ಗ್ರಾಮೀಣರು ಆರೋಗ್ಯ ಕಾಳಜಿ ಹೊಂದಿ, ಬಮುಲ್ ನಿರ್ದೇಶಕ ಭಾಸ್ಕರ್ ಹೇಳಿಕೆ, ಟ್ರಸ್ಟ್‌ನಿಂದ ಶುದ್ಧ ನೀರಿನ ಘಟಕ ಉದ್ಘಾಟನೆ

16 Nela ph 04
Published on

ನೆಲಮಂಗಲ: ಗ್ರಾಮೀಣ ಭಾಗದ ಜನರು ಆರೋಗ್ಯ, ನೈರ್ಮಲ್ಯ, ಸ್ವಚ್ಛತೆ ಬಗ್ಗೆ ಹೆಚ್ಚಿನ ಅರಿವು ಬೆಳೆಸಿಕೊಳ್ಳಬೇಕು ಎಂದು ಬಮುಲ್ ನಿರ್ದೇಶಕ ಜಿ.ಆರ್.ಭಾಸ್ಕರ್ ಹೇಳಿದರು.

ತಾಲೂಕಿನ ಹುಣಸೇಘಟ್ಟೆಪಾಳ್ಯದಲ್ಲಿ ಹಾಲು ಉತ್ಪಾದಕ ಸಹಕಾರ ಸಂಘ ಮಂಗಳವಾರ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಸಮಾನ್ಯ ಸಭೆ ಹಾಗೂ ಬಮುಲ್ ಟ್ರಸ್ಟ್‌ನಿಂದ ನಿರ್ಮಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದರು.

ನಾನು ನಿರ್ದೇಶಕನಾದ 24 ತಿಂಗಳಿಂದ ತಾಲೂಕಿನಾದ್ಯಂತ 44 ಶುದ್ಧ ಕುಡಿಯುವ ನೀರಿನ ಘಟಕ, 18 ಹಾಲು ಶಿಥಲೀಕರಣ ಘಟಕ, 24 ನೂತನ ಹಾಲಿನ ಡೇರಿ ಕಟ್ಟಡ ನಿರ್ಮಾಣದ ಜತೆಗೆ ರೈತರ ಸಂಕಷ್ಟಕ್ಕೆ ಸ್ಪಂದಿಸಲಾಗುತ್ತದೆ ಎಂದರು.

ಸರ್ಕಾರದ ನೆರವು ರೈತರಿಗೆ ಸಮರ್ಪಕವಾಗಿ ಸಿಗುತ್ತಿಲ್ಲ. ಇದನ್ನು ಮನಗಂಡು ಬೆಂಗಳೂರು ಹಾಲು ಸಹಕಾರಗಳ ಒಕ್ಕೂಟದಿಂದ ರೈತರಿಗೆ ಅನುಕೂಲಕ್ಕಾಗಿ ಶುದ್ಧಕುಡಿಯುವ ನೀರಿನ ಘಟಕವನ್ನು ಪ್ರಾರಂಭ ಮಾಡಲಾಗಿದೆ ಎಂದರು.

ರಾಸುಗಳಿಗೆ ವಿಮೆ ಕಡ್ಡಾಯ: ಪ್ರತಿಯೊಬ್ಬ ರೈತರು ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿಬೇಕು. ರೈತರು ಜಾನುವಾರ ಖರೀದಿ ಮಾಡುವಾಗ ವಿಮೆ ಪರಿಶೀಲನೆ ಮಾಡಿ ಖರೀದಿಸಿದರೆ ವಿಮೆಯನ್ನು ವರ್ಗಾವಣೆ ಮಾಡಿಕೊಳ್ಳಬೇಕು ಎಂದು ಜಿ.ಆರ್.ಭಾಸ್ಕರ್ ತಿಳಿಸಿದರು.

ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಮುನಿಕೃಷ್ಣಯ್ಯ ಮಾತನಾಡಿ, ಗ್ರಾಮದ ಜನರ ಬಹುದಿನದ ಬೇಡಿಕೆಯಾದ ಶುದ್ಧ ನೀರಿನ ಘಟಕವನ್ನು ಬಮುಲ್‌ನಿಂದ ನಿರ್ಮಾಣ ಮಾಡಿರುವುದು ಸಂತಸದ ಸಂಗತಿ. ಗ್ರಾಮದ ಜನರು ಶುದ್ಧಕುಡಿಯುವ ನೀರಿನ ಘಟಕದ ಪ್ರಯೋಜನ ಪಡೆದುಕೊಂಡು ಆರೋಗ್ಯವಂತರಾಗಬೇಕು ಎಂದರು.

ಬಮುಲ್ ಟ್ರಸ್ಟ್ ಉಪವ್ಯವಸ್ಥಾಪಕ ಎ.ಆರ್.ಗೋಪಾಲಗೌಡ, ಟ್ರಸ್ಟಿ ರಮೇಶ್‌ಬಾಬು, ವಿಸ್ತರಣಾಧಿಕಾರಿ ಎಚ್.ಎನ್.ಶ್ರುತಿ, ಗುರುವನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ಕಾರ್ಯದರ್ಶಿ ರಾಜಗೋಪಾಲ್, ಡೇರಿ ನಿರ್ದೇಶಕರಾದ ಕೃಷ್ಣಪ್ಪ, ರಾಮಕೃಷ್ಣಪ್ಪ, ತಿಮ್ಮರಾಯಪ್ಪ, ರಮೇಶಯ್ಯ, ಗಂಗಣ್ಣ, ಸಿದ್ದಪ್ಪ, ಭಾಗ್ಯಮ್ಮ, ಮುಖ್ಯ ಕಾರ್ಯನಿರ್ವಾಹಕ ಜಿ.ಕಲ್ಲಯ್ಯ, ಹಾಲು ಪರೀಕ್ಷಕ ಎಸ್.ಉಮೇಶ್, ಗಾಂಧಿ ಗ್ರಾಮ ವ್ಯವಸಾಯ ಉತ್ಪಾದಕ ಸಹಕಾರ ಸಂಘದ ನಿರ್ದೇಶಕ ಜಿ.ಚನ್ನೇಗೌಡ, ಮಾಜಿ ನಿರ್ದೇಶಕ ನಾರಾಯಣಪ್ಪ, ಮುಖಂಡರಾದ ಗಂಗರಾಜು, ಎನ್.ಶ್ರೀನಿವಾಸ್, ಆರ್.ಚನ್ನಕೇಶವ, ಎಸ್.ರವಿಕುಮಾರ್, ಜಿ.ಮಂಜುನಾಥ್, ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net