

ಹಾಸನ: ಭ್ರಷ್ಟಾಚಾರ, ದುರಾಡಳಿತ, ಮತಾಂಧತೆಯ ಬೀಜವನ್ನು ಬಿತ್ತುತ್ತಿದ್ದ ಬಿಜೆಪಿ ಸರ್ಕಾರವನ್ನು ಜನ ಕಿತ್ತೊಗೆದರು ಜನಪರ ಕಾಳಜಿ ಇರುವ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿರುವ ಇಡೀ ರಾಜ್ಯದ ಜನತೆಗೆ ತುಂಬು ಹೃದಯ ಧನ್ಯವಾದಗಳನ್ನು ಸಲ್ಲಿಸುವುದಾಗಿ ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ ತಿಳಿಸಿದರು.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ನಿರೀಕ್ಷೆಯ ಮಟ್ಟದಲ್ಲಿ ಸ್ಥಾನ ಗಳಿಸಲಾಗದಿದ್ದರೂ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುತ್ತಿರುವುದು ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿಯೂ ಕೂಡ ಪಕ್ಷ ಸಂಘಟಿಸುವುದರ ಜೊತೆಗೆ ಹೆಚ್ಚಿನ ಸ್ಥಾನ ಪಡೆಯುವುದಕ್ಕೆ ನಾವೆಲ್ಲರೂ ಶ್ರಮಿಸುತ್ತೇವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಬಾರಿಯ ಚುನಾವಣೆಯಲ್ಲಿ 7 ಕ್ಷೇತ್ರದಲ್ಲಿ ಕೇವಲ ಅರಸೀಕೆರೆಯಿಂದ ನಮ್ಮ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಉಳಿದ ಕಡೆ ಭಾರಿ ಪೈಪೋಟಿ ನೀಡಿ ಸ್ವಲ್ಪ ಮತಗಳ ಅಂತರದಿಂದ ಸೋಲು ಅನುಭವಿಸಿದ್ದು, ಪಕ್ಷದ ಅಭ್ಯರ್ಥಿಗಳ ಪರವಾಗಿ ಚುನಾವಣೆಯಲ್ಲಿ ಹಗಲಿರುಳು ಶ್ರಮಿಸಿದ ಪಕ್ಷ ದ ಮುಖಂಡರು, ಕಾರ‌್ಯಕರ್ತರು ಮತ್ತು ಮತದಾರರೆಲ್ಲರಿಗೂ ಹೃದಯಪೂರ್ವಕ ಧನ್ಯವಾದ ತಿಳಿಸಿದರು.
ಜಿಲ್ಲೆಯಲ್ಲಿ ಕೇವಲ ಒಂದು ಸ್ಥಾನವನ್ನು ಗೆದ್ದಿದ್ದೇವೆ. ಮುಂಬರುವ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಮತ್ತು ಲೋಕಸಭೆ ಚುನಾವಣೆಯಲ್ಲಿ ಸಂಘಟಿತರಾಗಿ ಹೆಚ್ಚು ಸ್ಥಾನ ಗೆಲ್ಲಲು ಶ್ರಮಿಸಲಾಗುವುದು. ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಮ್ಮೆಲ್ಲರ ಜವಾಬ್ದಾರಿ ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸುವುದು. ಅದನ್ನು ಪ್ರಾಮಾಣಿಕವಾಗಿ ಮಾಡಲಾಗುವುದು ಎಂದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಹಿನ್ನಡೆ ಬಗ್ಗೆ ತಿಳಿದುಕೊಳ್ಳಲು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ ಮತ್ತು ಜಿಲ್ಲೆಯಿಂದ ಆಯ್ಕೆಯಾಗಿರುವ ಏಕೈಕ ಶಾಸಕರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗುವುದು. ಇದರಿಂದ ಇಡೀ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ನ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಮಲ್ಲಿಗೆವಾಳು ದ್ಯಾವಪ್ಪ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಕಯೀಂ, ಮುಖಂಡರಾದ ಬಿ.ಎಲ್. ಶಿವಕುಮಾರ್, ಚಂದ್ರಶೇಖರ್, ಪ್ರಕಾಶ್ ಹಾಜರಿದ್ದರು.