ಗ್ರಾಹಕರ 8.53 ಕೆ.ಜಿ. ಚಿನ್ನ ಅಡವಿಟ್ಟ ಅಧಿಕಾರಿ : ಮರಳವಾಡಿಯ ಟಿಎಪಿಸಿಎಂಸ್​ ಆರ್ಥಿಕ ವ್ಯವಹಾರ ಶಾಖೆ ಅವ್ಯವಹಾರ

26 KKP 2 tapcms
Published on

ಗಂಗಾಧರ್​ ಬೈರಾಪಟ್ಟಣ ರಾಮನಗರ

ಕಷ್ಟಕಾಲಕ್ಕೆ ನೆರವಿಗೆ ಬರುವ ಚಿನ್ನಾಭರಣಗಳನ್ನು ಅಡವಿಟ್ಟ ಸಾಮಾನ್ಯ ಜನರು ಒಡವೆಗಳ ಸುರಕ್ಷತೆ ಬಗ್ಗೆ ಆತಂಕಪಡುವ ಮತ್ತೊಂದು ಟನೆ ಜಿಲ್ಲೆಯಲ್ಲಿ ನಡೆದಿದೆ.

ಸಾಲಕ್ಕಾಗಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂದಲ್ಲಿ ಅಡವಿಟ್ಟ ಕೆ.ಜಿ.ಗಟ್ಟಲೆ ಚಿನ್ನವನ್ನು ಅಧಿಕಾರಿ ದುರುಪಯೋಗಪಡಿಸಿಕೊಂಡು ಲಾಭಕ್ಕಾಗಿ ಮತ್ತೊಂದು ಬ್ಯಾಂಕ್​ನಲ್ಲಿ ಅಡವಿಟ್ಟಿರುವುದು ಕನಕಪುರದಲ್ಲಿ ಬೆಳಕಿಗೆ ಬಂದಿದೆ. ಇದು ಗ್ರಾಹಕರು ಆತಂಕಗೊಳ್ಳುವಂತೆ ಮಾಡಿದೆ.

ಏನಾಗಿದೆ? : ಕನಕಪುರ ಟೌನ್​ ಪೊಲೀಸ್​ ಠಾಣೆಗೆ ಕನಕಪುರ ಟಿಎಪಿಸಿಎಂಎಸ್​ನ ಪ್ರಭಾರ ಮುಖ್ಯ ಕಾರ್ಯದರ್ಶಿ ಮಹಮ್ಮದ್​ ನದೀಂ ಎಂಬುವವರು ಮಾ.25ರಂದು ದೂರು ನೀಡಿದ್ದು. ಟಿಎಪಿಸಿಎಂಎಸ್​ನ ಆರ್ಥಿಕ ವ್ಯವಹಾರ ಶಾಖೆಯನ್ನು ಮರಳವಾಡಿಯಲ್ಲಿ ಹೊಂದಿದ್ದು, ಇಲ್ಲಿನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಗೋವಿಂದಪ್ಪ ಎಂಬುವವರು ಕನಕಪುರ ಅರ್ಬನ್​ ಕೋ ಆಪರೇಟಿವ್​ ಬ್ಯಾಂಕ್​ನಲ್ಲಿದ್ದ 8 ಕೆ.ಜಿ. 534 ಗ್ರಾಂ ತೂಕದ ಚಿನ್ನಾಭರಣಗಳನ್ನು ಅಧಿಕಾರ ದುರುಪಯೋಗ ಪಡಿಸಿಕೊಂಡು ಲಾಭಕ್ಕಾಗಿ ಬೇರೆ ಖಾಸಗಿ ಬ್ಯಾಂಕ್​ಗಳಲ್ಲಿ ಅಡವಿಟ್ಟು ಹಣ ಪಡೆದು ಗ್ರಾಹಕರಿಗೆ ಮೋಸ ಮಾಡಿದ್ದಾರೆ ಎಂದು ದೂರಿದ್ದಾರೆ.

ಬೆಳಕಿಗೆ ಬಂದಿದ್ದು ಹೇಗೆ? ಮರಳವಾಡಿ ಹೋಬಳಿಯ ಮಲ್ಲಿಗೆಮೆಟ್ಟಿಲು ಗ್ರಾಮದ ವೆಂಕಟೇಶ್​ ಎಂಬುವವರು ಕಷ್ಟದ ಕಾರಣದಿಂದಾಗಿ ಟಿಎಪಿಸಿಎಂಎಸ್​ನ ಮರಳವಾಡಿ ವೃತ್ತ ಶಾಖೆಯಲ್ಲಿ 68 ಗ್ರಾಂ 700 ಮಿಲಿ ಚಿನ್ನ ಅಡವಿಟ್ಟಿದ್ದರು. ಇತ್ತೀಚೆಗೆ ಅಡವಿಟ್ಟು ಪಡೆದಿದ್ದ ಸಾಲ ತೀರಿಸಿ ಒಡವೆಗಳನ್ನು ವಾಪಸ್​ ನೀಡುವಂತೆ ಶಾಖಾ ವ್ಯವಸ್ಥಾಪಕ ಗೋವಿಂದಪ್ಪ ಅವರನ್ನು ಕೋರಿದ್ದಾರೆ. ಆದರೆ ಒಡವೆಗಳು ವಾಪಸ್​ ಬರುವ ಲಕ್ಷಣಗಳು ಗೋಚರಿಸದಿದ್ದಾಗ ಒಡವೆಗಳನ್ನು ಹಿಂದಿರುಗಿಸುವಂತೆ ಕೋರಿ ಕನಕಪುರ ಕಚೇರಿಯಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಗೋವಿಂದಪ್ಪ ಅವರನ್ನು ಕರೆದು ವಿಚಾರಣೆ ಮಾಡಲಾಗಿ ವೆಂಕಟೇಶ್​ ಅವರಿಗೆ ಸೇರಿದ ಒಡವೆಯೂ ಸೇರಿ 287 ಗ್ರಾಹಕರ ಒಟ್ಟು 8 ಕೆ.ಜಿ. 534ಗ್ರಾಂ ಚಿನ್ನಾಭರಣಗಳನ್ನು ಕನಕಪುರದಲ್ಲಿರುವ ಅರ್ಬನ್​ ಕೋ ಆಪರೇಟೀವ್​ ಬ್ಯಾಂಕ್​ನ ಲಾಕರ್​ನಿಂದ ತೆಗೆದು, ಕನಕಪುರದಲ್ಲಿರುವ ವಿವಿಧ ಖಾಸಗಿ ಬ್ಯಾಂಕ್​ಗಳಲ್ಲಿ ಅಡವಿಟ್ಟಿರುವುದು ಬೆಳಕಿಗೆ ಬಂದಿದೆ.

ದೂರು ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಕನಕಪುರ ಟೌನ್​ ಪೊಲೀಸರು ಗೋವಿಂದಪ್ಪನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಬೇಕಿದೆ ಸುರಕ್ಷತಾ ಖಾತ್ರಿ: ಗ್ರಾಹಕರು ಕಷ್ಟಕ್ಕಾಗಿ ಒಡವೆಯನ್ನು ಅಡವಿಟ್ಟಿರುತ್ತಾರೆ. ಆದರೆ ನಂಬಿರುವ ಸಂಸ್ಥೆಗಳಲ್ಲಿಯೇ ಇಂತಹ ವಂಚನೆಗಳು ನಡೆದರೆ ಯಾರನ್ನು ನಂಬುವುದು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾತನೂರಿನ ಹೊನ್ನಿಗನಹಳ್ಳಿಯಲ್ಲಿ ನಡೆದ ಪ್ರಕರಣ ಮತ್ತು ಇದೀಗ ಮರಳವಾಡಿ ಟಿಎಪಿಸಿಎಂಎಸ್​ನ ಶಾಖೆಯಲ್ಲಿ ನಡೆದಿರುವ ಪ್ರಕರಣ ಗ್ರಾಹಕರು ಅಡವಿಟ್ಟ ಚಿನ್ನಕ್ಕೆ ಸುರಕ್ಷತಾ ಖಾತ್ರಿ ಏನು ಎನ್ನುವ ಪ್ರಶ್ನೆ ಮೂಡಿಸಿದ್ದು, ಈ ನಿಟ್ಟಿನಲ್ಲಿ ಬ್ಯಾಂಕ್​ ಹಾಗೂ ಇತರ ಹಣಕಾಸು ಸಂಸ್ಥೆಗಳು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.

ಒಬ್ಬರಿಂದ ಸಾಧ್ಯವಿಲ್ಲ?: ನೂರಾರು ಗ್ರಾಹಕರಿಗೆ ಸೇರಿದ ಕೋಟ್ಯಂತರ ರೂ. ಬೆಲೆ ಬಾಳುವ ಭಾರೀ ಪ್ರಮಾಣದ ಒಡವೆಯನ್ನು ಒಬ್ಬನೇ ವ್ಯಕ್ತಿ ಈ ರೀತಿ ಮಾಡಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಮೂಡುತ್ತಿದೆ. ಇದರಲ್ಲಿ ಟಿಎಪಿಸಿಎಂಎಸ್​ನ ಇತರ ಸಿಬ್ಬಂದಿ ಸೇರಿ ಬ್ಯಾಂಕ್​ನ ಕೆಲ ಸಿಬ್ಬಂದಿಯೂ ಶಾಮೀಲಾಗಿರುವ ಸಾಧ್ಯತೆ ಇದ್ದು, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣವನ್ನು ಏನು ಮಾಡಲಾಗಿದೆ?, ಎಷ್ಟು ವರ್ಷಗಳಿಂದ ಈ ರೀತಿ ನಡೆಯುತ್ತಿದೆ ಎನ್ನುವ ಮಾಹಿತಿ ತನಿಖೆಯಿಂದ ಹೊರಬರಬೇಕಿದೆ.

ಕನಕಪುರದಲ್ಲಿ ಎರಡನೇ ಪ್ರಕರಣ: ಶುಕ್ರವಾರ ಬೆಳಕಿಗೆ ಬಂದಿರುವ ಪ್ರಕರಣ ಕನಕಪುರ ಪಾಲಿಗೆ ಹೊಸದೇನೂ ಅಲ್ಲ, ಇಂತಹ ಪ್ರಕರಣ ಕಳೆದ ವರ್ಷದ ಜುಲೈ& ಆಗಸ್ಟ್​ ತಿಂಗಳಲ್ಲಿಯೂ ಬೆಳಕಿಗೆ ಬಂದಿತ್ತು. ಕನಕಪುರ ತಾಲೂಕಿನ ಸಾತನೂರಿನ ಹೊನ್ನಿಗಾನಹಳ್ಳಿಯ ರಾಷ್ಟ್ರೀಕೃತ ಬ್ಯಾಂಕ್​ನ ವ್ಯವಸ್ಥಾಪಕನೊಬ್ಬ ಗ್ರಾಹಕರು ಅಡವಿಟ್ಟಿದ್ದ ಸಾಲಕ್ಕೆ ಬಡ್ಡಿ ಕಟ್ಟಿ ನವೀಕರಿಸದೇ ಇರುವುದನ್ನು ಆಯ್ಕೆ ಮಾಡಿಕೊಂಡು ಅಂತಹವರು ಅಡವಿಟ್ಟದ್ದ 9.5 ಕೆ.ಜಿ. ಚಿನ್ನವನ್ನು ಲಾಕರ್​ನಿಂದ ತೆಗೆದು ಅದರ ಬದಲಿಗೆ ಅಲ್ಲಿ ನಕಲಿ ಚಿನ್ನವಿಟ್ಟು ವಂಚಿಸಿದ್ದ. ಅಲ್ಲದೆ, ಇದನ್ನು ಮಂಡ್ಯದ ರಜನೀಶ್​ ಎಂಬುವರಿಗೆ ಮಾರಾಟ ಮಾಡಿ, ನಿವೇಶನ ಖರೀದಿ ಮಾಡಿದ್ದ. ಇದೀಗ ಟಿಎಪಿಸಿಎಂಎಸ್​ ಹಗರಣ ಬೆಳಕಿಗೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net