

ತಿ.ನರಸೀಪುರ: ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ತಾಲೂಕಿನ ಗರ್ಗೇಶ್ವರಿ ಗ್ರಾಮದ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ನೂತನ ವೈದ್ಯಾಧಿಕಾರಿಯಾಗಿ ಆಗಮಿಸಿದ ಡಾ.ಬಿ.ವೈ. ಶ್ರೀನಿವಾಸ್ ಅವರನ್ನು ಸೋಮವಾರ ಶ್ರೀ ಮಹರ್ಷಿ ವಾಲ್ಮೀಕಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಆಸ್ಪತ್ರೆ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಮಾತನಾಡಿದ ವೈದ್ಯಾಧಿಕಾರಿ ಶ್ರೀನಿವಾಸ್, ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುವುದು ಅತ್ಯಂತ ತೃಪ್ತಿದಾಯಕ. ಗ್ರಾಮೀಣ ಪ್ರದೇಶದ ಜನರ ಬಾಂಧವ್ಯ ಮತ್ತು ವಿಶ್ವಾಸ ಅವಿಸ್ಮರಣೀಯ. ಗ್ರಾಮೀಣ ಭಾಗದ ಜನರಿಗೆ ಉತ್ತಮ ಸೇವೆ ನೀಡುವುದು ನಮ್ಮ ಧ್ಯೇಯವಾಗಿದೆ. ಜನರು ಕೂಡ ನಮ್ಮ ಸೇವೆಯನ್ನು ಉತ್ತಮ ರೀತಿಯಲ್ಲಿ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಜೆಡಿಎಸ್ ರಾಜ್ಯ ಮಾಧ್ಯಮ ವಕ್ತಾರ ಹಾಗೂ ರಾಜ್ಯ ವಾಲ್ಮೀಕಿ ನಾಯಕ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ತಾಯೂರು ಪ್ರಕಾಶ್ ಮಾತನಾಡಿ, ‘ವೈದ್ಯೋ ನಾರಾಯಣ ಹರಿಃ’ ಎಂಬಂತೆ ವೈದ್ಯರು ರೋಗಿಗಳಿಗೆ ದೈವ ಸ್ವರೂಪ. ವೈದ್ಯರು ತಮ್ಮ ವೃತ್ತಿಯನ್ನು ಸೇವೆ ಎಂದು ಪರಿಗಣಿಸಿ ರೋಗಿಗಳ ಸಮಸ್ಯೆಗಳನ್ನು ಅರಿತು ಸಂಯಮದಿಂದ ಚಿಕಿತ್ಸೆ ನೀಡಿದರೆ ರೋಗಿಗಳ ಮನಸಲ್ಲಿ ಸದಾ ಉಳಿಯುತ್ತಾರೆ ಎಂದರು.
ಶ್ರೀ ಮಹರ್ಷಿ ವಾಲ್ಮೀಕಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಹೇಶ್ ನಾಯಕ್, ಯಜಮಾನರಾದ ಯಡದೊರೆ ದೇವರಾಜು, ಶಿವಣ್ಣ, ಆಸ್ಪತ್ರೆ ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ದಿನೇಶ್ ಕುಮಾರ್, ಎಸ್‌ಡಿಸಿ ಎಂ.ಪಿ. ವಿನೋದ್, ಪ್ರಯೋಗಾಲಯದ ತಾಂತ್ರಿಕಾಧಿಕಾರಿ ನಸೀಮಾ ಅಕ್ತರ್, ಹಿರಿಯ ಫಾರ್ಮಸಿ ಅಧಿಕಾರಿ ಇಫತ್ ಬೇಗಮ್ , ಸುರಕ್ಷಾಧಿಕಾರಿ ಸರಸ್ವತಿ, ಸಮುದಾಯ ಆರೋಗ್ಯಾಧಿಕಾರಿ ಎಸ್.ಎಸ್.ಶಾಹಿನಾ, ಸಿಬ್ಬಂದಿ ದೇವರಾಜ್, ಮಂಜುನಾಥ್, ಅನಿಲ್ ಹಾಗೂ ಇತರರಿದ್ದರು.