ಗ್ರಾಮೀಣ ಸಂಸ್ಕೃತಿಯೇ ನಮ್ಮ ಮೂಲ: ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅಭಿಮತ

27_HSN_03
Published on

ಹಾಸನ: ಗ್ರಾಮೀಣ ಸಂಸ್ಕೃತಿಯೇ ನಮ್ಮ ಮೂಲ. ಅದನ್ನು ನಾವು ಎಂದೂ ಮರೆಯಬಾರದು ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರು ಹೇಳಿದರು.

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು-ಸ್ವಾಯತ್ತ ವತಿಯಿಂದ ಬುಧವಾರ ಏರ್ಪಡಿಸಿದ್ದ ಜಾನಪದ ಉತ್ಸವ 2025 ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಮೈಸೂರು ಪ್ರಾದೇಶಿಕ ಮಟ್ಟದ ಸಮೂಹ ಜಾನಪದ ನೃತ್ಯ ಸ್ಪರ್ಧೆ ಸಮಾರಂಭ ಹಾಗೂ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಕ್ಯಾಂಟೀನ್ ಡೇಗೆ ಚಾಲನೆ ನೀಡಿ ನಂತರ ಹೊಂಬಾಳೆ ಬಿಡಿಸಿ ದೀಪ ಹಚ್ಚುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಕಠಿಣ ಶ್ರಮವಿದ್ದರೆ ಏನನ್ನಾದರೂ ಸಾಧಿಸಬಹುದು. ಯುವ ಪೀಳಿಗೆ ಸ್ವಾಭಿಮಾನ ಮತ್ತು ಬದ್ಧತೆಯನ್ನು ಇಟ್ಟುಕೊಳ್ಳಬೇಕು. ಕಲಾ ವಿಭಾಗದ ವಿಷಯಗಳನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಕುಗ್ಗಬಾರದು. ಏಕೆಂದರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಕಲಾ ವಿಭಾಗದ ವಿಷಯಗಳಿಂದ ಸಹಾಯವಾಗುತ್ತದೆ ಎಂದರು.

ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಹಲವಾರು ಪ್ರಕರಣಗಳಲ್ಲಿ ಆಸ್ತಿ ವಿವಾದಗಳು ಸೇರಿದಂತೆ ಹಲವಾರು ಪ್ರಕರಣಗಳು ಬರುತ್ತದೆ. ಅದರಲ್ಲಿ ತಂದೆ-ಮಕ್ಕಳ ವಿಚಾರಕ್ಕೆ ಸಂಬಂಧಿತ ಪ್ರಕರಣಗಳನ್ನು ಕಂಡಾಗ ಬೇಸರ ಉಂಟಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅನಕ್ಷರಸ್ಥರ ಪ್ರಮಾಣ ಕಡಿಮೆ ಇದೆ. ಶೈಕ್ಷಣಿಕ ಇಲಾಖೆಗಳು ಓದದವರನ್ನು ಕರೆ ತಂದು ಶಿಕ್ಷಣ ನೀಡುವ ಕೆಲಸ ಮಾಡುತ್ತಿದೆ. ಹೊಣೆಗಾರಿಕೆಯನ್ನು ಅರಿತು ಎಲ್ಲರೂ ಜೀವನ ನಡೆಸಬೇಕು. ಗುರುಗಳಿಗೆ ಗೌರವ ನೀಡುವ ಪ್ರವೃತ್ತಿಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ದೇವಾನಂದ ವರಪ್ರಸಾದ್ ಅವರು ಮಾತನಾಡಿ, ವಿದ್ಯಾರ್ಥಿಗಳು ಇಂದು ಮೊಬೈಲ್‌ನ ದಾಸರಾಗುತ್ತಿದ್ದಾರೆ. ಜೀವನದ ಉತ್ಸಾಹವನ್ನು ಕಳೆದುಕೊಳ್ಳುತ್ತಿದ್ದಾರೆ. ನಾಲ್ಕು ಗೋಡೆ ಮಧ್ಯದಲ್ಲಿನ ಶಿಕ್ಷಣ ಕೇವಲ ಅಂಕಗಳಿಗೆ ಸೀಮಿತವಾಗಿದೆ. ಇಂದು ಗ್ರಾಮೀಣ ಸೊಗಡನ್ನು ಬಿಂಬಿಸುವ ವಿಚಾರಗಳು ವಿದ್ಯಾರ್ಥಿಗಳಿಗೆ ಮುಟ್ಟಬೇಕು. ಹಲವಾರು ಸಂಸ್ಕೃತಿಗಳ ಮೂಲ ಜಾನಪದ ಎಂದು ಹೇಳಿದರು.

ಪ್ರಾಂಶುಪಾಲರಾದ ಡಾ.ಎಂ.ಬಿ. ಇರ್ಷಾದ್ ಮಾತನಾಡಿ ಸಂಸ್ಕೃತಿ ನಮ್ಮೆಲ್ಲರಿಗೂ ಗ್ರಾಮೀಣ ಸೊಗಡನ್ನು ಪದೇಪದೆ ನೆನಪಿಸುತ್ತದೆ. ನಮ್ಮ ಆಚಾರ ವಿಚಾರ ನಡೆ-ನುಡಿ ಉಡುಗೆ- ತೊಡುಗೆಗಳು ಇಂದು ಪಾಶ್ಚಾತ್ಯೀಕರಣವಾಗಿದೆ. ಇದು ಬೇಸರದ ವಿಚಾರ ಎಂದರು.

ಸಂಸ್ಕೃತಿಕ ವೇದಿಕೆ ಸಂಚಾಲಕರಾದ ಡಾ. ಪಿ.ಆರ್. ಶಾಂತಾ ಅವರು ಮಾತನಾಡಿ, ಪ್ರತಿನಿತ್ಯ ತುರ್ತಿನಲ್ಲಿ ಜೀವನ ನಡೆಸುವಂತಾಗಿದೆ. ಆ ತುರ್ತಿನ ನಡುವೆಯೂ ಈ ರೀತಿಯ ಉತ್ಸವಗಳು ಜಾನಪದ ಸೊಗಡನ್ನು ಪ್ರತಿಬಿಂಬಿಸುತ್ತವೆ. ಶಾಂತಿಯುತ ಜೀವನ ನಡೆಸಬೇಕೆಂದರೆ ಜಾನಪದ ಸೊಗಡನ್ನು ಬೆಳೆಸಬೇಕು, ಉಳಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ವಿಧ ವಿಧವಾದ ದೇಸೀ ಆಹಾರ ಪದ್ಧತಿಯ ಆಹಾರವನ್ನು ತಂದು ವ್ಯಾಪಾರ ಮಾಡುವ ಮೂಲಕ ವಿದ್ಯಾರ್ಥಿಗಳು ಗಮನ ಸೆಳೆದರು.

ಕಾರ್ಯಕ್ರದಲ್ಲಿ ಕಾಲೇಜಿನ ಶೈಕ್ಷಣಿಕ ಡೀನ್ ಡಿ.ಎಸ್.ರಾಜು, ಪರೀಕ್ಷಾ ನಿಯಂತ್ರಕರಾದ ಡಾ. ಕೆ.ಡಿ.ಮುರಳೀಧರ, ಪತ್ರಾಂಕಿತ ವ್ಯವಸ್ಥಾಪಕರಾದ ಕೆ.ಟಿ. ಸತ್ಯಮೂರ್ತಿ, ವಾರ್ತಾಧಿಕಾರಿ ಮೀನಾಕ್ಷಮ್ಮ, ಎಲ್ಲ ವಿಭಾಗದ ಅಧ್ಯಾಪಕರು, ಉಪನ್ಯಾಸಕರು, ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net