

ಕಡೂರು: ಜಾನಪದ ಸಂಸ್ಕೃತಿಗೆ ಹೊಸ ಮೆರುಗು ನೀಡಲು ಗ್ರಾಮೀಣ ಮಟ್ಟದಲ್ಲಿ ತಾಲೂಕು ಸಮ್ಮೇಳನ ಆಯೋಜನೆಗೊಂಡಿರುವುದು ಶ್ಲಾಘನೀಯ ಎಂದು ಚಿಕ್ಕನಲ್ಲೂರು ಗ್ರಾಪಂ ಮಾಜಿ ಅಧ್ಯಕ್ಷ ಕ್ಷೇತ್ರಪಾಲ ತಿಳಿಸಿದರು.
ಚಿಕ್ಕನಲ್ಲೂರು ಗ್ರಾಮದಲ್ಲಿ ಮೇ 26ರಂದು ಕರ್ನಾಟಕ ಜಾನಪದ ಪರಿಷತ್‌ನಿಂದ ನಡೆಯುವ ಜಾನಪದ ತಾಲೂಕು ಸಮ್ಮೇಳನಕ್ಕೆ ಭಾನುವಾರ ಅಧ್ಯಕ್ಷ ತಿಪ್ಪೇಶ್ ಅವರನ್ನು ಪದಾಧಿಕಾರಿಗಳೊಂದಿಗೆ ಅಧಿಕೃತವಾಗಿ ಆಹ್ವಾನಿಸಿ ಮಾತನಾಡಿದರು.
ನಾಡಿನ ಪ್ರತಿ ಗ್ರಾಮದಲ್ಲೂ ಜಾನಪದ ಸಂಸ್ಕೃತಿ ಕಲೆ, ಸಾಹಿತ್ಯ, ಸಂಗೀತ ಉಳಿಸುವ ನಿಟ್ಟಿನಲ್ಲಿ ಇಂಥ ಜಾನಪದ ಸಮ್ಮೇಳನಗಳು, ತರಬೇತಿ ಶಿಬಿರಗಳು ವೇದಿಕೆಯಲ್ಲಿ ಹೆಚ್ಚು ನಡೆಯಬೇಕು ಎಂದರು.
ಜಾನಪದ ಸಾಹಿತಿ ರಾಜಪ್ಪ ಚಿಕ್ಕನಲ್ಲೂರು ಮಾತನಾಡಿ, ಸಾಹಿತ್ಯ ದಿಗ್ಗಜರ ಸಾಹಿತ್ಯ ಕೃತಿಗಳನ್ನು ಯುವಜನರು ಓದಬೇಕು. ಸಾಹಿತ್ಯದ ಸೊಗಡನ್ನು ಹೆಚ್ಚು ಮೈಗೂಡಿಸಿಕೊಂಡಾಗ ಮುಂದಿನ ಪೀಳಿಗೆಗೂ ಬಳುವಳಿಯಾಗಿ ನೀಡಲು ಸಾಧ್ಯವಾಗಲಿದೆ. ಕನ್ನಡ ಭಾಷೆ ಹೆಮ್ಮರವಾಗಲು ಜನಪದ ಸಾಹಿತ್ಯ ಹೆಚ್ಚು ಪ್ರೇರಣೆ ನೀಡಿದೆ ಎಂದರು.
ಸಮ್ಮೇಳನ ಅಧ್ಯಕ್ಷ ತಿಪ್ಪೇಶ್ ಮಾತನಾಡಿ, 35 ವರ್ಷಗಳ ಕಾಲ ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತಕ್ಕೆ ಸಲ್ಲಿಸಿದ ಸೇವೆಯ ಪರಿಣಾಮ ಸಮ್ಮೇಳನದ ಅಧ್ಯಕ್ಷತೆಯ ಜವಾಬ್ದಾರಿ ನೀಡಿರುವುದು ಸಂತಸ ತಂದಿದೆ ಎಂದರು.
ಗ್ರಾಮದ ಪ್ರೌಢಶಾಲೆ ಮುಖ್ಯಶಿಕ್ಷಕ ಸ್ವಾಮಿ ಮಾತನಾಡಿ, ಭಾರತೀಯ ಸಂಸ್ಕೃತಿಯ ಮೂಲಬೇರು ಜಾನಪದ. ಎಲ್ಲ ವಿಧದ ಸಾಹಿತ್ಯ, ಸಂಗೀತ, ಕಲೆಗಳ ಮೂಲ ಬೇರು ಜಾನಪದವೇ ಆಗಿದೆ. ಇದರಿಂದ ನಾವು ಸ್ವಾಸ್ಥ್ಯಸಮಾಜವನ್ನು ಕಾಣಲು ಸಾಧ್ಯ. ಸಮಾಜದಲ್ಲಿ ಶಾಂತಿ, ಅಹಿಂಸೆ, ಧಾರ್ಮಿಕ ಸಹಿಷ್ಣುತೆ ಕಾಪಾಡಬೇಕಾದರೆ ಜಾನಪದ ಸಂಸ್ಕೃತಿಯ ಮಾರ್ಗದಲ್ಲಿಯೇ ನಡೆಯಬೇಕಿದೆ ಎಂದರು.
ಹಿರೇನಲ್ಲೂರು ಹೋಬಳಿ ಅಧ್ಯಕ್ಷ ಜಯಣ್ಣ, ತಾಲೂಕು ಅಧ್ಯಕ್ಷ ಜಗದೀಶ್ವರಾಚಾರ್, ಡಾ. ಮಾಳೇನಳ್ಳಿ ಬಸಪ್ಪ, ಗ್ರಾಪಂ ಸದಸ್ಯ ಲೋಕನಾಥ್, ಶಿವಕುಮಾರ್, ಮಲಿಯಪ್ಪ, ಪರಮೇಶ್ವರಪ್ಪ, ಮಹೇಶ್ವರಪ್ಪ, ಸಿದ್ದರಾಮಪ್ಪ, ಚಂದ್ರಮ್ಮ, ಸುನೀತಾ, ಗಿರಿಜಾ ವಿಶಾಲಾಕ್ಷಿ ಹಾಗೂ ಗ್ರಾಮಸ್ಥರು ಇದ್ದರು.