ಗ್ರಾಮೀಣ ಭಾಗಕ್ಕೂ ವಕ್ಕರಿಸಿದ ಕರೊನಾ ; ಗುಬ್ಬಿ, ಚಿಕ್ಕನಾಯಕನಹಳ್ಳಿ, ತಿಪಟೂರಲ್ಲಿ ತಲಾ ಒಂದೊಂದು ಕೋವಿಡ್ ಪ್ರಕರಣ

WhatsApp Image 2020-06-19 at 8.58.21 PM
Published on

ತುಮಕೂರು: ತುಮಕೂರು ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಗ್ರಾಮೀಣ ಭಾಗಕ್ಕೂ ಪ್ರವೇಶಿಸಿರುವುದು ಆತಂಕ ಮೂಡಿಸಿದೆ. ಶುಕ್ರವಾರ ಗುಬ್ಬಿ, ಚಿಕ್ಕನಾಯಕನಹಳ್ಳಿ ಹಾಗೂ ತಿಪಟೂರು ನಗರದಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ.

ಗುಬ್ಬಿ ತಾಲೂಕು ಕಿಟ್ಟದಗುಪ್ಪೆಯಲ್ಲಿ 55 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, ಆ ಭಾಗದ ಊರುಗಳಲ್ಲಿ ಜನ ಭಯಭೀತರಾಗಿದ್ದಾರೆ. ಸೋಂಕಿತ ವ್ಯಕ್ತಿ ವೃತ್ತಿಯಲ್ಲಿ ಅಡುಗೆ ಭಟ್ಟನಾಗಿದ್ದು, ಮದುವೆ ಸಮಾರಂಭದಲ್ಲಿಯೂ ಅಡುಗೆ ಮಾಡಿದ್ದರು ಎನ್ನಲಾಗಿದೆ. ಹೃದಯ ಸಂಬಂಧಿ ಸಮಸ್ಯೆ ಕಾರಣಕ್ಕೆ ಜೂ.4ರಂದು ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸಾಗಿದ್ದರು. ನಂತರ ಗುಬ್ಬಿ ಪಟ್ಟಣದ ಖಾಸಗಿ ಕ್ಲಿನಿಕ್‌ನಲ್ಲಿ ಒಂದೆರಡು ಬಾರಿ ಚಿಕಿತ್ಸೆ ಪಡೆದು ಜೂ.14ರಂದು ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ತೆರಳಿದ್ದಾಗ ಗಂಟಲ ದ್ರವ ಮಾದರಿ ಪರೀಕ್ಷೆ ನಡೆಸಿದಾಗ ಸೋಂಕು ದೃಢವಾಗಿದೆ.

ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ 38 ವರ್ಷದ ಮಹಿಳೆಗೆ ಸೋಂಕು ದೃಢವಾಗಿದ್ದು, ಆಕೆಗೆ ಪ್ರಯಾಣದ ಹಿನ್ನೆಲೆ ಇಲ್ಲ. ಸೋಂಕಿತ ಮಹಿಳೆ ಗಾರ್ಮೆಂಟ್ಸ್‌ನಲ್ಲಿ ಕೆಲಸಕ್ಕೆ ಹೋಗಿದ್ದರು ಎನ್ನಲಾಗಿದ್ದು, ಆತಂಕ ಮೂಡಿಸಿದೆ. ಸಾಮಾನ್ಯ ಜ್ವರ, ಶೀತದ ಕಾರಣಕ್ಕೆ ಚಿಕ್ಕನಾಯಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ದಾಖಲಾಗಿ ಜೂ.18ರಂದು ಗಂಟಲು ದ್ರವ ತೆಗೆದುಕೊಂಡು ಪರೀಕ್ಷೆ ನಡೆಸಲಾಗಿದ್ದು, ಸೋಂಕು ದೃಢವಾಗಿದೆ. ಸೋಂಕಿತ ಮಹಿಳೆ ವಾಸವಿರುವ ಪಟ್ಟಣದ ಹೊಸಬೀದಿ ಕಂಟೈನ್ಮೆಂಟ್ ವಲಯವಾಗಿ ಘೋಷಿಸಲಾಗಿದ್ದು, ಆಕೆಯ ಪತಿ ಗಾರೆ ಕೆಲಸ ಮಾಡುತ್ತಿದ್ದ ತಾಲೂಕಿನ ಗೋಡೆಕೆರೆಯಲ್ಲಿಯೂ ಮುಂಜಾಗ್ರತೆ ಕೈಗೊಳ್ಳಲಾಗಿದೆ. ಬೆಂಗಳೂರಿನ ಸ್ನೇಹಿತರೊಬ್ಬರು ಆಗಾಗ್ಗೆ ಅವರ ಮನೆಗೆ ಬಂದು ಹೋಗುತ್ತಿದ್ದರು ಎನ್ನಲಾಗಿದ್ದು, ಅವರನ್ನು ಸಂಪರ್ಕಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ತಿಪಟೂರು ನಗರದಲ್ಲಿಯೂ ಪ್ರಯಾಣದ ಹಿನ್ನೆಲೆ ಇಲ್ಲದ ನಗರದ ಕೋಡಿ ಸರ್ಕಲ್ ಹತ್ತಿರದ ಸದಾಶಿವ ನಗರದ 42 ವರ್ಷದ ಪುರುಷನಿಗೆ ಕರೊನಾ ದೃಢವಾಗಿದ್ದು ನಗರದೆಲ್ಲೆಡೆ ಆತಂಕ ಮೂಡಿಸಿದೆ.

15 ದಿನದ ಹಿಂದೆ ಕರೊನಾ ಶಂಕೆ ಹಿನ್ನೆಲೆಯಲ್ಲಿ ಕ್ವಾರಂಟೈನ್ ಮಾಡಿ, ವರದಿ ನೆಗೆಟಿವ್ ಬಂದು, ಕ್ವಾರಂಟೈನ್ ಅವಧಿ ಶುಕ್ರವಾರಕ್ಕೆ ಮುಗಿದಿದೆ. ಎರಡನೇ ಬಾರಿ ಕಳುಹಿಸಿದ ಸ್ಯಾಂಪಲ್‌ನಲ್ಲಿ ಪಾಸಿಟಿವ್ ಬಂದಿದ್ದು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತ ತಾಲೂಕಿನ ನೆಲ್ಲಿಕೆರೆ ಮೂಲದವರಾಗಿದ್ದು, ಇವರ ಪತ್ನಿ (35) ನಗರದ ಬಂಡಿಹಳ್ಳಿ ಗ್ರಾೃನೈಟ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗುತ್ತಿದೆ. ಶುಕ್ರವಾರದ ಮೂವರು ಸೇರಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತ 13 ಜನರ ಆರೋಗ್ಯ ಸ್ಥಿರವಾಗಿದೆ ಎಂದು ಡಿಎಚ್‌ಒ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.

ವಧು, ವರನೂ ಕ್ವಾರಂಟೈನ್: ಸೋಂಕಿತನಿದ್ದ ಕಿಟ್ಟದಕುಪ್ಪೆ ಗ್ರಾಮ ಕಂಟೇನ್ಮೆಂಟ್ ವಲಯ ಎಂದು ಘೋಷಿಸಲಾಗಿದ್ದು, ಕಡಬ, ಬೆಲವತ್ತ, ಹೊದಲೂರು, ತೊರೇಹಳ್ಳಿ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಗೆ ನಿರ್ಬಂಧವಿದೆ. ಗ್ರಾಮಕ್ಕೆ ಪ್ರವೇಶವಿಲ್ಲದ ಕಾರಣದಿಂದ ಗ್ರಾಮಸ್ಥರಿಗೆ ಅಗತ್ಯ ಸೌಲಭ್ಯ ಹಾಗೂ ರಾಸುಗಳಿಗೆ ಮೇವು, ನೀರಿನ ವ್ಯವಸ್ಥೆ ಮಾಡಲಾಗಿದೆ. ಸೋಂಕಿತನ ಸಂಪರ್ಕದಲ್ಲಿದ್ದ 52 ಜನರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಪತ್ರೆಮತಿಘಟ್ಟ, ಅಡಗೂರು ಹಾಗೂ ಹೆರೂರು ಗ್ರಾಮಗಳಲ್ಲಿ ಸೋಂಕಿತ ಅಡುಗೆ ಮಾಡಿದ್ದ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದವರನ್ನು ಕ್ವಾರಂಟೇನ್‌ಗೆ ಒಳಪಡಿಸಲಾಗಿದೆ. ಹೊಸದಾಗಿ ಮದುವೆಯಾದ ವಧು, ವರ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಿಟ್ಟದಗುಪ್ಪೆಯ ಸೋಂಕಿತ ಸಂಬಂಧಿಕನ ಸಾವು!: ಗುಬ್ಬಿ ತಾಲೂಕು ಕಿಟ್ಟದಗುಪ್ಪೆಯ ಸೋಂಕಿತ ವ್ಯಕ್ತಿಯ ಸಹೋದರ ಸಂಬಂಧಿ ಇತ್ತೀಚೆಗೆ ಸಾವನ್ನಪ್ಪಿದ್ದು, ಸ್ಥಳೀಯರಲ್ಲಿ ಹೆಚ್ಚು ಆತಂಕ ಮೂಡಿಸಿದೆ. ಶವ ಸಂಸ್ಕಾರ ನಡೆಸುವ ಮುಂಚೆ ಕೋವಿಡ್-19 ಪರೀಕ್ಷೆ ನಡೆಸಲಾಗಿದ್ದು, ಈ ಬಗ್ಗೆ ವರದಿ ಬಂದ ನಂತರವಷ್ಟೇ ಜನರ ಆತಂಕ ದೂರವಾಗಲಿದೆ. ಈ ಸಾವಿನ ಬಗ್ಗೆಯೂ ಜನರಲ್ಲಿ ಅನುಮಾನಗಳಿದ್ದು, ತಾಲೂಕು ಆಡಳಿತ ಸ್ಪಷ್ಟನೆ ನೀಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net