‘ಗ್ರೇಟರ್ ಮೈಸೂರು’ ರಚನೆಗೆ ಅಧ್ಯಯನ

mysore
Published on

ಮೈಸೂರು: ಬೃಹತ್ ಮೈಸೂರು ಮಹಾನಗರ ಪಾಲಿಕೆ ರಚನೆ ಕುರಿತು ಅಧ್ಯಯನ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.

ಪಾಲಿಕೆಯ 3ರ ಕಚೇರಿಯಲ್ಲಿ ಗುರುವಾರ ಸಂಜೆ ಚಾಮುಂಡೇಶ್ವರಿ ಕ್ಷೇತ್ರದ ವಾರ್ಡ್‌ಗಳ ಫಲಾನುಭವಿಗಳಿಗೆ ಬಿ-ಖಾತೆ ಪತ್ರ ವಿತರಣೆ, ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದರು.

ನಗರದ 4 ದಿಕ್ಕುಗಳಲ್ಲಿ ಇರುವ ಬಡಾವಣೆಗಳನ್ನು ಸೇರಿಸಿಕೊಂಡು ಬೃಹತ್ ಪಾಲಿಕೆ ರಚನೆ ಮಾಡುವ ಬಗ್ಗೆ ಮುಖ್ಯಮಂತ್ರಿ, ನಗರಾಭಿವೃದ್ಧಿ ಸಚಿವರ ಮೇಲೆ ಒತ್ತಡ ಹೇರಲಾಗಿದೆ. ಕೆಲವರ ವಿರೋಧದಿಂದಾಗಿ ಅಧ್ಯಯನ ನಡೆಸಲು ಸಿಎಂ ಒಪ್ಪಿಗೆ ನೀಡಿದ್ದಾರೆ ಎಂದರು.

ನರಸಿಂಹರಾಜ, ಚಾಮರಾಜ, ಕೃಷ್ಣರಾಜ ಕ್ಷೇತ್ರಗಳಿಗೆ ಹೋಲಿಸಿದರೆ ಚಾಮುಂಡೇಶ್ವರಿ ಕ್ಷೇತ್ರ ದೊಡ್ಡ ವಿಧಾನಸಭಾ ಕ್ಷೇತ್ರ. 4 ಪಟ್ಟಣ ಪಂಚಾಯಿತಿ, 1 ನಗರಸಭೆ, 17 ಗ್ರಾಮ ಪಂಚಾಯಿತಿಗಳಿವೆ. ಹೀಗಾಗಿ, ಗ್ರೇಟರ್ ಮೈಸೂರು ರಚನೆ ಅಗತ್ಯ ಇದೆ ಎಂದರು.

ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಗೆ ಬರುವ ಐದು ವಾರ್ಡ್‌ಗಳಿಗೆ ಸರ್ಕಾರ, ಪಾಲಿಕೆ, ಮುಡಾದಿಂದ ಅನುದಾನ ಕೊಡಿಸಿ ಮೂಲ ಸೌಕರ್ಯ ಒದಗಿಸಲಾಗುವುದು. ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗುವುದು ಎಂದರು.

ಪಾಲಿಕೆಯಲ್ಲೇ ವಲಯ 3ರ ಕಚೇರಿ ವ್ಯಾಪ್ತಿಯಿಂದ ಅತಿ ಹೆಚ್ಚು ತೆರಿಗೆ ಸಂಗ್ರಹವಾಗಿದೆ. ಶೇ.5ರಷ್ಟು ವಿನಾಯಿತಿ ನೀಡಿ ಆಸ್ತಿ ತೆರಿಗೆ ಪಾವತಿಸಲು ಜೂನ್ 30ರವರೆಗೆ ಅವಕಾಶ ಕೊಡಲಾಗಿದೆ.

ಅದೇ ರೀತಿ ಬಿ-ಖಾತಾ ಮಾಡಿಕೊಡಲು ಗಡುವು ವಿಸ್ತರಿಸಲಾಗಿದೆ. ಇದರಿಂದ ಬಿ-ಖಾತೆ ಮಾಡಿಸಿಕೊಳ್ಳದ ಮಾಲೀಕರು ಆಸ್ತಿ ನೋಂದಣಿ ಮಾಡಿಸಿಕೊಂಡು ಖಾತೆ ಹೊಂದಬೇಕು. ಅದೇ ರೀತಿ ಆಸ್ತಿ ತೆರಿಗೆ ಮೇಲಿನ ಶೇ.5ರಷ್ಟು ರಿಯಾಯಿತಿಯಡಿ ಪಾವತಿಸಬೇಕು ಎಂದು ಹೇಳಿದರು.

ಪಾಲಿಕೆಯ ಶೇ.22.45 ಅನುದಾನದಡಿ ಹೊಲಿಗೆ ಯಂತ್ರಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಹಿಳೆಯರಿಗೆ ಕೊಡಲಾಗುವುದು ಎಂದರು.

ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು. ಕುಟುಂಬದ ನಿರ್ವಹಣೆಯ ಜತೆಗೆ ಒಂದಿಷ್ಟು ಹಣವನ್ನು ಕೂಡಿಸಲು ಸ್ವಯಂ ಉದ್ಯೋಗ ಮಾಡಬೇಕು. ಸರ್ಕಾರ ನೀಡುವ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು. ಮಹಿಳೆಯರು ಎಲ್ಲ ರಂಗದಲ್ಲೂ ಮುಂಚೂಣಿಯಲ್ಲಿದ್ದಾರೆ. ದೇಶದ ಆರ್ಥಿಕತೆಗೆ ಮಹಿಳೆ ಕೊಡುಗೆ ದೊಡ್ಡದು ಎಂದು ಹೇಳಿದರು.

85 ಜನ ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರವನ್ನು ವಿತರಿಸಲಾಯಿತು. ಉಪ ಆಯುಕ್ತ ಜಿ.ಎಸ್.ಸೋಮಶೇಖರ್, ವಲಯ ಆಯುಕ್ತ ಸತ್ಯಮೂರ್ತಿ, ಕಂದಾಯಾಧಿಕಾರಿ ಬಸವಣ್ಣ, ಪಾಲಿಕೆ ಮಾಜಿ ಸದಸ್ಯರಾದ ಸವಿತಾ ಸುರೇಶ್ ಇನ್ನಿತರರಿದ್ದರು.

120 ಕೋಟಿ ರೂ. ಸಂಗ್ರಹ

ಪಾಲಿಕೆಯಲ್ಲಿ ಕಳೆದ ವರ್ಷಕ್ಕಿಂತ ಈ ಸಲ ತೆರಿಗೆ ಸಂಗ್ರಹ ಹೆಚ್ಚಾಗಿದೆ. ಈ ವರ್ಷದ ಏಪ್ರಿಲ್‌ನಲ್ಲಿ 120 ಕೋಟಿ ರೂ.ಸಂಗ್ರಹವಾಗಿದೆ. ಸರ್ಕಾರ ಜೂನ್ 30 ರವರೆಗೆ ಆಸ್ತಿ ತೆರಿಗೆ ಮೇಲಿನ ಶೇ.5ರಷ್ಟು ರಿಯಾಯಿತಿ ಬಳಸಿಕೊಂಡು ತೆರಿಗೆ ಪಾವತಿಸಬೇಕು ಎಂದು ಉಪ ಆಯುಕ್ತ ಜಿ.ಎಸ್.ಸೋಮಶೇಖರ್ ಹೇಳಿದರು.

ಪಾಲಿಕೆಯಲ್ಲಿರುವ ಒಟ್ಟು 9 ವಲಯ ಕಚೇರಿಗಳ ಪೈಕಿ 3ನೇ ವಲಯದಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹವಾಗಿದೆ ಎಂದರು. ನಗರದಲ್ಲಿ 30 ಸಾವಿರ ಅನಧಿಕೃತ ಆಸ್ತಿಗಳಿವೆ. ಈ ಪೈಕಿ 3,500 ಆಸ್ತಿಗಳಿಗೆ ಬಿ-ಖಾತೆ ಕೊಡಲು ಅರ್ಹತೆ ಪಡೆದಿದೆ. ಸರ್ಕಾರ ಕೆಲವು ವಿಚಾರಗಳಲ್ಲಿ ಮಾರ್ಪಾಡು ಮಾಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಬಿ-ಖಾತೆ ವಿತರಣೆ ಇನ್ನಷ್ಟು ಸುಲಭವಾಗಲಿದೆ ಎಂದರು.

ತ್ವರಿತಗತಿಯಲ್ಲಿ ಬಿ ಖಾತಾ ವಿತರಣೆ

ಕಂದಾಯ ನಿವೇಶನಗಳು ಹೆಚ್ಚಿರುವ ಕಡೆಗಳಲ್ಲಿ ಬಿ-ಖಾತೆ ಮಾಡಿಕೊಡಲಾಗುತ್ತಿದೆ. ವಲಯ ಕಚೇರಿ 3ರ ವ್ಯಾಪ್ತಿಯಲ್ಲಿ 2,800 ಕಂದಾಯ ಆಸ್ತಿಗಳಿವೆ. 850 ಆಸ್ತಿಗಳು ನೋಂದಣಿಯಾಗಿವೆ. 650 ಜನರಿಗೆ ಬಿ-ಖಾತೆ ನೀಡಲಾಗಿದೆ. ಇನ್ನುಳಿದ ಕಂದಾಯ ಆಸ್ತಿಗಳು ನೋಂದಣಿ ಆಗಬೇಕಿದೆ. ಇದಲ್ಲದೆ, 28 ಸಾವಿರ ಆಸ್ತಿಗಳಲ್ಲಿ 18 ಸಾವಿರ ಆಸ್ತಿಗಳಿಗೆ ಇ-ಸ್ವತ್ತು ವಿತರಿಸಲಾಗಿದೆ. ಸರ್ಕಾರದ ಗಡುವಿನೊಳಗೆ ಮುಗಿಸಲು ತ್ವರಿತಗತಿಯಲ್ಲಿ ಕೆಲಸ ಮಾಡುತ್ತಿದೆ. ಸತ್ಯಮೂರ್ತಿ, ಪಾಲಿಕೆ ವಲಯ ಕಚೇರಿ-3ರ ಆಯುಕ್ತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net