ಕಾಟರೆ ಓಟದ ಸ್ಪರ್ಧೆಗೆ ಚಾಲನೆ ನೀಡಿದರು. 150 ನಾಗರಿಕರು ಭಾಗವಹಿಸಿದ್ದರು. ಆಸ್ಪತ್ರೆಯ ನಿರ್ದೇಶಕ ಡಾ. ಶರದ ಬೋಮಾಜ, ಡಾ. ಪೂಜಾ ಬೋಮಾಜ, ನಿಖಿತಾ ಪಾಟೀಲ, ಸಂಗೀತಾ ಶೆಟ್ಟಿ, ಸೋನಾಲಿ ಪವಾರ, ಇತರರು ಇದ್ದರು.