

ಹೊಳೆನರಸೀಪುರ: ವಿಶ್ವದ ಅನೇಕ ರಾಷ್ಟ್ರಗಳನ್ನು ಗಮನಿಸಿದಾಗ ಭಾರತದಲ್ಲಿ ಅತಿ ಹೆಚ್ಚು ಗ್ರಾಹಕರಿದ್ದು, ಅಂತಾರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ವ್ಯಾಪಾರ- ವ್ಯವಹಾರ ಮಾಡುತ್ತಿವೆ. ದೇಶದಲ್ಲಿ ಪ್ರತಿ ವರ್ಷ ಸುಮಾರು 2.35 ಲಕ್ಷ ಕೋಟಿ ರೂ.ಗಳ ವಹಿವಾಟು ನಡೆಯುತ್ತಿದೆ ಎಂದು ಗೃಹ ವಿಜ್ಞಾನ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಡಾ.ಭಾರತಿ ದೇವಿ ಹೇಳಿದರು.
ಪಟ್ಟಣದ ಗೃಹ ವಿಜ್ಞಾನ ಕಾಲೇಜಿನ ಆವರಣದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿ ವರ್ಷ ಡಿಸೆಂಬರ್ 24ನ್ನು ಭಾರತದಲ್ಲಿ ರಾಷ್ಟ್ರೀಯ ಗ್ರಾಹಕರ ದಿನವಾಗಿ ಆಚರಿಸಲಾಗುತ್ತದೆ. ಗ್ರಾಹಕರಿಗೆ ಗ್ರಾಹಕ ಹಕ್ಕುಗಳ ಅರಿವಿನ ಮಹತ್ವವನ್ನು ಮನವರಿಕೆ ಮಾಡಿಕೊಡುವ ಹಾಗೂ ಇತರರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಗ್ರಾಹಕರ ದಿನ ಆಚರಿಸಲಾಗುತ್ತದೆ. ಗ್ರಾಹಕರು ತಾವು ಖರೀದಿಸುವ ಸರಕು ಅಥವಾ ಸೇವೆಗಳಲ್ಲಿ ಯಾವುದೇ ರೀತಿಯ ಲೋಪ ಕಂಡು ಬಂದರೆ ನ್ಯಾಯ ಪಡೆಯಲು ಕಾನೂನಿನಲ್ಲಿ ಅವಕಾಶವಿದೆ ಎಂದರು.
ಆಹಾರ ವಿಜ್ಞಾನ ವಿಷಯದ ಉಪನ್ಯಾಸಕಿ ಶ್ವೇತಾ ನಾಯಕ್ ಮಾತನಾಡಿ, ಅನೇಕರು ವಿವಿಧ ಕಂಪನಿ, ಬ್ಯಾಂಕ್ ಮತ್ತು ಇತರ ಸೇವೆಗಳ ಹೆಸರಿನಲ್ಲಿ ಮೊಬೈಲ್ ಕರೆ, ಎಸ್‌ಎಂಎಸ್, ವಾಯ್ಸ ಮೆಸೇಜ್‌ಗಳ ಮೂಲಕ ಗ್ರಾಹಕರಿಗೆ ಆಮಿಷವೊಡ್ಡಿ ಸುಲಭವಾಗಿ ಮೋಸ ಮಾಡುತ್ತಾರೆ. ಆದ್ದರಿಂದ ಡಿಜಿಟಲ್ ಹಣಕಾಸು ವ್ಯವಹಾರದ ಬಗ್ಗೆ ಪ್ರತಿ ಗ್ರಾಹಕನಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ವಿವಿಧ ಇಲಾಖೆಗಳು ಹಾಗೂ ಆರ್ಥಿಕ ಸಂಸ್ಥೆಗಳು ಆಯೋಜಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥ ನಾಗೇಂದ್ರ, ಸೈಕಾಲಜಿ ವಿಭಾಗದ ಪ್ರಾಧ್ಯಾಪಕ ಕೃಷ್ಣಮೂರ್ತಿ, ಜಿ.ರಾಘವೇಂದ್ರ ಹಾಗೂ ವಿದ್ಯಾರ್ಥಿಗಳು ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದರು.