ಗ್ರೇಡ್-1 ನಗರಸಭೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ

26rajesh7
Published on

ಚಾಮರಾಜನಗರ: ನಗರಸಭೆ ವ್ಯಾಪ್ತಿಯ 31 ವಾರ್ಡುಗಳಲ್ಲಿರುವ ಜನಸಂಖ್ಯೆಯು 90 ಸಾವಿರ ಮೀರಿದ್ದು, ಸನಿಹದಲ್ಲಿರುವ ಗ್ರಾಮಗಳನ್ನು ಸೇರ್ಪಡೆ ಮಾಡಿಕೊಂಡು ಗ್ರೇಡ್-1 ನಗರಸಭೆಯನ್ನಾಗಿಸಿ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವ ಸಲುವಾಗಿ ರಾಜ್ಯ ಸರ್ಕಾರಕ್ಕೆ ನಗರಸಭೆಯಿಂದ ಪ್ರಸ್ತಾವನೆಯನ್ನು ಸಲ್ಲಿಸುವುದಾಗಿ ನಗರಸಭೆ ಅಧ್ಯಕ್ಷ ಸುರೇಶ್ ತಿಳಿಸಿದರು.

ನಗರದ ಸಿಡಿಎಸ್ ಭವನದಲ್ಲಿ 2024-25ನೇ ಸಾಲಿನ ಪರಿಷ್ಕೃತ ಹಾಗೂ 2025-26ನೇ ಸಾಲಿನ ಅಯವ್ಯಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗರಸಭೆಗೆ ಈಗ ಸರ್ಕಾರದಿಂದ ಬರುತ್ತಿರುವ ಅನುದಾನ ಬಹಳ ಕಡಿಮೆ ಇದ್ದು, ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಹಾಗೂ ಏರುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳನ್ನು ಕಲ್ಪಿಸಲು ಕಷ್ಟಸಾಧ್ಯವಾಗುತ್ತಿದೆ. ಅಲ್ಲದೇ ಜಿಲ್ಲಾ ಕೇಂದ್ರವಾದ ಬಳಿಕ ನಗರಸಭೆ ವ್ಯಾಪ್ತಿಗೆ ಬರುವಂತೆ ಮಲ್ಲಯ್ಯನಪುರ, ಉತ್ತುವಳ್ಳಿ, ಯಡಪುರ ಹಾಗು ವೈದ್ಯಕೀಯ ಕಾಲೇಜು ಸೇರಿದಂತೆ ಅನೇಕ ಗ್ರಾಮಗಳನ್ನು ಒಳಪಡಿಸಿಕೊಂಡು ಗ್ರೇಡ್ -1 ನಗರಸಭೆ ಮಾಡಲು ಎಲ್ಲಾ ರೀತಿಯ ಪ್ರಯತ್ನವನ್ನು ನಗರಸಭೆಯಿಂದ ಕೈಗೊಳ್ಳಲಾಗಿದೆ ಎಂದರು.

ಗ್ರೇಡ್-1 ನಗರಸಭೆಯನ್ನಾಗಿಸಲು ಸುಮಾರು 1 ಲಕ್ಷಕ್ಕು ಅಧಿಕ ಜನಸಂಖ್ಯೆ ಇರಬೇಕು. ಕರ್ನಾಟಕ ಮುನಿಸಿಪಾಲಿಟಿ ಕಾಯ್ದೆ ಪ್ರಕಾರ ಹಿಂದಿನ ಜನಗಣತಿ ಆಧಾರದಲ್ಲಿ ಸ್ಥಳೀಯ ಆಡಳಿತ ದರ್ಜೆಯನ್ನು ನಿಗಧಿಪಡಿಸಲಾಗುತ್ತದೆ. ಅದಕ್ಕಾಗಿ ಸಮೀಪದಲ್ಲಿರುವ ಹಳ್ಳಿಗಳನ್ನು ನಗರಸಭೆ ವ್ಯಾಪ್ತಿಗೆ ಒಳಪಡಿಲಾಗುತ್ತದೆ. ಗ್ರೇಡ್-1 ನಗರಸಭೆಯಾದರೆ ಪೌರಾಡಳಿತ ಸಚಿವಾಲಯದಿಂದ ಹೆಚ್ಚಿನ ಅನುದಾನ ಮತ್ತು ಕರ ವಸೂಲಾತಿ ಹೆಚ್ಚಳವಾಗುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಸಾರ್ವಜನಿಕರು ಉಪಯುಕ್ತ ಹಾಗೂ ಅಭಿವೃದ್ಧಿ ಪೂರಕವಾದ ಸಲಹೆ ಸೂಚನೆಗಳನ್ನು ನೀಡಿದ್ದು, ಸದ್ಯದಲ್ಲಿಯೇ ಸದಸ್ಯರ ಪೂರ್ವಭಾವಿ ಸಭೆಯಲ್ಲಿ ಬರುವ ಸಲಹೆ ಸೂಚನೆಗಳನ್ನು ಕ್ರೊಡೀಕರಿಸಿ ಅಭಿವೃದ್ದಿ ಹಾಗೂ ಜನಪರ ಬಜೆಟ್ ಮಂಡಿಸಿವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಮಮತಾಬಾಲಸುಬ್ರಮಣ್ಯ, ಪೌರಾಯುಕ್ತ ರಾಮದಾಸ್, ಲೆಕ್ಕ ಅಧೀಕ್ಷಕ ಜಯನಾಯಕ್, ಎಇಇಗಳಾದ ನಟರಾಜು, ರೂಪ, ಸಮುದಾಯ ಸಂಘಟನಾಧಿಕಾರಿ ವೆಂಕಟನಾಯಕ್, ಸುಶ್ಮಾ, ಪುಷ್ಪಾ ಇತರರು ಭಾಗವಹಿಸಿದ್ದರು.

ಕಂದಾಯ ವಸೂಲಿ ಮಾಡಿ:

ಸಭೆಯಲ್ಲಿ ಮುಖಂಡ ಸುರೇಶ್ ವಾಜಪೇಯಿ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ನೀರಿನ ಕಂದಾಯವನ್ನು ಸಮರ್ಪಕವಾಗಿ ವಸೂಲಿ ಮಾಡಿ ಎಂದು ಸಲಹೆ ನೀಡಿದರು. ವಾಣಿಜ್ಯ ಕಟ್ಟಡಗಳಿಂದಲೂ ತೆರಿಗೆ ವಸೂಲಿ ಮಾಡಬೇಕು. 31 ವಾರ್ಡ್‌ಗಳಲ್ಲೂ ರಸ್ತೆ ಹದಗೆಟ್ಟಿದ್ದು ರಸ್ತೆ, ಚರಂಡಿ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಸಂತೇಮರಹಳ್ಳಿ ವೃತ್ತ ಮತ್ತು ದೊಡ್ಡಂಗಡಿ ಬೀದಿಯಲ್ಲಿ ವ್ಯರ್ಥವಾಗಿರುವ ಮಳಿಗೆಗಳನ್ನು ಕಾರ್ಯರೂಪಗೊಳಿಸಿ ಎಂದು ಸಲಹೆ ನೀಡಿದರು. ಮುಖಂಡ ಬಾಲಸುಬ್ರಹ್ಮಣ್ಯಂ ಮಾತನಾಡಿ, ಮನೆಗಳಿಗೆ ಹೊಸ ತೆರಿಗೆ ಹಾಕದೇ ಹಳೆಯದನ್ನೇ ತೆರಿಗೆ ನೀತಿಯನ್ನು ಮುಂದುವರಿಸಬೇಕು. ವಾಣಿಜ್ಯ ಮಳಿಗೆಗಳಿಗೆ ತೆರಿಗೆ ಹಾಕಿ ವಸೂಲಿ ಮಾಡಬೇಕು. ಅಲ್ಲದೇ ಈ ರೀತಿಯ ಪೂರ್ವಭಾವಿ ಸಭೆಗೆ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಆಹ್ವಾನ ನೀಡಬೇಕು ಎಂದು ಸೂಚಿಸಿದರು.

ಸ್ವಚ್ಛತೆಗೆ ಆದ್ಯತೆ ನೀಡಿ:

ರೋಟರಿ ಅಧ್ಯಕ್ಷ ನಾಗರಾಜು ಅವರು ಮಾತನಾಡಿ, ನಗರದ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪ್ಲಾಸ್ಟಿಕ್ ತ್ಯಾಜ್ಯದಿಂದ ವಿದ್ಯುತ್ ತಯಾರಿಸುವಂ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದರು. ನಗರಸಭೆ ವ್ಯಾಪ್ತಿಯ ಹಲವು ವಾರ್ಡ್‌ಗಳಲ್ಲಿ ಕಸದ ಸಮಸ್ಯೆ ಮತ್ತು ಕುಡಿಯುವ ನೀರಿನ ಸಮಸ್ಯೆಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲಿಡಿ ಎಂದು ಮಹಿಳೆಯರು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net