ಗ್ರೇಡ್-೨ ತಹಸೀಲ್ದಾರ್ ವಿರುದ್ಧ ಕ್ರಮಕ್ಕೆ ಒತ್ತಾಯ

25 HBD 1
ಚಿಟಗುಪ್ಪ ತಹಸೀಲ್ದಾರ್ ಕಚೇರಿ ಎದುರು ಬುಧವಾರ ನಾಗರಿಕ ಹಿತರಕ್ಷಣಾ ಸಮಿತಿಯಿಂದ ನಡೆದ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಬಸವಕಲ್ಯಾಣ ಎಸಿ ಮುಕುಲ್ ಜೈನ್ ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು. ತಹಸೀಲ್ದಾರ್ ಮಂಜುನಾಥ ಪಂಚಾಳ, ಪ್ರಮುಖರಾದ ಮಲ್ಲಿಕಾರ್ಜುನ ಪಾಟೀಲ್, ರವಿ ಸ್ವಾಮಿ ನಿರ್ಣಾ, ವಿಜಯಕುಮಾರ ಚಿಟಗುಪ್ಪಕರ, ಸಂಗಮೇಶ ಜವಾದಿ, ಶಾಮಾ ಭೂತಾಳೆ ಇತರರಿದ್ದರು.
Published on

ಚಿಟಗುಪ್ಪ: ಭ್ರಷ್ಟಾಚಾರ ಹಾಗೂ ಕ್ರಿಮಿನಲ್ ಆರೋಪ ಹೊತ್ತ ಅಧಿಕಾರಿಯನ್ನು ಮತ್ತದೇ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸಲು ಅನುಕೂಲ ಮಾಡಿಕೊಡಲಾಗಿದೆ ಎಂದು ಆರೋಪಿಸಿ ನಾಗರಿಕ ಹಿತರಕ್ಷಣಾ ಸಮಿತಿಯಿಂದ ಬುಧವಾರ ತಹಸೀಲ್ದಾರ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಯಿತು.

ಪ್ರಮುಖರಾದ ಮಲ್ಲಿಕಾರ್ಜುನ ಪಾಟೀಲ್, ರವಿ ಸ್ವಾಮಿ ನಿರ್ಣಾ, ವಿಜಯಕುಮಾರ ಚಿಟಗುಪ್ಪಕರ, ಸಂಗಮೇಶ ಜವಾದಿ ಮತ್ತಿತರರು ಮಾತನಾಡಿ, ಕ್ರಿಮಿನಲ್ ಪ್ರಕರಣ ಹಾಗೂ ಭ್ರಷ್ಟಾಚಾರ ವಿಷಯಕ್ಕೆ ಸಂಬಂಧಿಸಿದಂತೆ ಇಲ್ಲಿನ ಗ್ರೇಡ್-೨ ತಹಸೀಲ್ದಾರ್ ಜಯಶ್ರೀ ಅವರ ವಿರುದ್ಧ ಕ್ರಮಕೈಗೊಂಡು ಅಮಾನತುಗೊಳಿಸುವಂತೆ ಒತ್ತಾಯಿಸಿ ಹಿಂದೆ ಬೃಹತ್ ಪ್ರತಿಭಟನೆ ಮಾಡಲಾಗಿತ್ತು. ಅಲ್ಲದೇ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಹ ಸಲ್ಲಿಸಿ ಸೂಕ್ತ ಕಾನೂನು ಕ್ರಮಕೈಗೊಂಡು ಕೆಲಸದಿಂದ ಅಮಾನತು ಮಾಡಲು ಕೋರಲಾಗಿತ್ತು. ಆದರೆ ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳದೆ ಮೇಲಾಧಿಕಾರಿಗಳು ಅವರನ್ನು ಅದೇ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಟ್ಟಿರುವುದು ಖಂಡಿಸುತ್ತೇವೆ ಎಂದರು.

ಗ್ರೇಡ್-೨ ತಹಸೀಲ್ದಾರ್ ಜಯಶ್ರೀ ಅವರು ಜಾತಿ ಪ್ರಮಾಣಪತ್ರ,  ಸಂಧ್ಯಾ ಸುರಕ್ಷಾ, ಅಂಗವಿಕಲ ವೇತನ ಸೇರಿ ಇನ್ನಿತರೆ ಪ್ರಮಾಣ ಪತ್ರಗಳ ನೀಡಲು ಲಂಚ ಪಡೆಯುತ್ತಿರುವುದು ಹಾಗೂ ನಾಗರಿಕರ ಮೇಲೆ ದಬ್ಬಾಳಿಕೆ ಮಾಡುತ್ತಿರುವುದು ಕಾಣುತ್ತಿದ್ದೇವೆ. ಹಾಗಾಗಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಿದರೂ ಸಹ ಇಲ್ಲಿಯವರೆಗೆ ಯಾವುದೇ ರೀತಿಯ ಕಾನೂನು ಕ್ರಮ ಆಗಿರುವುದಿಲ್ಲ. ಇಂದು ಧರಣಿ ಸತ್ಯಾಗ್ರಹದ ಮೂಲಕ ಪುನಃ ಮನವಿ ಮಾಡುತ್ತಿದ್ದು, ತಹಸೀಲ್ದಾರ್ ಅವರನ್ನು ಸೇವೆಯಿಂದ ಅಮಾನತು ಮಾಡುವಂತೆ ಜಿಲ್ಲಾಧಿಕಾರಿ ಹಾಗೂ ಕಂದಾಯ ಸಚಿವರಿಗೆ ಬರೆದ ಮನವಿ ಪತ್ರ ಸ್ಥಳಕ್ಕೆ ಆಗಮಿಸಿದ ಬಸವಕಲ್ಯಾಣ ಸಹಾಯಕ ಆಯುಕ್ತ ಮುಕುಲ್ ಜೈನ್ ಅವರಿಗೆ ಸಲ್ಲಿಸಿದರು. ತಹಸೀಲ್ದಾರ ಮಂಜುನಾಥ ಪಂಚಾಳ ಜತೆಗಿದ್ದರು.

ಪ್ರಮುಖರಾದ ಶರಣು ಸಜ್ಜನಶೆಟ್ಟಿ, ಸಿದ್ರಾಮ ಗೌಳಿ, ಶಾಮಾ ಭೂತಾಳೆ, ಸಚಿನ ಮಠಪತಿ, ಅಮರರೆಡ್ಡಿ, ಸಿದ್ದು ಪಾಟೀಲï, ಪವನ ಪೂಜಾರಿ, ರಾಜು ಪೂಜಾರಿ, ಕಿರಣ ಭೋವಿ, ಅಮಿತ ಹೊಸದೊಡ್ಡಿ, ಪ್ರಕಾಶ ಡಾಂಗೆ,ರಾಜು ಚಟನಳ್ಳಿ ಇತರರು ಪಾಲ್ಗೊಂಡಿದ್ದರು.

ಧರಣಿ ಹಿಂದಕ್ಕೆ: ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಹಸಿಲï ಕಚೇರಿ ಆವರಣದಲ್ಲಿ ನಾಗರಿಕ ಸಮಿತಿ ಬುಧವಾರ ಆರಂಭಿಸಿದ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಬಸವಕಲ್ಯಾಣ ಎಸಿ ಮುಕುಲ್ ಜೈನ್ ಆಗಮಿಸಿ ಮನವಿ ಸ್ವೀಕರಿಸಿ ಧರಣಿ ಕೈಬಿಡುವಂತೆ ಪ್ರತಿಭಟನಕಾರರಿಗೆ ಮನವೊಲಿಸಿದರು ಸಹ ಬೇಡಿಕೆ ಈಡೇರಿಸುವವರೆಗೆ ಧರಣಿ ಸತ್ಯಾಗ್ರಹ ಮುಂದುವರೆಸಲಾಗುವುದು ಎಂದಾಗ, ಮೂರು ನಾಲ್ಕು ದಿನ ಸಮಯ ಕೊಡಿ ವಿಚಾರಣೆ ನಡೆಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರಿಂದ ಧರಣಿ ಮೊಟಕುಗೊಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net