ಗ್ರಾಹಕರ ಸಂಚಾರಿ ಪೀಠ ಆರಂಭಿಸಿ

15GKK1
ಗ್ರಾಹಕರ ಸಂಚಾರಿ ಪೀಠ ಕಾರ್ಯಾರಂಭಕ್ಕೆ ಆಗ್ರಹಿಸಿ ಗೋಕಾಕ ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಸಿ.ಡಿ.ಹುಕ್ಕೇರಿ, ವೈ.ಕೆ ಕೌಜಲಗಿ, ಎ.ಎ.ಪಾಟೀಲ, ಎಸ್.ಎಂ.ಕುದರಿ, ಎಸ್.ಬಿ.ನಾಯಿಕ, ಡಿ.ಡಿ.ಕೋಟಬಾಗಿ, ಜಿ.ಎಸ್.ಗಂಜಿ, ಎಸ್.ವಿ.ದೇಮಶೆಟ್ಟಿ, ಎಲ್.ಎಂ.ಗುದಿಗೋಪ್ಪ ಇದ್ದರು.
Published on

ಗೋಕಾಕ: ಕರ್ನಾಟಕ ಗ್ರಾಹಕರ ಸಂಚಾರಿ ಪೀಠ ಕಾರ್ಯಾರಂಭದಲ್ಲಿ ವಿಳಂಬ ಮಾಡುತ್ತಿರುವ ಸರ್ಕಾರದ ಧೋರಣೆ ಖಂಡಿಸಿ ಇಲ್ಲಿನ ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು ಬುಧವಾರ ಪ್ರತಿಭಟಿಸಿದರು. ಬಳಿಕ ತಹಸೀಲ್ದಾರ್ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.

ಬೆಳಗಾವಿಯನ್ನು ಕರ್ನಾಟಕದ 2ನೇ ರಾಜಧಾನಿ ಎಂದು ಕರೆಯಲಾಗುತ್ತದೆ. ಸರ್ಕಾರದ ತಾರತಮ್ಯದಿಂದಾಗಿ ಬೆಳಗಾವಿಯಲ್ಲಿ ಕರ್ನಾಟಕ ಗ್ರಾಹಕರ ಸಂಚಾರಿ ಪೀಠ ಆರಂಭ ವಿಳಂಬವಾಗುತ್ತಿದೆ. ಇದನ್ನು ಸಂಘದ ಸರ್ವ ಸದಸ್ಯರು ತೀವ್ರವಾಗಿ ಖಂಡಿಸುತ್ತೇವೆ. ಶೀಘ್ರ ಬೆಳಗಾವಿಯಲ್ಲಿ ರಾಜ್ಯ ಗ್ರಾಹಕರ ಸಂಚಾರಿ ಪೀಠ ಆರಂಭಿಸಬೇಕು. ಇಲ್ಲದಿದ್ದರೆ ಜಿಲ್ಲೆಯ ಸಮಸ್ತ ನ್ಯಾಯವಾದಿಗಳಿಂದ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸಿ.ಡಿ.ಹುಕ್ಕೇರಿ, ಪದಾಧಿಕಾರಿಗಳಾದ ವೈ.ಕೆ ಕೌಜಲಗಿ, ಎ.ಎ.ಪಾಟೀಲ, ಎಸ್.ಎಂ.ಕುದರಿ, ಎಸ್.ಬಿ.ನಾಯಿಕ, ಡಿ.ಡಿ.ಕೋಟಬಾಗಿ, ಜಿ.ಎಸ್.ಗಂಜಿ, ಎಸ್.ವಿ.ದೇಮಶೆಟ್ಟಿ, ಎಲ್.ಎಂ.ಗುದಿಗೋಪ್ಪ ಇದ್ದರು.

ಖಾನಾಪುರ ವರದಿ: ಕಲಬುರಗಿಯಲ್ಲಿ ರಾಜ್ಯ ಗ್ರಾಹಕರ ಸಂರಕ್ಷಣಾ ಆಯೋಗದ ಪೀಠ ಸ್ಥಾಪಿಸುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಖಾನಾಪುರ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು ಬುಧವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ಈಶ್ವರ ಘಾಡಿ ಮಾತನಾಡಿ, ಎಲ್ಲ ವಿಚಾರ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಬೆಳಗಾವಿಗೆ ಅನ್ಯಾಯವಾಗುತ್ತಿದೆ. ಇದರಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ಬೆಳಗಾವಿ ಜಿಲ್ಲೆಯಲ್ಲಿ ನೂರಾರು ಗ್ರಾಹಕರ ವ್ಯಾಜ್ಯ ಪ್ರಕರಣಗಳು ಬಾಕಿ ಇವೆ. ಈ ನಿಟ್ಟಿನಲ್ಲಿ ಬೆಳಗಾವಿಯಲ್ಲಿ ರಾಜ್ಯ ಗ್ರಾಹಕ ರಕ್ಷಣಾ ಆಯೋಗದ ಪೀಠ ಸ್ಥಾಪಿಸಲು ಬೆಳಗಾವಿ ಜಿಲ್ಲೆಯ ವಕೀಲರು ಕಳೆದ ಎರಡು ವರ್ಷಗಳಿಂದ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಸರ್ಕಾರ ಶೀಘ್ರ ಬೆಳಗಾವಿಯಲ್ಲಿ ಆಯೋಗದ ಪೀಠ ಸ್ಥಾಪಿಸಲು ಕ್ರಮವಹಿಸಬೇಕು ಎಂದು ಕೋರಿದರು. ಈಶ್ವರ ಘಾಡಿ, ವಿ.ಎನ್.ಪಾಟೀಲ, ಕೆ.ಜಿ.ಕಲ್ಲೇಕರ, ಎಸ್.ಕೆ.ನಂದಗಡಿ, ಮದನ ದೇಶಪಾಂಡೆ, ಎಂ.ಎ.ಮುಲ್ಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net