ಗ್ರಾಮೀಣ ಭಾಗಕ್ಕೆ ಮತ್ತಷ್ಟು ಸಾರಿಗೆ ಸೇವೆ ಕಲ್ಪಿಸಿ

28rajesh1
Published on

ಚಾಮರಾಜನಗರ: ಜಿಲ್ಲೆಯ ವಿದ್ಯಾರ್ಥಿಗಳು, ಗ್ರಾಮೀಣ ಪ್ರದೇಶದ ಜನರ ಅನುಕೂಲಕ್ಕೆ ತಕ್ಕಂತೆ ಬಸ್ಸುಗಳ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಎಚ್.ವಿ. ಚಂದ್ರು ಅವರು ಹೇಳಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆಡಿಪಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರ ಸಮ್ಮುಖದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷ ಎಚ್.ವಿ. ಚಂದ್ರು ಅವರು ಗ್ಯಾರಂಟಿ ಯೋಜನೆಗಳ ಪ್ರಗತಿಯನ್ನು ವಿವರವಾಗಿ ಪರಿಶಿಲಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ ಸಾಕಷ್ಟು ಸಂಖ್ಯೆಯಲಿ ಜನರು ಪ್ರಯೋಜನ ಪಡೆಯುತ್ತಿದ್ದಾರೆ. ಕೆಲವೆಡೆ ಕೊರತೆಯಿರುವ ಮಾರ್ಗಗಳಲ್ಲಿ ಬಸ್ಸುಗಳ ಕಾರ್ಯಾಚರಣೆ ಹೆಚ್ಚಾಗಿ ಆಗಬೇಕು. ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಅನುಕೂಲವಾಗುವಂತೆ ಸಾರಿಗೆ ಬಸ್‌ಗಳನ್ನು ಕಲ್ಪಿಸಬೇಕಿದೆ. ಗ್ಯಾರಂಟಿ ಯೋಜನೆಗಳ ಪೈಕಿ ಪ್ರಮುಖವಾದ ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳು ನೊಂದಣಿಯಾಗಬೇಕಿದ್ದಲ್ಲಿ ಕೂಡಲೇ ಅವರಿಗೆ ನೆರವಾಗಿ ಯೋಜನೆ ಪ್ರಯೋಜನ ತಲುಪಿಸಬೇಕು. ಇ-ಕೆವೈಸಿ ಬಾಕಿ ಇದ್ದಲ್ಲಿ ತ್ವರಿತವಾಗಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಯೋಜನೆಯಡಿ ಅರ್ಹರೆಲ್ಲರು ಸೌಲಭ್ಯ ಪಡೆಯಬೇಕು ಎಂದರು.

ಅನ್ನಭಾಗ್ಯ ಯೋಜನೆಯಡಿ ಸೌಲಭ್ಯಗಳು ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪಬೇಕು. ಪಡಿತರ ಚೀಟಿಗಳಲ್ಲಿ ತೊಡಕುಗಳಿದ್ದರೆ ಪರಿಹರಿಸಬೇಕು. ಗೃಹಜ್ಯೋತಿ ಯೋಜನೆಯಡಿ ಬಾಕಿ ಇರುವ ಅರ್ಜಿಗಳನ್ನು ಪರಿಶೀಲಿಸಿ ಯೋಜನೆ ಪ್ರಯೋಜನ ಲಭ್ಯವಾಗಲು ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಯುವನಿಧಿ ಯೋಜನೆಯಡಿ ಅಭ್ಯರ್ಥಿಗಳು ಪ್ರಯೋಜನ ಪಡೆಯಲು ವ್ಯಾಪಕವಾದ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಂಬಂಧ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಹೋಬಳಿಯಲ್ಲಿ ಫಲಾನುಭವಿಗಳ ಅನಿಸಿಕೆ ಆಲಿಸಲು, ಯೋಜನೆ ಪ್ರಗತಿ ಕುರಿತ ಸಂವಾದ ಸಭೆಯನ್ನು ನಡೆಸಲು ಉದ್ದೇಶಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸಮಿತಿಯ ಸದಸ್ಯರು ಹಾಗೂ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಬೇಕು ಎಂದರು.

ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಬಿ.ಪಿ.ನಾಗರಾಜಮೂರ್ತಿ, ರವಿ, ಎನ್.ಸಿದ್ದರಾಜು, ಸದಸ್ಯರಾದ ಸೋಮೇಶ್ವರ, ಕೆ.ಬಿ.ಚಿನ್ನಸ್ವಾಮಿ, ಎಚ್.ಜಿ. ಉಮಾಪತಿ, ಎಂ.ರಾಚಯ್ಯ, ಭಾಗ್ಯ, ಎಚ್.ಎನ್. ಜಯರಾಜು, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ದೀಪಾ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್ ಕುಮಾರ್, ಆಹಾರ ಇಲಾಖೆಯ ಉಪನಿರ್ದೇಶಕ ಯೋಗಾನಂದ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಾರ್ಯಪಾಲಕ ಇಂಜಿನಿಯರ್ ತಬಸುಂ ಅಬ್ಸಾ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net