

ಶೃಂಗೇರಿ: ಗ್ರಾಹಕರ ಹಕ್ಕುಗಳ ರಕ್ಷಣೆ ಎಲ್ಲರ ಜವಾಬ್ದಾರಿ. ಗ್ರಾಹಕರು ಹಕ್ಕು ಮತ್ತು ಕರ್ತವ್ಯದ ಬಗ್ಗೆ ಹೆಚ್ಚಿನ ಜ್ಞಾನ ಹೊಂದಬೇಕು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಅರುಣಕುಮಾರ್ ಹೇಳಿದರು.
ತಾಲೂಕು ಕನ್ನಡ ಜಾನಪದ ಪರಿಷತ್ ಮತ್ತು ಪ್ರೌಢಶಾಲೆಯ ಗ್ರಾಹಕರ ಹಿತರಕ್ಷಣಾ ಕ್ಲಬ್ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಗ್ರಾಹಕರಾಗಿ ವಿದ್ಯಾರ್ಥಿಗಳು ವಿಷಯದ ಬಗ್ಗೆ ಮಾತನಾಡಿದರು. ನೀವು ಓದುತ್ತಿರುವ ಶಾಲೆಯಲ್ಲಿ ಶಾಲೆಯ ಗ್ರಾಹಕರಾಗಿ ನಿಮಗೆ ದೊರಕುವ ಸೌಲಭ್ಯ ಪಡೆಯಲು ಅರ್ಹತೆ ಹೊಂದಿರುತ್ತೀರಿ. ನಾವು ಎಷ್ಟೇ ಜಾಗೃತರಾಗಿದ್ದರೂ ಮೋಸ ಹೋಗುವ ಸಾಧ್ಯತೆ ಇರುತ್ತದೆ. ನಮಗೆ ಆದ ನಷ್ಟ ಹಿಂಪಡೆಯಲು ಗ್ರಾಹಕ ವೇದಿಕೆಗೆ ಲಿಖಿತ ರೂಪದಲ್ಲಿ ದೂರು ಸಲ್ಲಿಸಬೇಕು. ಸುರಕ್ಷತೆಯ ಹಕ್ಕು ನೀಡಲಾಗಿದೆ. ಖರೀದಿಸುವ ಯಾವುದೇ ವಸ್ತು ಅಥವಾ ಪಡೆಯುವ ಸೇವೆ ಸುರಕ್ಷಿತವಾಗಿರಬೇಕು ಎಂದು ಹಕ್ಕು ಹೇಳುತ್ತದೆ ಎಂದರು.
ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಆಶೀಶ್ ದೇವಾಡಿಗ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಸಾಕಷ್ಟು ಅವಕಾಶವಿದೆ. ಪ್ರತಿ ದಿನವೂ ಬೆಳಗ್ಗೆ ಓದುವುದರತ್ತ ಗಮನ ಹರಿಸಬೇಕು. ಪಾಲಕರು ನಿಮಗೆ ಯಾವುದೇ ಮನೆ ಕೆಲಸ ವಹಿಸದೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಜವಾಬ್ದಾರಿಯಿಂದ ವಿದ್ಯಾಭ್ಯಾಸ ಮಾಡಬೇಕು ಎಂದರು.
ರಸಪ್ರಶ್ನೆಯಲ್ಲಿ ಮನ್ವಿತ್, ರಾಕೇಶ್ ಮತ್ತು ಶಿವಾನಿ ಬಹುಮಾನ ಪಡೆದರು. ಎಸ್‌ಡಿಎಂಸಿ ಅಧ್ಯಕ್ಷ ಕಲ್ಕಟ್ಟೆ ಆನಂದಸ್ವಾಮಿ, ಶಾಲಾ ವಿದ್ಯಾರ್ಥಿ ಸಂಘದ ಮುಖ್ಯಮಂತ್ರಿ ಪ್ರಣೀತ್, ಶಿಕ್ಷಕರಾದ ವೆಂಕಟೇಶಮೂರ್ತಿ, ಪಾಟೀಲ್, ಅಂಬಿಕಾ, ಪರಿಷತ್‌ನ ಉದಯ ಇದ್ದರು.