ಗ್ರಾಮೀಣ ಸಾಹಿತ್ಯದಿಂದ ಕನ್ನಡದ ಉಳಿವು

29 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಾಹಿತ್ಯ ಸದಾ ಸಂಚಲನಾತ್ಮವಾಗಿದ್ದಾಗಲೇ ಚಿಂತನೆಯಲ್ಲಿ ಹೊಸತನ ಕಾಣಲು ಸಾಧ್ಯ ಎಂದು ಸಾಹಿತಿ ಲೀಲಾ ಕಲಕೋಟಿ ಅಭಿಪ್ರಾಯಪಟ್ಟರು.
ತಾಲೂಕಿನ ಮುಮ್ಮಿಗಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜೀವನದಲ್ಲಿ ಸತತ ಓದಿನ ಜತೆಗೆ ಭಾಷೆಗಳನ್ನು ಕಲಿಯುವ ಆಸಕ್ತಿ ಇರಬೇಕು. ಇದರಿಂದ ಹೆಚ್ಚಿನ ಜ್ಞಾನ, ಅನುಭವ ಪಡೆಯಬಹುದು. ಕಾಲಘಟ್ಟ ಬದಲಾದಂತೆ ಸಾಹಿತ್ಯದಲ್ಲೂ ಬದಲಾವಣೆಗಳಾಗಿವೆ. ಆದರೆ ಜಾನಪದ ಸಾಹಿತ್ಯ ಸ್ಮರಿಸದೆ ಇರಲಾಗದು. ಅದು ಅನಕ್ಷರಸ್ಥರ ಅಳಿಸಲಾಗದ ವಿಶೇಷ ಕೊಡುಗೆ. ಸಾಹಿತ್ಯ ಕ್ಷೇತ್ರಕ್ಕೆ, ಅದರಲ್ಲಿ ಹರಿದು ಬರುವ ಅನುಭವದ ಅಲೆಗಳು ಬಾಯಿಂದ ಬಾಯಿಗೆ ಧ್ವನಿಯಾಗಿ ಹೊರಬಂದಿವೆ. ಜಾನಪದದ ಮೂಲ ಬೇರು ಮಹಿಳೆ. ತನ್ನ ಅನುಭವ, ಕೆಲಸಗಳ ಪದರುಗಳನ್ನು ಬಿಚ್ಚಿಡುವವರು ಮಹಿಳಾ ಅನಕ್ಷರಸ್ಥರು. ಇಂತಹ ಸಾಹಿತ್ಯ ಇಂದಿಗೂ ಉಳಿದುಕೊಂಡಿದೆ. ಇವರು ಶಾಲೆ, ಕಾಲೇಜು, ವಿವಿಗಳಲ್ಲಿ ಕಲಿತವರಲ್ಲ. ಆದರೆ ಇವರ ಸಾಹಿತ್ಯ ವಿವಿಗಳಲ್ಲಿ ಪಠ್ಯ ಹಾಗೂ ಅಧ್ಯಯನದ ಆಕರಗಳಾಗಿರುವುದು ಸೋಜಿಗದ ವಿಷಯ ಎಂದರು.
ನಗರದ ಆಂಗ್ಲ ಗಾಳಿ ಗ್ರಾಮೀಣಕ್ಕೆ ತಟ್ಟಿಲ್ಲ. ಗ್ರಾಮೀಣ ಸಾಹಿತ್ಯದಿಂದಲೇ ಕನ್ನಡ ಭಾಷೆ ಉಳಿದು ಮುಂದುವರೆದಿದೆ ಎಂದರೆ ತಪ್ಪಾಗಲಾರದು. ಗ್ರಾಮೀಣ ಯುವ ಜನತೆ, ರೈತರು, ಮಹಿಳೆಯರಿಂದ ಕನ್ನಡ ಜೀವಂತವಿದೆ ಎಂದ ಅವರು, ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲೆಯ ಕಟ್ಟಡ ವಿಶಾಲವಾಗಿದೆ. ಇಂತಹ ಸ್ಥಳದಲ್ಲಿ ಜಿಲ್ಲೆಯ ಎಲ್ಲ ಸಾಹಿತಿಗಳ ಒಂದೊಂದು ಕೃತಿ ಜನಸಾಮಾನ್ಯರಿಗೆ ಸಿಗುವಂತೆ ವ್ಯವಸ್ಥೆ ಮಾಡಬೇಕು. ಇದಕ್ಕೆ ಕಸಾಪ ಜತೆ ಸಾಹಿತ್ಯಾಸಕ್ತರು ಕೈ ಜೋಡಿಸಬೇಕು ಎಂದರು.
ಸಾಹಿತಿ ಡಾ. ಶಾಂತಾ ಇಮ್ರಾಪುರ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಕನ್ನಡ ನಾಡು ಬಹುದೊಡ್ಡ ಪರಂಪರೆ ಹೊಂದಿದೆ. ಸಾವಿರಾರು ಭಾಷೆ, ನೂರಾರು ಸಂಸ್ಕೃತಿ ಹೊಂದಿದ್ದರೂ ನಾವೆಲ್ಲ ಒಂದು ಎಂಬ ಭಾವೈಕ್ಯ ಹಾಗೂ ಸಾಮರಸ್ಯದ ಬದುಕು ಕಾಣಬಹುದು. ವಿದ್ವಾಂಸರು, ಜ್ಞಾನಪೀಠ ಪುರಸ್ಕೃತರು, ವೈಚಾರಿಕ ಮನಸ್ಸುಳ್ಳವರು ನಾಡಿನ ಸಂಸ್ಕೃತಿ ಉಳುವಿಗೆ ನೀಡಿದ ಕೊಡುಗೆ ಅಪಾರ ಎಂದರು.
ಮುಮ್ಮಿಗಟ್ಟಿ ಗ್ರಾಪಂ ಅಧ್ಯಕ್ಷ ವಿಠ್ಠಲ ಭಟ್ಟಂಗಿ, ಬಿಇಒಗಳಾದ ಗಿರೀಶ ಪದಕಿ, ಉಮೇಶ ಬೊಮ್ಮಕ್ಕನವರ, ದಶರಥ ದೇಸಾಯಿ, ಎ.ಎಸ್. ದೇಸಾಯಿ, ಮೋಹನ ಸಿದ್ಧಾಂತಿ, ಸವಿತಾ ಅಮರಶೆಟ್ಟಿ, ರಮೇಶ ಪಾಟೀಲ, ಸೈಯದ್ ಎ.ಎಂ., ರಮೇಶಗೌಡ ಪಾಟೀಲ, ಎಲ್.ಐ. ಲಕ್ಕಮ್ಮನವರ, ರಾಜಶೇಖರ ಹೊನ್ನಪ್ಪನವರ, ಎಸ್.ಎಫ್. ಸಿದ್ದನಗೌಡ್ರ, ಮಾರ್ತಾಂಡಪ್ಪ ಕತ್ತಿ, ಎಫ್.ಬಿ. ಕಣವಿ, ಪ್ರೊ. ಕೆ.ಎಸ್. ಕೌಜಲಗಿ, ಗ್ರಾಪಂ ಸದಸ್ಯರು, ಗ್ರಾಮಸ್ಥರು, ಇತರರು ಇದ್ದರು.
ತಾಲೂಕಾಧ್ಯಕ್ಷೆ ಡಾ.ಶರಣಮ್ಮ ಗೋರೆಬಾಳ ಸ್ವಾಗತಿಸಿದರು. ಕಸಾಪ ಜಿಲ್ಲಾಧ್ಯಕ್ಷ ಡಾ.ಲಿಂಗರಾಜ ಅಂಗಡಿ ಆಶಯ ನುಡಿಗಳನ್ನಾಡಿದರು. ಮೇಘಾ ಹುಕ್ಕೇರಿ ನಿರೂಪಿಸಿದರು. ಮಹಾಂತೇಶ ನರೇಗಲ್ಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net