

ಎನ್.ಆರ್.ಪುರ: ಪ್ರೌಢಶಾಲೆಯಲ್ಲಿ ಗ್ರಾಹಕರ ಕ್ಲಬ್ ಮಾಡುವುದರಿಂದ ಮಕ್ಕಳ ದೈನಂದಿನ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದು ಕುದುರೆಗುಂಡಿ ಸರ್ಕಾರಿ ಪ್ರೌಢ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರವೀಣ ಶೆಟ್ಟಿ ತಿಳಿಸಿದರು.
ಕುದುರೆಗುಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಅರಿವು ಗ್ರಾಹಕ ಕ್ಲಬ್ ಉದ್ಘಾಟನೆ, ಮಕ್ಕಳ ಸಂತೆ ಹಾಗೂ ಪಾಲಕರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಗ್ರಾಹಕರು ಮೋಸ ಹೋದಾಗ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗ್ರಾಹಕ ಕ್ಲಬ್‌ನ ಮಕ್ಕಳಿಗೆ ತಿಳಿಯಲಿದೆ. ಗ್ರಾಹಕ ಕ್ಲಬ್‌ನಿಂದ ಮಕ್ಕಳಿಗೆ ಗ್ರಾಹಕರು ವ್ಯವಹರಿಸಬೇಕಾದ ನಿಯಮ, ನೀತಿ ಬಗ್ಗೆ ತಿಳಿವಳಿಕೆ ನೀಡಬೇಕು ಎಂದು ಹೇಳಿದರು.
ಮುಖ್ಯಶಿಕ್ಷಕ ಧನಂಜಯ ಮೇಧೂರ ಮಾತನಾಡಿ, ನಮ್ಮ ಶಾಲೆಯಲ್ಲಿ ಪ್ರಾರಂಭವಾದ ಗ್ರಾಹಕ ಸಂಘ 50 ವಿದ್ಯಾರ್ಥಿಗಳನ್ನು ಒಳಗೊಂಡಿದೆ. ಕ್ರಿಯಾಶೀಲ ಶಿಕ್ಷಕರು ಇದರ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಾರೆ. ಸಂಪನ್ಮೂಲ ವ್ಯಕ್ತಿಗಳಿಂದ ಗ್ರಾಹಕರ ಸಂಘದ ಕುರಿತಾಗಿ ಅರಿವು ಮೂಡಿಸುವ ಕಾರ್ಯಕ್ರಮ, ಮಕ್ಕಳ ಸಂತೆ, ಗ್ರಾಹಕ ಕೇಂದ್ರಗಳಿಗೆ ಭೇಟಿ ಮುಂತಾದ ಕಾರ್ಯಕ್ರಮ ನಡೆಸಲಾಗುವುದು. ಮಕ್ಕಳ ಸಂತೆ ಏರ್ಪಡಿಸಿದ್ದು ಇದರಿಂದ ಮಕ್ಕಳಿಗೆ ದಿನ ನಿತ್ಯದ ವ್ಯವಹಾರ ತಿಳಿಯಲಿದೆ ಎಂದರು.
ಮಕ್ಕಳ ಸಂತೆಯಲ್ಲಿ ಅಕ್ಕಿ, ತರಕಾರಿ, ಎಲೆ, ಅಡಕೆ, ಬಾಳೆಎಲೆ, ಬಾಳೆಹಣ್ಣು ಮುಂತಾದ ಆಹಾರ ಸಾಮಗ್ರಿಗಳನ್ನು ಮಾರಾಟ ಮಾಡಿದರು. ಪಾಲಕರಿಗೆ ವಿವಿಧ ಕ್ರೀಡಾಕೂಟ ಏರ್ಪಡಿಸಿ ಬಹುಮಾನ ವಿತರಿಸಲಾಯಿತು.
ಗ್ರಾಹಕ ಸಂಘದ ಸಂಚಾಲಕ ಶಂಕರಗೌಡ, ರಾಘವೇಂದ್ರ, ಪಾಪಣ್ಣ, ಕೃಷ್ಣಮೂರ್ತಿ, ಶಾಲಿನಿ, ವಸಂತಿ, ಉಮಾ, ಬಿ.ಪ್ರಕಾಶ್, ಉಷಾ, ಜ್ಯೋತಿ, ವಾಣಿ, ರೂಪಾ, ಯೋಗೇಶ್ವರಿ, ಶಿಲ್ಪಾ ಭಟ್, ಶಂಕರ್ ಗೌಡ, ವಿಠಲ ಇದ್ದರು.