ಗ್ರಾಮೀಣಾಭಿವೃದ್ಧಿ ವಿವಿಯಿಂದ ನೂತನ ಕಾರ್ಯಕ್ರಮ, ಸ್ವಗ್ರಾಮ ಫೆಲೋಶಿಪ್​ಗೆ ಅರ್ಜಿ ಆಹ್ವಾನ

Rural vv
Published on

ಹುಬ್ಬಳ್ಳಿ: ಗದಗನಲ್ಲಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ವಿಶ್ವವಿದ್ಯಾಲಯವು ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಸ್ವಾವಲಂಬಿ ಗ್ರಾಮ ನಿರ್ಮಾಣ ಹಾಗೂ ವಿಕಾಸದ ಪರಿಕಲ್ಪನೆಯ ಚೌಕಟ್ಟು ಮತ್ತು ಸಾಧನಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಸ್ವಗ್ರಾಮ ಫೆಲೋಶಿಪ್ ಆರಂಭಿಸಿದೆ ಎಂದು ಈ ಯೋಜನೆಯ ಮಾರ್ಗದರ್ಶಕ (ಮೆಂಟರ್) ಡಾ. ಪ್ರಕಾಶ ಭಟ್ಟ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಯೂತ್ ಫಾರ್ ಸೇವಾ, ಪ್ರಜ್ಞಾ ಪ್ರವಾಹ, ಚಾಣಕ್ಯ ವಿಶ್ವವಿದ್ಯಾಲಯ, ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಅಬ್ದುಲ್ ನಜೀರ್ ಸಾಬ್ ಅಧ್ಯಯನ ಪೀಠ ಇವುಗಳ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಡಿಸೆಂಬರ್ 15ರ ವರೆಗೆ ಆಸಕ್ತರು ಅರ್ಜಿ ಸಲ್ಲಿಸಬಹುದು ಎಂದರು.

ಗ್ರಾಮದ ಸ್ವಭಾವಕ್ಕೆ ಅನುಗುಣವಾಗಿ ಗ್ರಾಮ ವಿಕಾಸದ ಮಾದರಿಗಳ ನಿರ್ಮಾಣ ಮಾಡುವುದು, ಪರಸ್ಪರ ಅವಲಂಬನೆ ಮತ್ತು ಸಹಕಾರದ ಆಧಾರದ ಮೇಲೆ ಸ್ವಾವಲಂಬಿ ಗ್ರಾಮ ನಿರ್ಮಾಣ ಮಾಡುವ ಆಶಯ ಇದರಲ್ಲಿದೆ.

ಅನೇಕರು ಜತೆಗೂಡಿ ಗ್ರಾಮ ವಿಕಾಸದಲ್ಲಿ ಭಾಗವಹಿಸಲು ಅವಕಾಶ ಇದೆ. ತಮ್ಮದೇ ಗ್ರಾಮವನ್ನು ವಿಕಾಸದತ್ತ ಕೊಂಡೊಯ್ಯಬೇಕೆಂಬ ಹಂಬಲ ಇರುವ ಪ್ರತಿಯೊಂದು ತಂಡಕ್ಕೆ ಅಗತ್ಯವಾದ ಜ್ಞಾನ, ಕೌಶಲ ಹಾಗೂ ಮಾದರಿಗಳಿಗಾಗಿ ಮಾರ್ಗದರ್ಶನ ಮಾಡಲಾಗುವುದು. ತಮ್ಮ ಗ್ರಾಮದ ಬದಲಾವಣೆಯ ರೂವಾರಿಗಳು ತಾವೇ ಆಗಲು ಇದೊಂದು ಅವಕಾಶ. ಇದರಲ್ಲಿ ಗ್ರಾಮೀಣರ ತೊಡಗಿಕೊಳ್ಳುವಿಕೆ ಮಹತ್ವದ್ದಾಗಿದೆ. ಜನಕೇಂದ್ರಿತ ಬದಲಾವಣೆ ಪ್ರಕ್ರಿಯೆಯನ್ನು ಸುಗಮಗೊಳಿಸುವ ಜವಾಬ್ದಾರಿಯನ್ನು ಫೆಲೋಶಿಪ್​ನಲ್ಲಿ ಫೆಲೋಗಳಿಗೆ ನೀಡಲಾಗುತ್ತದೆ ಎಂದರು.

ಆಯ್ಕೆ ಹೇಗೆ:

ರಾಜ್ಯದ ಎಲ್ಲ ಜಿಲ್ಲೆಗಳಿಗೂ ಆದ್ಯತೆ ನೀಡಿ, 75 ಗ್ರಾಮಗಳನ್ನು ಫೆಲೋಶಿಪ್​ಗೆ ಆಯ್ಕೆ ಮಾಡಲಾಗುವುದು. ಪ್ರತಿ ಹಳ್ಳಿಯಿಂದ ಅಲ್ಲಿಯೇ ವಾಸ ಮಾಡುವ ಇಬ್ಬರು ಹಾಗೂ ತಮ್ಮ ಗ್ರಾಮದ ಅಭಿವೃದ್ಧಿ ಬಗ್ಗೆ ಕನಸು ಹೊಂದಿದ್ದು, ಬೇರೆ ಕಡೆ ವಾಸವಿರುವ ಯಾವುದಾದರೂ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಇನ್ನೊಬ್ಬ ವ್ಯಕ್ತಿಗೆ ಆದ್ಯತೆ ನೀಡಲಾಗುತ್ತದೆ. ಈ ಆಯ್ಕೆ ಪ್ರಕ್ರಿಯೆಯನ್ನು ನಡೆಸಲು ತಂಡವೊಂದನ್ನು ರಚಿಸಲಾಗಿದೆ ಎಂದರು.

ಗ್ರಾಮದ ವಿಕಾಸಕ್ಕೆ ರಚನೆಯಾಗುವ ಫೆಲೋಗಳ ತಂಡಕ್ಕೆ ಸೀಡ್ ಮನಿಯಾಗಿ 50 ಸಾವಿರ ರೂ. ಹಾಗೂ ಫೆಲೋಗಳಿಗೆ ಮೂರು ವರ್ಷದವರೆಗೆ ಪ್ರತಿ ತಿಂಗಳು 5 ಸಾವಿರ ರೂ. ಗೌರವ ಧನ ನೀಡಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ವಿವಿ ಕುಲಸಚಿವ ಪ್ರೊ. ಬಸವರಾಜ ಲಕ್ಕಣ್ಣವರ ತಿಳಿಸಿದರು.

ಅಭಿಷೇಕ ಎಚ್.ಇ., ಲಿಂಗರಾಜು ನಿಡುವಣಿ, ವೀಣಾ ಅಠವಲೆ, ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net