ಗ್ರಾಹಕರ ಸಂವಾದ 14ಕ್ಕೆ ಮುಂದೂಡಿಕೆ

may 8 kottur 01
Published on

ಕೊಟ್ಟೂರು: ಪಟ್ಟಣದ ಜೆಸ್ಕಾಂ ಉಪವಿಭಾಗ ಕಚೇರಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಗ್ರಾಹಕರ ಸಂವಾದ ಕಾರ್ಯಕ್ರಮ ಮೇ 14ಕ್ಕೆ ಮುಂದೂಡಿಕೆಯಾಯಿತು. ಗ್ರಾಹಕರ ಕೊರತೆಯಿಂದಾಗಿ ಕಾರ್ಯಕ್ರಮ ಮುಂದೂಡಲಾಯಿತು.

ಕೊಟ್ಟೂರು ಪಟ್ಟಣ ಹಾಗೂ 11 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆಸ್ಕಾಂ ಗ್ರಾಹಕರ ಸಮಸ್ಯೆಗಳನ್ನು ಬಗೆಹರಿಸಲು ಕರೆದಿದ್ದ ಸಂವಾದ ನಾಲ್ಕನೇ ಬಾರಿ ಮುಂದೂಡಿಕೆಯಾಗಿರುವುದು ವಿಶೇಷ. ಈ ಕುರಿತು ‘ವಿಜಯವಾಣಿ’ಗೆ ಪ್ರತಿಕ್ರಿಯೆ ನೀಡಿದ ಜೆಸ್ಕಾಂ ಎಇಇ ಆರ್. ನಾಗರಾಜ್, ನಾಲ್ಕು ಬಾರಿ ಸಂವಾದ ಕಾರ್ಯಕ್ರಮಕ್ಕೆ ಜೆಸ್ಕಾಂ ಗ್ರಾಹಕರು ಬಾರದಿರುವುದು ಅಚ್ಚರಿ ತಂದಿದೆ. ಆದರೆ, ಬೇರೆ ದಿನಗಳಲ್ಲಿ ಸಮಸ್ಯೆಹೊತ್ತು ಕಚೇರಿಗೆ ಆಗಮಿಸುತ್ತಾರೆ ಎಂದರು.

ಕೋಗಳಿ, ಅಂಬಳಿ, ಅಲಬೂರು ಗ್ರಾಮ ಪಂಚಾಯಿತಿಗಳು ಇನ್ನೂ ಕೊಟ್ಟೂರು ಜೆಸ್ಕಾಂ ಕಚೇರಿಗೆ ಒಳಪಟ್ಟಿಲ್ಲ. ಈ ಕುರಿತು ಹಗರಿಬೊಮ್ಮನಹಳ್ಳಿ ಜೆಸ್ಕಾಂ ಕಚೇರಿಯೊಂದಿಗೆ ಪತ್ರ ವ್ಯವಹಾರ ಮುಂದುವರಿದಿದೆ. ಮನೆ, ಅಂಗಡಿ, ಸಣ್ಣ ಕಾರ್ಖಾನೆಗೆ ಬಳಸುವ ವಿದ್ಯುತ್‌ನಿಂದ ತಾಲೂಕಿನಲ್ಲಿ ಪ್ರತಿ ತಿಂಗಳು ಜೆಸ್ಕಾಂಗೆ 1.30 ಕೋಟಿ ರೂ. ಸಂದಾಯವಾಗುತ್ತದೆ ಎಂದು ಮಾಹಿತಿ ನೀಡಿದರು.

ತಾಲೂಕಿನಲ್ಲಿ ವಿದ್ಯುತ್ ಕಂಬಗಳಿಗೆ ಅಡ್ಡಿಯಾಗುವ ಮರ, ಗಿಡಗಳನ್ನು ಕತ್ತರಿಸಲು ಗುತ್ತಿಗೆ ಆಧಾರದ ಮೇಲೆ 10 ಜನರನ್ನು ಮೂರು ತಿಂಗಳ ಅವಧಿಗೆ ನೇಮಕ ಮಾಡಿಕೊಂಡಿದ್ದು, ಗಿಡ, ಮರಗಳನ್ನು ಕತ್ತರಿಸುವ ಕಾರ್ಯ ಆರಂಭಿಸಲಾಗಿದೆ ಎಂದು ಎಇಇ ಆರ್.ನಾಗರಾಜ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net