ಗ್ರಾಮೀಣ ಭಾಗಕ್ಕೆ ಕರೊನಾ ಆತಂಕ ; 1171 ಜನರು ಜನರಿಗೆ ಸೋಂಕು ;ಜಿಲ್ಲೆಯಲ್ಲಿ ಆರು ಮಂದಿ ಬಲಿ

29TMK_CURFEW 2
Published on

ತುಮಕೂರು: ಗ್ರಾಮೀಣ ಭಾಗದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ. ಗುರುವಾರ ಕೂಡ ಸೋಂಕಿತರ ಸಂಖ್ಯೆ ಸಾವಿರದ ಗಡಿದಾಟಿದ್ದು 1171 ಜನರು ಜನರಿಗೆ ಸೋಂಕು ತಗುಲಿದೆ.

ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 976 ಜನರು ಗುಣಮುಖರಾಗಿ ಮನೆಗೆ ವಾಪಸಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 10983ಕ್ಕೇರಿದೆ. 110 ಸೋಂಕಿತರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿರುವ ನಡುವೆಯೇ ಆರು ಸೋಂಕಿತರು ಮೃತಪಟ್ಟಿದ್ದಾರೆ. ಜಿಲ್ಲಾಡಳಿತ ನೀಡುತ್ತಿರುವ ಸಾವಿನ ವರದಿಯ ಬಗ್ಗೆ ಸ್ಮಶಾನ ನೋಡಿರುವ ಸಾರ್ವಜನಿಕರ ಅನುಮಾನ ಮುಂದುವರಿದಿದೆ.

ತುಮಕೂರು ಹಾಗೂ ಶಿರಾ ನಗರದಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗಿದ್ದು, ಜನರು ಕಟ್ಟುನಿಟ್ಟಿನ ಮಾರ್ಗಸೂಚಿ ಪಾಲಿಸಿದರಷ್ಟೇ ಕಡಿಮೆಯಾಗಲು ಸಾಧ್ಯವಿದೆ. ಜಿಲ್ಲೆಯಲ್ಲಿ ಕೆಲವು ಹಳ್ಳಿಗಳಿಗೆ ಸೋಂಕು ಕಾಲಿಟ್ಟಿದ್ದು ಜನರು ಉದಾಸೀನವಾಗಿದ್ದರೆ ಭವಿಷ್ಯದಲ್ಲಿ ದೊಡ್ಡ ಗಂಡಾಂತರ ಎದುರಾಗಲಿದೆ.

ಹಾಗಾಗಿ, ಮಾಸ್ಕ್ ಬಳಸುವ ಜತೆಗೆ ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು. ಗುರುವಾರ ತುಮಕೂರು ತಾಲೂಕು ಹೊದೆಕಲ್ಲು ಗ್ರಾಮದ 38 ವರ್ಷದ ಮಹಿಳೆ, ಕುಣಿಗಲ್ ತಾಲೂಕು ಕಡಸಿಂಗನಹಳ್ಳಿಯ 51 ವರ್ಷದ ವ್ಯಕ್ತಿ, ಕೊರಟಗೆರೆ ತಾಲೂಕು ವೆಂಗಳಮ್ಮನಹಳ್ಳಿಯ 65 ವರ್ಷದ ವೃದ್ಧೆ, ತುಮಕೂರು ತಾಲೂಕು ನಾಗವಲ್ಲಿಯ 60 ವರ್ಷದ ವೃದ್ಧ, ಗೋವಿಂದಘಟ್ಟದ 55 ವರ್ಷದ ವ್ಯಕ್ತಿ ಹಾಗೂ ತುಮಕೂರು ಕುವೆಂಪು ನಗರದ 50 ವರ್ಷದ ಮಹಿಳೆ ಸೋಂಕಿಗೆ ಬಲಿಯಾಗಿದ್ದಾರೆ.

ಸೋಂಕು ಪತ್ತೆಯಾದವರ ಪೈಕಿ 705 ಪುರುಷರು, 466 ಮಹಿಳೆಯರಿದ್ದಾರೆ. ಐದು ವರ್ಷದೊಳಗಿನ 15 ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ 180 ಹಿರಿಯರಿಗೂ ಸೋಂಕು ತಗುಲಿದ್ದು ಸೂಕ್ತ ಚಿಕಿತ್ಸೆಯ ಅವಶ್ಯಕತೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net