ಗ್ರಾಮೀಣಾಭಿವೃದ್ಧಿಯಲ್ಲಿ ಗ್ರಾಮ ಪಂಚಾಯಿತಿ ಪಾತ್ರ ದೊಡ್ಡದು

Oplus_131072
ಬಟಗೇರಾದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಗ್ರಾಪಂ ಅಧ್ಯಕ್ಷರ ಪದಗ್ರಹಣ ಸಮಾರಂಭವನ್ನು ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಉದ್ಘಾಟಿಸಿದರು. ಅಧ್ಯಕ್ಷೆ ಜ್ಯೋತಿಬಾ ಸಾಳುಂಕೆ, ಜ್ಞಾನೇಶ್ವರ ಮುಳೆ, ಗೋಲಂದಾಸ ಇಲ್ಲಾಳೆ, ಸೋಮಶೇಖರ ಬಿರಾದಾರ, ಶಿವಾಜಿ ಭೂರೆ, ನಾಗೇಶ ಮಹಾಜನ್, ಭಜರಂಗ ಭೂರೆ, ರಾಘವೇಂದ್ರ ಕುಲಕರ್ಣಿ ಇದ್ದರು.
Published on

ಬಸವಕಲ್ಯಾಣ: ಗ್ರಾಮೀಣ ಭಾಗದ ಅಭಿವೃದ್ಧಿಯಲ್ಲಿ ಗ್ರಾಮ ಪಂಚಾಯಿತಿಗಳ ಪಾತ್ರ ದೊಡ್ಡದು. ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಸಾಕಾರವಾಗುವಲ್ಲಿ ಗ್ರಾಪಂಗಳು ತಳಸ್ಪರ್ಶಿಯಾಗಿ ಪ್ರಾಮಾಣಿಕ ಪ್ರಯತ್ನ ಮಾಡುವ ಅಗತ್ಯವಿದೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯ ನುಡಿದರು.

ಬಟಗೇರಾ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಉದ್ಘಾಟಿಸಿದ ಅವರು, ಪ್ರಾಮಾಣಿಕತೆ ಮತ್ತು ದೂರದೃಷ್ಟಿ ಪ್ರಜಾಪ್ರಭುತ್ವದ ಆತ್ಮವಿದ್ದಂತೆ. ರಾಜಕೀಯ ಕ್ಷೇತ್ರದಲ್ಲಿರುವವರು ಇದನ್ನು ತಪಸ್ಸಿನಂತೆ ಪಾಲಿಸಬೇಕು ಎಂದು ಕಿವಿಮಾತು ಹೇಳಿದರು.

ಛತ್ರಪತಿ ಶಿವಾಜಿ ಮಹಾರಾಜರ ಆಡಳಿತ ನೀತಿ ಇಂದು-ಮುಂದೆಯೂ ಆದರ್ಶಪ್ರಾಯವಾಗಿದೆ. ವಿಶ್ವಾಸಾರ್ಹ ಮರಾಠ ಸಮಾಜ ರಾಷ್ಟ್ರ ಕಟ್ಟುವಲ್ಲಿ ನೀಡಿದ ಕೊಡುಗೆ ಯಾವತ್ತೂ ಮರೆಯುವಂತಿಲ್ಲ. ಗ್ರಾಪಂಗಳು ತಮ್ಮ ಆಡಳಿತ ವ್ಯಾಪ್ತಿಯ ಬಡವರ ಆಶೋತ್ತರಗಳಿಗೆ ಧನಾತ್ಮಕವಾಗಿ ಸ್ಪಂದಿಸಬೇಕು. ಗ್ರಾಮೀಣ ಜನರ ಬೇಡಿಕೆಗಳನ್ನು ಸಕಾಲಕ್ಕೆ ಈಡೇರಿಸಲು ಕ್ರಿಯಾಶೀಲರಾಗಿ ಕಾಯಕ ಮಾಡಿದರೆ ಗ್ರಾಮೋದಯ ಮೂಲಕ ರಾಷ್ಟ್ರೋದಯ ಸಾಧ್ಯವಾಗಲಿದೆ ಎಂದರು.

ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಜ್ಯೋತಿಬಾ ಸಾಳುಂಕೆ ಸಾರಥ್ಯದಲ್ಲಿ ಬಟಗೇರಾ ಗ್ರಾಪಂ ಸಮಗ್ರ ಅಭಿವೃದ್ಧಿ ಸಾಧಿಸುವಂತಾಗಲಿ ಎಂದು ಹಾರೈಸಿದರು.

ಗ್ರಾಪಂ ಅಧ್ಯಕ್ಷೆ ಜ್ಯೋತಿಬಾ ಸಾಳುಂಕೆ, ಪ್ರಮುಖರಾದ ಜ್ಞಾನೇಶ್ವರ ಮುಳೆ, ಗೋಲಂದಾಸ ಇಲ್ಲಾಳೆ, ಬಟಗೇರಾ ಪಿಕೆಪಿಎಸ್ ಅಧ್ಯಕ್ಷ ಸೋಮಶೇಖರ ಬಿರಾದಾರ, ಶಿವಾಜಿ ಭೂರೆ, ನಾಗೇಶ ಮಹಾಜನ್, ಭಜರಂಗ ಭೂರೆ, ರಾಘವೇಂದ್ರ ಕುಲಕರ್ಣಿ, ಅಣ್ಣಪ್ಪ ನವಣೆ, ವಿಲಾಸ ಗೊಡಕೆ ಉಪಸ್ಥಿತರಿದ್ದರು.

ಬಸವರಾಜ ಸ್ವಾಮಿ ಸ್ವಾಗತಿಸಿದರು. ರಾಜಕುಮಾರ ಡಾವರೆ ವಂದಿಸಿದರು. ಗುಂಡಪ್ಪ ಜಮಾದಾರ ನಿರೂಪಣೆ ಮಾಡಿದರು.

ಬಟಗೇರಾ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳು ಪ್ರಾರ್ಥನಾಗೀತೆ ನಡೆಸಿಕೊಟ್ಟರು.ಇದಕ್ಕೂ ಮೊದಲು ಗ್ರಾಮಕ್ಕೆ ಆಗಮಿಸಿದ ಹಾರಕೂಡ ಶ್ರೀಗಳನ್ನು ಅಲಂಕೃತ ಸಾರೋಟಿನಲ್ಲಿ ಅದ್ದೂರಿ ಮೆರವಣಿಗೆ ಮೂಲಕ ಸಮಾರಂಭದ ವೇದಿಕೆಗೆ ಬರಮಾಡಿಕೊಳ್ಳಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net