ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಪ್ರಗತಿ ಪಥ

04Rajesh4
Published on

ಚಾಮರಾಜನಗರ: ಗಡಿಜಿಲ್ಲೆಯ ಗ್ರಾಮೀಣ ಭಾಗದ ಹಳ್ಳ ಹಿಡಿದ ರಸ್ತೆಗಳಲ್ಲಿ ಕೆಲವು ರಸ್ತೆಗಳು ಶೀಘ್ರದಲ್ಲೇ ‘ಪ್ರಗತಿ ಪಥ’ಗಳಾಗಿ ಬದಲಾಗಲಿವೆ.

2024-25ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ೋಷಣೆ ಮಾಡಿದ್ದ ಪ್ರಗತಿ ಪಥ ಯೋಜನೆಯಡಿ ಗ್ರಾಮೀಣ ರಸ್ತೆ ಜಾಲವನ್ನು ಸುಧಾರಿಸಲು ಗುರಿಯನ್ನು ಹೊಂದಲಾಗಿದೆ. ಇದು ವಿನೂತನ ಯೋಜನೆಯಾಗಿದ್ದು, ಇದೇ ಮೊದಲ ಬಾರಿಗೆ ಅನುಷ್ಠಾನಗೊಳ್ಳುತ್ತಿದೆ. ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ರಸ್ತೆಯ ಉದ್ದ ಮತ್ತು ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಒಟ್ಟು 205 ಅರ್ಹ ವಿಧಾನಸಭಾ ಕ್ಷೇತ್ರಗಳಲ್ಲಿ 5400 ಕಿ.ಮೀ ಉದ್ದದ ರಸ್ತೆಯನ್ನು 3936 ರೂ.ಮೊತ್ತದಲ್ಲಿ ಅಭಿವೃದ್ಧಿ ಪಡಿಸಲು ಅನುಮೋದನೆ ನೀಡಲಾಗಿದೆ. ಪ್ರಗತಿ ಪಥ ಯೋಜನೆಯಡಿ ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ ಅನುದಾನ ಸಿಕ್ಕಿದೆ.

4 ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಕೆ: ಪ್ರಗತಿ ಪಥ ಯೋಜನೆಯಡಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ರಸ್ತೆ ಅಭಿವೃದ್ಧಿಯಾಗಲಿವೆ. ಚಾಮರಾಜನಗರ, ಗುಂಡ್ಲುಪೇಟೆ, ಹನೂರು, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಗಳಲ್ಲಿ ಇಂತಿಷ್ಟು ಕಿಲೋ ಮೀಟರ್‌ಗೆ ಅನುದಾನ ನಿಗದಿ ಮಾಡಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾತ್‌ರಾಜ್ ಇಲಾಖೆ (ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆ ವಿಭಾಗ) ವ್ಯಾಪ್ತಿಯಲ್ಲಿರುವ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಒಟ್ಟು 876.07 ಕಿ.ಮೀ ಇದ್ದು, ಇದರಲ್ಲಿ 30 ಕಿ.ಮೀ ಅಭಿವೃದ್ಧಿಗೆ 21.87 ಕೋಟಿ ರೂ.ಅನುದಾನ ನಿಗದಿಯಾಗಿದೆ. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಒಟ್ಟು 1329.40 ಕಿ.ಮೀ ಇದ್ದು, ಇದರಲ್ಲಿ 30 ಕಿ.ಮೀ ಅಭಿವೃದ್ಧಿಗೆ 21.87 ಕೋಟಿ ರೂ., ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಒಟ್ಟು 1347.14 ಕಿ.ಮೀ ಇದ್ದು, 22 ಕಿ.ಮೀ ಅಭಿವೃದ್ಧಿಗೆ 16.04 ಕೋಟಿ ರೂ., ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 771.14 ಕಿ.ಮೀ ಇದ್ದು, 30 ಕಿ.ಮೀ ಅಭಿವೃದ್ಧಿಗೆ 21.87 ಕೋಟಿ ರೂ. ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ 112 ಕಿ.ಮೀಗೆ 81.64 ಕೋಟಿ ರೂ. ಅನುದಾನ ನಿಗದಿಯಾಗಿದೆ.

ಶಾಸಕರ ಸೂಚಿಸಿದ ರಸ್ತೆಗೆ ಹಣ: ಪ್ರಗತಿ ಪಥ ಯೋಜನೆಯಡಿ ಸಿಕ್ಕಿರುವ ಅನುದಾನವನ್ನು ಆಯಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಶಾಸಕರ ಸೂಚನೆಯಂತೆ ರಸ್ತೆಗಳಿಗೆ ಹಾಕಲಾಗುತ್ತದೆ. ಅಂದರೆ ಶಾಸಕರು ಸೂಚಿಸುವ ರಸ್ತೆಗಳಿಗೆ ಅನುದಾನ ಹಂಚಿಕೆಯಾಗಲಿದೆ. ಬಳಿಕ ಟೆಂಡರ್ ಕರೆದು ರಸ್ತೆ ಅಭಿವೃದ್ಧಿ ಕಾರ್ಯ ಶುರುವಾಗಲಿದೆ. ಕನಿಷ್ಠ 1.5 ಕಿ.ಮೀ ಗಿಂತ ಹೆಚ್ಚಿನ ರಸ್ತೆಗಳ ಅಭಿವೃದ್ಧಿಗೆ ಅನುದಾನ ಸಿಗುತ್ತದೆ.

ಅಭಿವೃದ್ಧಿಗೆ ಕಾಯುತ್ತಿರುವ ರಸ್ತೆಗಳು: ಜಿಲ್ಲೆಯ ಗ್ರಾಮೀಣ ಭಾಗದ ರಸ್ತೆಗಳು ಅಭಿವೃದ್ಧಿ ಕಾಣದೆ ಉಳಿದುಬಿಟ್ಟಿವೆ. ಹಳ್ಳಕೊಳ್ಳಗಳಿಂದ ಕೂಡಿರುವ ಮಾರ್ಗದಲ್ಲಿ ವಾಹನ ಸವಾರರು ಪ್ರತಿದಿನವೂ ನಿತ್ಯ ನರಕ ಅನುಭವಿಸುತ್ತಿದ್ದಾರೆ. ಮಳೆ ಬಂದ ಸಂದರ್ಭದಲ್ಲಿ ನೀರು ತುಂಬಿಕೊಂಡು ಕೆಸರುಮಯವಾಗುತ್ತದೆ. ದೊಡ್ಡ ಗುಂಡಿಗಳಲ್ಲಿ ನೀರು ನಿಂತು ಪ್ರಾಣಕ್ಕೆ ಅಪಾಯವನ್ನು ತಂದೊಡ್ಡುತ್ತಿವೆ. ರಸ್ತೆಯ ಅಕ್ಕ-ಪಕ್ಕದಲ್ಲಿ ಜಾಲಿ ಮುಳ್ಳು ಬೆಳೆದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ರಸ್ತೆಯೂ ಸುರಕ್ಷಿತವಾಗಿ ಇಲ್ಲದ ಕಾರಣ ಅಪಘಾತಕ್ಕೆ ಆಹ್ವಾನ ನೀಡುತ್ತಿವೆ. ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳು ಉತ್ತಮವಾಗಿವೆ. ಗ್ರಾಮೀಣ ಭಾಗದ ರಸ್ತೆಗಳು ಕೆಲವು ಕಡೆಗಳಲ್ಲಿ ಉತ್ತಮವಾಗಿವೆ. ಕಾಡಂಚಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಡಾಂಬರು ಕಾಣದೆ ಇವೆ. ಪ್ರಗತಿ ಪಥ ಯೋಜನೆಯಡಿ ಬೇರೆ ಜಿಲ್ಲೆಗೆ ಕೊಟ್ಟಿರುವ ಅನುದಾನಕ್ಕಿಂತಲೂ ಗಡಿಜಿಲ್ಲೆ ಚಾಮರಾಜನಗರಕ್ಕೆ ಹೆಚ್ಚಿಗೆ ಅನುದಾನ ಸಿಕ್ಕಿದ್ದರೆ ಗ್ರಾಮೀಣ ರಸ್ತೆಗಳು ಸುಧಾರಿಸಲು ಸಾಧ್ಯವಾಗುತ್ತಿತ್ತು. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಹನೂರಿಗೆ ಪ್ರಗತಿ ಪಥ ಯೋಜನೆಯಡಿ ರಸ್ತೆ ಅಭಿವೃದ್ಧಿಗೆ ಅನುದಾನ ಕಡಿಮೆ ಸಿಕ್ಕಿದೆ. ಈ ರೀತಿ ಆಗುವ ಬದಲು ಎಲ್ಲ ಕ್ಷೇತ್ರಗಳಿಗೂ ಹೆಚ್ಚಿಗೆ ಮತ್ತು ಸಮಾನವಾಗಿ ಅನುದಾನ ನಿಗದಿಯಾಗಬೇಕಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ.

ಪ್ರಗತಿ ಪಥ ಯೋಜನೆಯಡಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ರಸ್ತೆ ಅಭಿವೃದ್ಧಿಗೆ ಅನುದಾನ ನಿಗದಿಯಾಗಿದೆ. ಇಲಾಖೆಯ ನಿಯಮಾವಳಿ ಪ್ರಕಾರ ಮತ್ತು ಆಯಾ ಕ್ಷೇತ್ರಗಳ ಶಾಸಕರೊಂದಿಗೆ ಚರ್ಚೆ ನಡೆಸಿ ಅಂತಿಮಗೊಳಿಸಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಲಾವಣ್ಯ, ಎಇಇ, ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆ ಉಪ ವಿಭಾಗ ಚಾಮರಾಜನಗರ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಪ್ರಗತಿ ಪಥ ಯೋಜನೆಯಡಿ ಅನುದಾನ ನಿಗದಿ ಮಾಡಿರುವುದು ಸಂತಸದ ವಿಚಾರ. ನಗರ ಮತ್ತು ಪಟ್ಟಣ ಪ್ರದೇಶಗಳ ರಸ್ತೆಗಳ ಅಭಿವೃದ್ಧಿಗೆ ಮಾತ್ರ ದೃಷ್ಟಿ ಹರಿಸದೆ ಗ್ರಾಮೀಣ ಭಾಗದ ಮಾರ್ಗಗಳನ್ನೂ ಪ್ರಗತಿ ಮಾಡುವುದರಿಂದ ಹಳ್ಳಿಗಾಡಿನ ಜನರಿಗೆ ಉತ್ತಮ ರಸ್ತೆ ಸೌಲಭ್ಯ ಸಿಗುತ್ತದೆ. ಈಗಾಗಲೇ ಸುಸ್ಥಿತಿಯಲ್ಲಿರುವ ರಸ್ತೆಗಳ ಮೇಲೆ ಡಾಂಬರು ಹಾಕುವಂತಾಗಬಾರದು. ಅಭಿವೃದ್ಧಿಗಾಗಿ ಅರ್ಹ ರಸ್ತೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಪ್ರಶಾಂತ್ ನಾಗವಳ್ಳಿ, ಗ್ರಾಮ ಪಂಚಾಯಿತಿ ಸದಸ್ಯ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net