ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿದೆ ಮಾರುಕಟ್ಟೆ

h23- Sunday Market
Published on

ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಎಪಿಎಂಸಿ ಆವರಣದಲ್ಲಿ ಕೃಷಿ ಉತ್ಪಾದಕರಿಗಾಗಿಯೇ ಕಟ್ಟಿಸಲಾಗಿರುವ ರೈತ ಸಂತೆ ಕಟ್ಟಡ ಸದ್ಬಳಕೆಗೆ ಸರ್ವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ರೈತರು ಬಾರದ ಹಿನ್ನೆಲೆಯಲ್ಲಿ ಚಿಲ್ಲರೆ ವ್ಯಾಪಾರಿಗಳಿಗೆ ಮಳಿಗೆಗಳನ್ನು ನೀಡಿದ್ದರೂ ಗ್ರಾಹಕರು ಬರದೇ ಪದಾಡುವಂತಾಗಿದೆ.

ರೈತರು ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಅನುಕೂಲವಾಗುವ ದಿಸೆಯಲ್ಲಿ ಹಿಂದಿನ ರಾಜ್ಯ ಸರ್ಕಾರ ‘ಭಾನುವಾರ ಸಂತೆ’ ಹೆಸರಲ್ಲಿ 14 ಮಳಿಗೆಗಳನ್ನು ಎಪಿಎಂಸಿ ಮುಖ್ಯ ದ್ವಾರದ ಬಳಿ ನಿರ್ವಿುಸಿತ್ತು. ಆರಂಭದಲ್ಲಿ ಭಾನುವಾರವಷ್ಟೇ ಅವಕಾಶ ನೀಡಿ ರೈತರು- ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಾರದ ಎಲ್ಲ ದಿನವೂ ತೆರೆಯುವ ಉದ್ದೇಶ ಹೊಂದಲಾಗಿತ್ತು.

2018ರಲ್ಲಿ ಉದ್ಘಾಟನೆಯಾಗಿದ್ದ ಈ ಕಟ್ಟಡದಲ್ಲಿ ಸಕಲ ಸೌಲಭ್ಯಗಳನ್ನು ಒದಗಿಸಲಾಗಿತ್ತು. ಅಂದಾಜು ಒಂದು ಕೋಟಿ ರೂ. ವೆಚ್ಚದಲ್ಲಿ 14 ಮುಚ್ಚಿದ ಮಳಿಗೆ, ಆರು ತೆರೆದ ಮುಂಗಟ್ಟುಗಳನ್ನು ನಿರ್ವಿುಸಲಾಗಿದೆ. ವಿಶ್ರಾಂತಿ ಗೃಹ, ಪುರುಷ, ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹವನ್ನು ಅಚ್ಚುಕಟ್ಟಾಗಿ ನಿರ್ವಿುಸಲಾಗಿದೆ.

ಆದರೆ, ಉದ್ಘಾಟನೆಯಾದ ನಂತರ ರೈತ ಸಂತೆಯ ಕಟ್ಟಡವನ್ನು ಕೃಷಿ ಉತ್ಪಾದಕರು ಬಳಸಿಕೊಳ್ಳುವಲ್ಲಿ ಹಿಂದೇಟು ಹಾಕಿದರು. ಎಪಿಎಂಸಿ ಆಡಳಿತ ಮಂಡಳಿಯವರು ಸಹ ರೈತರನ್ನು ಕರೆತರುವ ಪ್ರಯತ್ನಗಳನ್ನು ಮಾಡಿದ್ದರು. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕರಪತ್ರ ಹಂಚಿ ರೈತರಲ್ಲಿ ಜಾಗೃತಿ ಮೂಡಿಸಿದ್ದರು. ಆದರೆ, ರೈತರು ಮಾತ್ರ ತಮ್ಮ ಉತ್ಪಾದನೆಗಳನ್ನು ತಂದು ಇಲ್ಲಿ ಮಾರಾಟ ಮಾಡಲೇ ಇಲ್ಲ. ಹಾಗಾಗಿ ಎರಡು ವರ್ಷದಿಂದ ಕಟ್ಟಡ ಖಾಲಿ ಬಿದ್ದಿದೆ.

ಹೊಸ ಪ್ರಯತ್ನ:

ಇದೀಗ ಎಪಿಎಂಸಿ ಕಾರ್ಯದರ್ಶಿ ಡಾ. ಬಿ. ರಾಜಣ್ಣ ಅವರು, ರೈತ ಸಂತೆ ಕಟ್ಟಡ ಸದ್ಬಳಕೆ ಮಾಡಿಕೊಳ್ಳುವ ದಿಸೆಯಲ್ಲಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಸದ್ಯ ಎಪಿಎಂಸಿ ತರಕಾರಿ ಮಾರುಕಟ್ಟೆ ಬಳಿ ಸಗಟು ವ್ಯಾಪಾರ ಮುಗಿದ ನಂತರ ಕೆಲ ಚಿಲ್ಲರೆ ವ್ಯಾಪಾರಸ್ಥರು ಅಲ್ಲಿಯೇ ರಸ್ತೆ ಬದಿ ತರಕಾರಿ ಮಾರಾಟಕ್ಕೆ ಕುಳಿತುಕೊಳ್ಳುತ್ತಿದ್ದಾರೆ. ಎಪಿಎಂಸಿ ಆವರಣದಲ್ಲಿ ಚಿಲ್ಲರೆ ವ್ಯಾಪಾರಕ್ಕೆ ಅವಕಾಶ ಇಲ್ಲ. ಹಾಗಾಗಿ ಅವರ ಮನವೊಲಿಸಿ ರೈತ ಸಂತೆ ಕಟ್ಟಡಕ್ಕೆ ಸ್ಥಳಾಂತರಕ್ಕೆ ಮುಂದಾದರು. ‘ನಿಮಗೆ ಬೇಕಾದ ತಕ್ಕಡಿ, ಇತ್ಯಾದಿ ಸೌಲಭ್ಯ ನೀಡುತ್ತೇವೆ. ಅಲ್ಲಿಯೇ ಹೋಗಿ ಮಾರಾಟ ಮಾಡಿ’ ಎಂದು ಸೂಚಿಸಿದ್ದಾರೆ.

ಇದಕ್ಕೆ ಒಪ್ಪಿದ 15- 20 ಚಿಲ್ಲರೆ ತರಕಾರಿ ಮಾರಾಟಗಾರರು ರೈತ ಸಂತೆಯ ಮಳಿಗೆಗಳನ್ನು ಪಡೆದುಕೊಂಡು ಪೂಜೆ ನೆರವೇರಿಸಿ ನಿತ್ಯ ಅಂಗಡಿ ಬಾಗಿಲು ತೆರೆದುಕೊಂಡು ಕುಳಿತುಕೊಳ್ಳುತ್ತಿದ್ದಾರೆ. ಬಹುತೇಕರು ತರಕಾರಿ ಮಾರಾಟ ಮಾಡುವವರಾಗಿದ್ದಾರೆ. ಒಬ್ಬರು ಲಿಂಬೆ ಹಣ್ಣು ಮಾರುತ್ತಿದ್ದಾರೆ. ವಾರದ ಹಿಂದೆ ಕೃಷಿ ಮಾರುಕಟ್ಟೆ ಸಚಿವ ಸೋಮಶೇಖರ ಅವರು ಎಪಿಎಂಸಿಗೆ ಭೇಟಿ ನೀಡಿದ ವೇಳೆಯೇ ಇಲ್ಲಿನ ಎಲ್ಲ ಮಳಿಗೆಗಳನ್ನು ಆರಂಭಿಸಲಾಗಿತ್ತು. ಸಚಿವರು ಕೂಡ ರೈತ ಸಂತೆ ಕಟ್ಟಡ ಚಟುವಟಿಕೆಯಿಂದ ಕೂಡಿರುವುದನ್ನು ಕಂಡು ಪ್ರಶಂಸೆ ವ್ಯಕ್ತಪಡಿಸಿದ್ದರು.

ವ್ಯಾಪಾರವೇ ಆಗುತ್ತಿಲ್ಲ:

ಎಪಿಎಂಸಿಯವರೇನೋ ರೈತ ಸಂತೆ ಕಟ್ಟಡ ಸದ್ಬಳಕೆಗೆ ಮುಂದಡಿ ಇಟ್ಟಿದ್ದಾರೆ. ಆದರೆ, ಅಲ್ಲಿ ಮಳಿಗೆ ಆರಂಭಿಸಿದವರು ವ್ಯಾಪಾರವೇ ಆಗುತ್ತಿಲ್ಲ, ಬೆಳಗ್ಗೆಯಿಂದ ಸಂಜೆಯವರೆಗೂ ಸಾವಿರಾರು ರೂಪಾಯಿ ಮೌಲ್ಯದ ತರಕಾರಿ ತಂದಿಟ್ಟುಕೊಂಡರೂ ನೂರು ರೂಪಾಯಿ ವ್ಯಾಪಾರ ನಡೆಯುತ್ತಿಲ್ಲ. ಹೀಗಾದರೆ ನಮ್ಮ ನಷ್ಟ ಭರಿಸುವವರು ಯಾರು? ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.

ಜನರಿಗೆ ಗೊತ್ತಾಗಬೇಕು:

ರೈತ ಸಂತೆ ಕಟ್ಟಡದಲ್ಲಿ ತರಕಾರಿ, ಹಣ್ಣು- ಹಂಪಲು ಸಿಗುತ್ತದೆ ಎಂಬುದು ಜನರಿಗೆ ಗೊತ್ತಾಗಬೇಕು. ಅಂದಾಗ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರಲು ಸಾಧ್ಯವಾಗುತ್ತದೆ. ಅದರಲ್ಲೂ ಎಪಿಎಂಸಿ ಮೂರನೇ ಗೇಟ್​ನ ಬಿಆರ್​ಟಿಎಸ್ ಬಸ್ ನಿಲ್ದಾಣದ ಎದುರಿನಲ್ಲೇ ರೈತ ಸಂತೆ ಇರುವುದರಿಂದ ಪ್ರಯಾಣಿಕರ ಗಮನಕ್ಕೂ ಬರುತ್ತದೆ. ಇದಕ್ಕಾಗಿ ಒಂದಿಷ್ಟು ದಿನ ಮಳಿಗೆ ನಡೆಸುತ್ತ ಕಾಯುವುದು ಅನಿವಾರ್ಯ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ರೈತರಿಗೆ ಆದ್ಯತೆ:

ರೈತರ ಸಲುವಾಗಿ ಭಾನುವಾರ ಸಂತೆ ಕಟ್ಟಡ ಕಟ್ಟಲಾಗಿದೆ. ಮುಂದಿನ ದಿನಗಳಲ್ಲಿ ವ್ಯಾಪಾರ- ವಹಿವಾಟು ನೋಡಿಕೊಂಡು ರೈತರು ಬರಲು ಆಸಕ್ತಿ ತೋರಬಹುದು. ಆಗ ರೈತರಿಗೆ ಮಳಿಗೆ ನೀಡುತ್ತೇವೆ. ರೈತ ಸಂತೆ ಇರುವುದೇ ಅವರಿಗಾಗಿ ಎಂದು ಎಪಿಎಂಸಿ ಕಾರ್ಯದರ್ಶಿ ಡಾ. ಬಿ. ರಾಜಣ್ಣ ತಿಳಿಸಿದ್ದಾರೆ.

ಈ ಬಗ್ಗೆ ಚಿಲ್ಲರೆ ವ್ಯಾಪಾರಸ್ಥರಿಗೂ ತಿಳಿಸಿದ್ದೇವೆ. ರೈತರು ಬಂದರೆ ಮಳಿಗೆ ಬಿಡಬೇಕಾಗುತ್ತದೆ ಎಂಬ ಮಾತಿಗೆ ಒಪ್ಪಿಕೊಂಡ ಮೇಲೆಯೇ ವ್ಯಾಪಾರಿಗಳಿಗೆ ಮಳಿಗೆ ನೀಡಲಾಗಿದೆ. ಈ ವಿಚಾರದಲ್ಲಿ ಎರಡು ಮಾತಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಹುಬ್ಬಳ್ಳಿ ರೈತ ಸಂತೆ ಕಟ್ಟಡದಲ್ಲಿ ವ್ಯಾಪಾರ ಆರಂಭಿಸಿರುವ ಬಗ್ಗೆ ಬ್ಯಾನರ್ ಹಾಕಿ ಪ್ರಚಾರ ಮಾಡುತ್ತೇವೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಂತೆಗೆ ಬರಲು ಪ್ರೋತ್ಸಾಹಿಸುತ್ತೇವೆ. ಎಪಿಎಂಸಿಯಲ್ಲಿ ಸಿಬ್ಬಂದಿ ಸಂಚರಿಸಿ ಜನರಿಗೆ ತಿಳಿವಳಿಕೆ ಕೂಡ ನೀಡಲಿದ್ದಾರೆ. ಒಟ್ಟಾರೆ ಕಟ್ಟಡದಲ್ಲಿ ಸಂತೆ ನಡೆಯಬೇಕು ಎಂಬುದು ನಮ್ಮ ಆಶಯ. - ಡಾ. ಬಿ. ರಾಜಣ್ಣ, ಎಪಿಎಂಸಿ ಕಾರ್ಯದರ್ಶಿ, ಹುಬ್ಬಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net