ಗ್ರಾಮೀಣ ಭಾಗದಲ್ಲಿ ಮನೆಮನೆಯಲ್ಲೂ ದಸರಾ ಆಚರಣೆ.

IMG-20201026-WA0036
Published on

ವಿಜಯಪುರ: ಚಡಚಣ ತಾಲೂಕಿನ ರೇವತಗಾಂವ ಗ್ರಾಮದಲ್ಲಿ ದಸರಾ ಹಬ್ಬವನ್ನು 9 ದಿನಗಳ ಕಾಲ ಸಡಗರದಿಂದ ಆಚರಿಸಲಾಯಿತು. ದಸರಾದ ಕೊನೆಯ ದಿನವಾದ ಇಂದು ಅಂಬಾಭವಾನಿ ದೇವಿಗೆ ಪೂಜೆ ಮಂಗಳಾರತಿ, ನೈವೇದ್ಯ, ವಿಶೇಷ ಅಲಂಕಾರದೊಂದಿಗೆ ನೆರವೇರಿತು. ಅಲ್ಲದೆ ಬೆಳಗಿನ ಜಾವ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಪೂಜಾರಿ ಮಹಾದೇವ ಶರಣಪ್ಪ ಪೂಜಾರಿಯವರು ನಸುಕಿನ ಜಾವ ಬನ್ನಿಮರಕ್ಕೆ ವಿಶೇಷವಾದ ಪೂಜೆಯನ್ನು ನೆರವೇರಿಸಿ ಬನ್ನಿಯನ್ನು ತಂದು ದೇವಸ್ಥಾನದಲ್ಲಿ ಇಡಲಾಯಿತು. ಸಂಜೆ ಐದು ಗಂಟೆಯ ಸುಮಾರಿಗೆ ದೇವಸ್ಥಾನದಿಂದ ಬನ್ನಿಯನ್ನು ಹಾಗೂ ಪೂಜಾರಿ ಮನೆಯಿಂದ ಶ್ರೀ ರೇವಣಸಿದ್ದೇಶ್ವರ ಪಲ್ಲಕ್ಕಿಯನ್ನು ವಾಲಿಕಾರ ರಕ್ಷಣೆಯಲ್ಲಿ ಗ್ರಾಮದ ಪಾದಗಟ್ಟಿ ಹತ್ತಿರ ತೆಗೆದುಕೊಂಡು ಹೋಗಲಾಯಿತು. ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರು ಹೊಸ ಉಡುಪುಗಳನ್ನು ತೊಟ್ಟು ಬನ್ನಿ ಮುರಿಯಲು ಸೇರಿದ್ದರು. ನಂತರ ಪೂಜಾರಿಯಿಂದ ಬನ್ನಿ ಗೆ ಪೂಜೆಯನ್ನು ಸಲ್ಲಿಸಿ ನಂತರ ಗ್ರಾಮಸ್ಥರೆಲ್ಲರೂ ಪೂಜೆಯ ಬನ್ನಿ ಯನ್ನು ಪಡೆಯಲು ಮುಗಿಬಿದ್ದಿದ್ದರು. ಹೀಗೆ ಪಡೆದ ಪೂಜೆಯ ಬನ್ನಿಯನ್ನು ಗ್ರಾಮಸ್ಥರು ಗ್ರಾಮದ ದೇವರುಗಳಿಗೆ ಬನ್ನಿಯನ್ನು ಮುಡಿಸಿ ದರ್ಶನ ಪಡೆದರು. ಮನೆಯ ಮುಂದೆ ಆರತಿಯನ್ನು ಬೆಳಗಿಸಿಕೊಂಡು ಮನೆಯಲ್ಲಿನ ಜಗಲಿ ಮೇಲೆ ದೇವರಿಗೆ ಅರ್ಪಿಸಿ ತರಗನ್ನು ಹರಿದು ತಿಂದು ನಂತರ ಪರಸ್ಪರ ಬನ್ನಿ ಕೊಡು-ಕೊಳ್ಳುವಿಕೆ ಮೂಲಕ "ನಾವು ನೀವು ಬನ್ನಿ ಕೊಟ್ಟು ಬಂಗಾರದಂಗ ಇರೋಣ" ಎಂದು ಆತ್ಮೀಯ ಮಾತಿನೊಂದಿಗೆ ಬನ್ನಿ ವಿನಿಮಯ ಮಾಡಿಕೊಂಡು ಶುಭಾಶಯ ಕೋರಿದರು. ದುರ್ಗಾಷ್ಠಮೀ ನಿಮಿತ್ತ ಹೋಮ ಹವನವು ದೇವಿಯ ಮುಂದೆ ನೆರವೇರಿಸಲಾಯಿತು. ಈ ವೇಳೆಯಲ್ಲಿ ಕೆಲವರ ಮೈ ಮೇಲೆ ದೇವಿಯು ಅವತರಿಸಿದ್ದು ಕಂಡು ಬಂತು, ಇದೇ ವೇಳೆಯಲ್ಲಿ ಮಕ್ಕಳಿಗೆ ಊಡಿ ತುಂಬುವ ಕಾರ್ಯವು ನೆರವೇರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net