

ಔರಾದ್: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಕಲ್ಪನೆಯ ನಮ್ಮ ಗ್ರಾಮ ನಮ್ಮ ಕೆರೆ ಯೋಜನೆ ಗ್ರಾಮೀಣ ಜನರ ಬದುಕಿನ ಚಿತ್ರಣವನ್ನು ಬದಲಿಸುತ್ತಿದೆ. ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಕಲ್ಪವೃಕ್ಷವಾಗಿ ಕೆಲಸ ಮಾಡುತ್ತಿದೆ ಎಂದು ತಾಪಂ ಇಒ ಮಾಣಿಕರಾವ ಪಾಟೀಲ್ ಹೇಳಿದರು.
ತಾಲೂಕಿನ ಖಾನಾಪುರ ಗ್ರಾಮದಲ್ಲಿ ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಹಾಗೂ ವಡಗಾಂವ ಗ್ರಾಪಂನಿಂದ ನಮ್ಮ ಗ್ರಾಮ ನಮ್ಮ ಕೆರೆ ಜೀರ್ಣೋದ್ಧಾರಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಧರ್ಮಸ್ಥಳ ಯೋಜನೆಯಿಂದ ನೀಡಲಾಗುವ ಹಣದ ಜತೆಗೆ ಸ್ಥಳೀಯ ಗ್ರಾಪಂ ಸಹಯೋಗದ ಅನುದಾನದಿಂದ ಕೆರೆಯನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಇದರಿಂದ ಗ್ರಾಮದ ಜನರಿಗೆ ನೀರಿನ ಕೊರತೆ ನೀಗಿಸಿ, ಸದಾಕಾಲ ಹಚ್ಚಹಸಿರಿನಿಂದ ಗ್ರಾಮ ಕಂಗೊಳಿಸುವಂತೆ ಮಾಡಲಾಗುತ್ತಿದೆ. ಈ ಯೋಜನೆಗೆ ಸ್ಥಳೀಯರು ಸಹಕಾರ ನೀಡಬೇಕು ಎಂದರು.
ಎಸ್.ಕೆ.ಡಿ.ಆರ್.ಪಿ. ಯೋಜನೆ ಕಲಬುರಗಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಶಿವರಾಯ ಪ್ರಭು ಮಾತನಾಡಿ, ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಕೆರೆ ಹೂಳೆತ್ತಿ ಅವುಗಳಿಗೆ ಮರುಜೀವ ನೀಡಿ ಊರಿನವರಿಗೆ ವರ್ಗಾಯಿಸಲಾಗುತ್ತದೆ. ಈ ಮೂಲಕ ಕೆರೆಯ ಮಹತ್ವ, ಸಂರಕ್ಷಣೆ ಬಗ್ಗೆ ಸ್ಥಳೀಯರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಧರ್ಮಸ್ಥಳ ಯೋಜನೆ ತಾಲೂಕಾಧಿಕಾರಿ ಮಾಸ್ತಪ್ಪ ಭೋವಿ ಮಾತನಾಡಿದರು. ಇದಕ್ಕೂ ಮುನ್ನ ಗ್ರಾಮದಲ್ಲಿ ಮಹಿಳೆಯರು ಸರ್ಕಾರಿ ಶಾಲೆ ಆವರಣದಿಂದ ಗ್ರಾಮದ ಹೊರವಲಯದಲ್ಲಿರುವ ಕೆರೆಯ ತನಕ ತಲೆಯ ಮೇಲೆ ತುಂಬಿದ ಕಳಸ ಹೊತ್ತು ಮೆರವಣಿಗೆ ಮೂಲಕ ಅತಿಥಿಗಳನ್ನು ಬರಮಾಡಿಕೊಂಡರು.
ಧರ್ಮಸ್ಥಳ ಜಿಲ್ಲಾ ಯೋಜನಾಧಿಕಾರಿ ಉಮರ್ ರಬ್, ಪಿಡಿಒ ಅನೀಲಕುಮಾರ ಚಿಟ್ಟಾ, ಮುಖ್ಯಗುರು ದಯಾನಂದ, ವೈಜಿನಾಥ, ರಮೇಶ ಮೋರ್ಗಿ, ಜಲೀಲ್ ಸಾಬ್, ಬಸವರಾಜ ಪಾಟೀಲ್, ಶಂಕ್ರಯ್ಯಾ ಸ್ವಾಮಿ, ದಯಾನಂದ, ಗೌತಮ, ಮಲ್ಲಿಕಾರ್ಜುನ ಕೇಸರಿ, ಪ್ರಹ್ಲಾದ ಇಟಗ್ಯಾಳೆ, ಅಮರ್, ಲೋಕೇಶ ಇತರರಿದ್ದರು.
ಅಂತರ್ಜಲ ಮಟ್ಟ ಕುಸಿತದ ಗಂಭೀರ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಅವರು 2016ರಲ್ಲಿ ನಮ್ಮೂರು ನಮ್ಮ ಕೆರೆ ಯೋಜನೆ ಪ್ರಾರಂಭಿಸಿದ್ದಾರೆ. ಇದರಿಂದ ಬತ್ತಿದ ಕೆರೆಗಳು ಮತ್ತೆ ಜೀವ ಕಳೆ ಪಡೆಯುತ್ತಿವೆ.| ಶಿವರಾಯ ಪ್ರಭುಎಸ್.ಕೆ.ಡಿ.ಆರ್.ಪಿ. ಪ್ರಾದೇಶಿಕ ನಿರ್ದೇಶಕ