

ಯಾದಗಿರಿ: ಹಿಂದುಳಿದ ಕಕ ಭಾಗದ ಅಭಿವೃದ್ಧಿ ಜತೆಗೆ ರಾಜ್ಯದ ಸಮಗ್ರ ಪ್ರಗತಿಗೆ ಸರ್ಕಾರ ಬದ್ಧವಾಗಿದೆ. ಹಿಂದುಳಿದ ಪ್ರದೇಶದಲ್ಲಿ ಇದೂವರೆಗಿನ ಅಭಿವೃದ್ಧಿ ಆಧರಿಸಿ ಹೊಸದಾಗಿ ಸೂಚ್ಯಂಕ ನಿಗದಿಪಡಿಸುವ ನಿಟ್ಟಿನಲ್ಲಿ ಆರ್ಥಿಕ ತಜ್ಞ ಗೋವಿಂದರಾವ್ ಅಧ್ಯಕ್ಷತೆಯಲ್ಲಿ ಉನ್ನತ ಸಮಿತಿ ರಚಿಸಿದ್ದು, ಸಮಿತಿ ವರದಿಯಂತೆ ಮುಂದಿನ ದಿನದಲ್ಲಿ ಈ ಭಾಗಕ್ಕೆ ವಿಶೇಷ ಅನುದಾನ ನೀಡುವುದು ಮುಂದುವರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕೆಕೆಆರ್‌ಡಿಬಿ, ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ ಆರೋಗ್ಯ ಅವಿಷ್ಕಾರ ಕಾರ್ಯಕ್ರಮದ ಕಲಬುರಗಿ ವಿಭಾಗದ ೭ ಜಿಲ್ಲೆಗಳ ೪೪೦.೬೩ ಕೋಟಿ ರೂ.ಗಳ ವೆಚ್ಚದ ಆರೋಗ್ಯ ಇಲಾಖೆಯ ಆಸ್ಪತ್ರೆ ಮೇಲ್ದರ್ಜೆಗೇರಿಸುವುದು ಸೇರಿ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿ ಹಾಗೂ ಜಿಲ್ಲಾ ಬಂಜಾರ ಭವನ ಉದ್ಘಾಟಿಸಿ ಮಾತನಾಡಿದರು.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ತಾಯಿ-ಮಕ್ಕಳ ಮರಣ ಪ್ರಮಾಣ ಹೆಚ್ಚಿದೆ, ಮಕ್ಕಳಲ್ಲಿ ರಕ್ತಹೀನತೆ ಹೋಗಲಾಡಿಸಲು, ಆರೋಗ್ಯ ಸುಧಾರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಕಲಬುರಗಿ ಸಚಿವ ಸಂಪುಟ ಸಭೆಯಲ್ಲಿ ೮೫೭ ಕೋಟಿ ರೂ. ವೆಚ್ಚದ ಆರೋಗ್ಯ ಆವಿಷ್ಕಾರ ಯೋಜನೆಗಳಿಗೆ ಅನುಮೋದನೆ ನೀಡಿದ್ದವು ಇಂದು ಚಾಲನೆ ನೀಡಿದ್ದೇವೆ. ಸಿಟಿ ಸ್ಕ್ಯಾನ್, ಎಂಆರ್‌ಐ ಇನ್ನಿತರ ವೈದ್ಯಕೀಯ ಸೇವೆಗಳನ್ನು ಕಡಿಮೆ ವೆಚ್ಚದಲ್ಲಿ ಹಾಗೂ ಹೈಟೆಕ್ ಚಿಕಿತ್ಸೆ ಕಡಿಮೆ ವೆಚ್ಚದಲ್ಲಿ ಲಭಿಸುವಂತೆ ಮಾಡಲು ಮುಂದಿನ ದಿನಗಳಲ್ಲಿ ಆರೋಗ್ಯ ಇಲಾಖೆ ಕಾರ್ಯಕ್ರಮ ರೂಪಿಸಲು ಸೂಚಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯ ಅವರು ಹೆಚ್ಚಿನ ಒತ್ತು ನೀಡುತ್ತಿದ್ದು, ಇದರಿಂದ ಗಿರಿ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಮರು ಜೀವ ಸಿಕ್ಕಿದೆ ಎಂದರು. ಆರೋಗ್ಯ ಸಚಿವ ದಿನೇಶ ಗುಂಡುರಾವ್ ಮಾತನಾಡಿದರು. ಶಾಸಕ ಚನ್ನಾರಡ್ಡಿ ಪಾಟೀಲ್ ಸ್ವಾಗತಿಸಿದರು.
೩ವರ್ಷದಲ್ಲಿ ೧೩ ಸಾ.ಕೋ. ರೂ.ಅನುದಾನ: ಕಳೆದ ೩ ವರ್ಷದಲ್ಲಿ ಸರ್ಕಾರ ಕಲ್ಯಾಣ ಮಂಡಳಿಗೆ ೧೩,೦೦೦ ಕೋಟಿ ರೂ. ನೀಡಿದೆ. ಕಳೆದ ೨೦೧೩-೧೮ರ ಅವಧಿಯಲ್ಲಿ ಚುನಾವಣೆ ಪ್ರಾಣಾಳಿಕೆಯಲ್ಲಿ ನೀಡಿದ ೧೬೫ ಭರವಸೆಗಳಲ್ಲಿ ೧೫೮ ಹಾಗೂ ೨೦೨೩ರಲ್ಲಿ ನೀಡಿದ ೫೯೩ರಲ್ಲಿ ೨೪೨ ಭರವಸೆಗಳನ್ನು ಈಡೇರಿಸಿದ್ದೇವೆ.ಇದೂವರೆಗೆ ೯೦ ಸಾವಿರ ಕೋಟಿ ರೂ. ಖರ್ಚು ಮಾಡಿದ್ದೇವೆ.ಗ್ಯಾರಂಟಿ ಅನುಷ್ಠಾನದಿಂದ ರಾಜ್ಯ ದಿವಾಳಿಯಾಗುತ್ತೆ ಎಂದು ವಿರೋಧ ಪಕ್ಷಗಳು ಅಪಪ್ರಚಾರ ಮಾಡಿದ್ದರು. ಅದನ್ನು ಸುಳ್ಳಾಗಿಸಿ ಗ್ಯಾರಂಟಿ ಜೊತೆಗೆ ಶಿಕ್ಷಣ, ನೀರಾವರಿ, ಆರೋಗ್ಯ, ಮೂಲಸೌಕರ್ಯ, ರಸ್ತೆ, ಉದ್ಯೋಗ ಕಲ್ಪಿಸುವಂತಹ ಕೆಲಸಗಳು ನಮ್ಮ ಸರ್ಕಾರ ಪ್ರಮಾಣಿಕವಾಗಿ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
೩೭೧(ಜೆ) ಜಾರಿಗೆ ಖರ್ಗೆ, ಧರ್ಮಸಿಂಗ್ ಕಾರಣ: ೨೦೧೩ರಲ್ಲಿ ಡಾ.ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಮುಖ್ಯಮಂತ್ರಿ ದಿ.ಧರ್ಮಸಿಂಗ್ ಅವರ ವಿಶೇಷ ಪ್ರಯತ್ನದಿಂದ ಈ ಭಾಗಕ್ಕೆ ಸಂವಿಧಾನ ತಿದ್ದುಪಡಿಯಾಗಿ ೩೭೧(ಜೆ) ಜಾರಿಗೆ ಬಂತು. ಅಂದು ರಾಜ್ಯದಲ್ಲಿ ಆಗತಾನೇ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಎಚ್.ಕೆ.ಪಾಟೀಲ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚಿಸಿ ವರದಿ ಪಡೆದು ಯಥಾವತ್ತಾಗಿ ಜಾರಿಗೆ ತಂದಿದ್ದೇವೆ ಎಂದು ತಮ್ಮ ಹಿಂದಿನ ಅವಧಿಯ ಕೆಲಸ ಕಾರ್ಯಗಳನ್ನು ಸಿಎಂ ನೆನಪಿನ ಬುತ್ತಿ ಬಿಚ್ಚಿಟ್ಟರು.
ಯಾದಗಿರಿಗೆ ೩ ವರ್ಷದಲ್ಲಿ ಒಳಚರಂಡಿ: ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರ ಕೋರಿಕೆಯಂತೆ ಯಾದಗಿರಿ ನಗರಕ್ಕೆ ಮುಂದಿನ ಮೂರು ವರ್ಷದಲ್ಲಿ ಹಂತ ಹಂತವಾಗಿ ಒಳಚರಂಡಿ ವ್ಯವಸ್ಥೆ ಜಾರಿಗೆ ತಂದು ಉತ್ತಮ ನಾಗರಿಕ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು.
ಉಚಿತ ನಿವೇಶನ ಮಂಜೂರಾತಿ ಪತ್ರ ಹಸ್ತಾಂತರ: ಸಮಾರಂಭದಲ್ಲಿ ಸ್ವಾತಂತ್ರö್ಯ ಹೋರಾಟಗಾರರಾಗಿದ್ದ ದಿ.ಕೊಲೂರ ಮಲ್ಲಪ್ಪ ಅವರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರದಿಂದ ಉಚಿತವಾಗಿ ೨ ಎಕರೆ ಭೂಮಿ ಮಂಜೂರು ಮಾಡಿದ ಆದೇಶ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗಣ್ಯರು ಟ್ರಸ್ಟಿನ ಪದಾಧಿಕಾರಿಗಳಾದ ಕೆ.ವಿಶ್ವನಾಥ ನೀಲಹಳ್ಳಿ, ಸಾಯಬಣ್ಣ ಕೆಂಗೇರಿ, ಮಲ್ಲಣ್ಣ ಐಕೂರು, ಸಿದ್ದಣ್ಣಗೌಡ ವಡಿಗೇರಿ ಅವರಿಗೆ ಹಸ್ತಾಂತರಿಸಿದರು. ಒಂದು ವರ್ಷದಲ್ಲಿ ಸ್ಮಾರಕ ನಿರ್ಮಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರರಿಗೆ ಸಿಎಂ ಸೂಚನೆ ನೀಡಿದ್ದರು.