ಗ್ರಾಮೀಣ ರಸ್ತೆಗಳು ಗುಂಡಿಮಯ

Published on

ಳಂದೂರು: ಹಲವು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ಗ್ರಾಮೀಣ ಪ್ರದೇಶದ ರಸ್ತೆಗಳೂ ಸೇರಿದಂತೆ ಜಮೀನಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿ ದೊಡ್ಡ ಹೊಂಡಗಳು ನಿರ್ಮಾಣವಾಗಿದ್ದರೂ ಅಗತ್ಯ ಕ್ರಮ ಕೈಗೊಳ್ಳದ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ವಿರುದ್ಧ ಸ್ಥಳೀಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಚಾಮರಾಜನಗರ ತಾಲೂಕಿನ ಇರಸವಾಡಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಿಂದ ರೈತರ ಜಮೀನಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗವಾಗದ ಯರಗಂಬಳ್ಳಿ, ಗಂಗವಾಡಿ, ದಾಸನಹುಂಡಿ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಹಲವು ವರ್ಷಗಳಿಂದ ಅಧ್ವಾನಗೊಂಡು, ರೈತರು ಸಂಕಷ್ಟ ಪರಿಸ್ಥಿತಿ ಅನುಭವಿಸುತ್ತಿದ್ದರೂ ಇದುವರಿಗೂ ದುರಸ್ತಿಗೆ ಮುಂದಾಗಿಲ್ಲ. ಹಲವು ವರ್ಷದ ಹಿಂದೆ ಅಧಿಕಾರಿಗಳು ರಸ್ತೆಗೆ ಜಲ್ಲಿ, ಮಣ್ಣು ಹಾಕಿ ಸಂಚಾರಕ್ಕೆ ಅನುಕೂಲ ಕಲ್ಪಿಸಿದ್ದು ಬಿಟ್ಟರೆ ಮತ್ತೆ ಇತ್ತ ತಲೆಹಾಕದ ಕಾರಣ, ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಮತ್ತೆ ರಸ್ತೆಗಳು ಗುಂಡಿಮಯವಾಗಿವೆ.


ಫಸಲುಗಳು ಸಾಗಿಸಲು ಕಷ್ಟ : ಕಳೆದ ಹಲವು ದಿನದಿಂದ ಸುರಿದ ಮಳೆಯಿಂದ ರಸ್ತೆಯು ಕೆಸರು ಗದ್ದೆಯಂತಾಗಿದ್ದು, ನಾಲೆಯ ನೀರು ರಸ್ತೆಯುದ್ದಕ್ಕೂ ಹರಿಯುತ್ತಿದೆ. ಇದರಿಂದ ಆಳೆತ್ತರದ ಗುಂಡಿಗಳು ಬಿದ್ದು, ಸಂಚಾರಕ್ಕೂ ತೊಂದರೆಯಾಗಿದೆ. ಈ ಮಾರ್ಗದ ರಸ್ತೆಯಲ್ಲೇ ರೈತರು ಕಬ್ಬು, ಭತ್ತ, ರಾಗಿ ಬೆಳೆಗಳನ್ನು ಸಾಗಿಸಬೇಕಿರುವುದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸುವಂತೆ ರೈತರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net