

ಚಿತ್ತಾಪುರ: ಗ್ರಾಮೀಣ ಭಾಗದ ಮಹಿಳೆಯರು ಕೇವಲ ಅಡುಗೆಗೆ ಸೀಮಿತವಾಗದೆ, ಸ್ವಂತ ಉದ್ಯಮ ಸ್ಥಾಪಿಸುವ ಮೂಲಕ ಸ್ವಾವಲಂಬಿ ಗಳಾಗಬೇಕು ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ ಕರೆ ನೀಡಿದರು.
ಟೆಂಗಳಿಯಲ್ಲಿ 22 ಬೀದಿ ಬದಿ ವ್ಯಾಪಾರಿಗಳಿಗೆ ಸಹಾಯ ಧನದ ಚೆಕ್ ವಿತರಿಸಿದ ಅವರು, ಇದುವರೆಗೆ 16 ಜಿಲ್ಲೆಯ ಫಲಾನುಭವಿಗಳಿಗೆ ಆರ್ಥಿಕ ಸಹಾಯ ಧನದ ಚೆಕ್, ಸ್ವಯಂ ಉದ್ಯೋಗದ ಸಾಲ ಸೌಲಭ್ಯ ನೀಡಲಾಗಿದೆ. ನನ್ನ ಹುಟ್ಟೂರಾದ ಟೆಂಗಳಿಯ ಜನತೆ ನಿಗಮದ ಸೌಲಭ್ಯ ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾದಾಗ ಮಾತ್ರ ನನಗೆ ಖುಷಿ ಆಗುತ್ತದೆ ಎಂದು ಹೇಳಿದರು.
ಜಿಲ್ಲಾ ಸಂಯೋಜಕಿ ಶಾಂತಲಾ ಮಾತನಾಡಿ, ರಾಜ್ಯದಲ್ಲಿ 2.87 ಕೋಟಿ ರೂ. ಸಹಾಯ ಧನದ ಚೆಕ್ ವಿತರಣೆ ಮಾಡಲಾಗಿದೆ. ನಿಗಮದಿಂದ ಮಹಿಳೆಯ ಅಭಿವೃದ್ಧಿಯ ಜತೆಗೆ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಕೆಲಸ ನಡೆಯುತ್ತಿದೆ ಎಂದರು.
ನಿಗಮದ ಅಧಿಕಾರಿ ಎಸ್.ಎನ್. ಹಿರೇಮಠ, ಭೀಮೇಶ್ವರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವೀರೇಂದ್ರ ವಾಲಿ ಮಾತನಾಡಿದರು.
ಪಿಡಿಒ ವಿದ್ಯಾಶ್ರೀ ಸೊಂತ, ಪಿಕೆಜಿಬಿ ಅಧಿಕಾರಿ ಗಾಯತ್ರಿ, ಪ್ರಮುಖರಾದ ಭೀಮರಾವ ಭೇರನ್, ರೇವಶೆಟ್ಟಿ ತುಪ್ಪದ್, ಶರಣಪ್ಪ ತೆಲಗಾಣಿ, ವಿಶ್ವನಾಥ ಚೆಂಗಟಿ, ನಾಗರಾಜ ಮಹಾಗಾಂವ, ರಾಜು ಪಟ್ಟೆದ್, ಫಕೀರಯ್ಯ ಸ್ಥಾವರಮಠ, ಮಂಜುನಾಥ ಭೇರನ್, ಜಯರಾಜ ಮುದಿರಾಜ, ಮಲ್ಲಿಕಾರ್ಜುನ ಬುಳ್ಳಾ, ಅರ್ಜುನ್ ರಾಠೋಡ್, ಮಲ್ಲಿಕಾರ್ಜುನ ಕೇಶ್ವಾರ, ಅಬ್ದುಲ್ ರೌಫ್, ಮಹ್ಮದ್ ಲದಾಫ್, ಗುರಪ್ಪ ಹಡಪದ ಇದ್ದರು.
ಬಸವರಾಜ ಭೈರಿ ನಿರೂಪಣೆ ಮಾಡಿ, ವಂದಿಸಿದರು.